Advertisement

ವಿಧಾನಸಭಾ ಚುನಾವಣೆಯತ್ತ ನೋಟ; ಕಾರ್ಯತಂತ್ರ

01:16 AM Apr 13, 2022 | Team Udayavani |

ಮಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಮಂಗಳವಾರ ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಬಿಜೆಪಿ ಪ್ರಮುಖರ ಜತೆ ಮಂಗಳೂರಿನಲ್ಲಿ ಸಂವಾದ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ತಂಡ ಗರಿಷ್ಠ ಸಾಧನೆಯೊಂದಿಗೆ ಮರಳಿ ಆಡಳಿತಕ್ಕೆ ಬರುವ ನಿಟ್ಟಿನಲ್ಲಿ ಪಕ್ಷ ಸಂಘಟನೆ ಹಾಗೂ ಸಿದ್ಧತೆಗಳ ಬಗ್ಗೆ ತಳಮಟ್ಟದಲ್ಲಿ ಕಾರ್ಯತಂತ್ರ ರೂಪಿಸಿದೆ.

Advertisement

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಸಚಿವರಾದ ಬಿ. ಶ್ರೀರಾಮುಲು, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್‌ ಕುಮಾರ್‌, ಪಕ್ಷದ ಪ್ರಮುಖರಾದ ನಿರ್ಮಲ ಕುಮಾರ್‌ ಸುರಾನ, ಲಕ್ಷ್ಮಣ ಸವದಿ, ನಯನಾ ಗಣೇಶ್‌ ಹಾಗೂ ಸಂಯೋಜಕ ವಿನಯ ಬಿದರೆ ಅವರು ಮುಖ್ಯಮಂತ್ರಿಯವರ ತಂಡದಲ್ಲಿದ್ದರು.

ಜಿಲ್ಲಾ ಕೋರ್‌ ಕಮಿಟಿ ಸಭೆಯಲ್ಲಿ ಪಕ್ಷದ ಶಾಸಕರು, ವಿಧಾನಪರಿಷತ್‌ ಸದಸ್ಯರು, ಜಿಲ್ಲಾಧ್ಯಕ್ಷರು ಸೇರಿದಂತೆ ಸದಸ್ಯರಿಗೆ ಮಾತ್ರ ಭಾಗವಹಿಸಲು ಅವಕಾಶವಿತ್ತು. ಜಿಲ್ಲಾ ಪ್ರಮುಖರ ಸಭೆಯಲ್ಲಿ ಜಿಲ್ಲಾ ಸಮಿತಿ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಕೋಷ್ಠಗಳ ಸಂಚಾಲಕರು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಉಡುಪಿ ಜಿಲ್ಲೆಯ ಸಭೆ
ಬೆಳಗ್ಗೆ 10.30ರಿಂದ ನಡೆದ ಉಡುಪಿ ಜಿಲ್ಲೆಯ ಕೋರ್‌ ಕಮಿಟಿಯ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್‌. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸಚಿವ ಸುನಿಲ್‌ ಕುಮಾರ್‌, ಜಿಲ್ಲೆಯ ಬಿಜೆಪಿ ಶಾಸಕರಾದ ರಘುಪತಿ ಭಟ್‌, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ್‌ ಶೆಟ್ಟಿ ಸೇರಿದಂತೆ ಕೋರ್‌ ಕಮಿಟಿಯ ಸದಸ್ಯರು ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ, ಭರತೇಶ್‌ ಭಾಗವಹಿಸಿದ್ದರು. ಬಳಿಕ ಜಿಲ್ಲಾ ಪ್ರಮುಖರ ಸಭೆ ಜರಗಿದ್ದು 67 ಮಂದಿ ಪ್ರಮುಖರು ಭಾಗವಹಿಸಿದ್ದರು.

ಕೊಡಗು ಜಿಲ್ಲೆಯ ಸಭೆ
ಮಧ್ಯಾಹ್ನದ ಬಳಿಕ ಜರಗಿದ ಸಭೆಯಲ್ಲಿ ಕೊಡಗು ಜಿಲ್ಲೆಯ ಕೋರ್‌ ಕಮಿಟಿಯ ಸಭೆಯಲ್ಲಿ ಶಾಸಕರಾದ ಬೋಪಯ್ಯ, ಅಪ್ಪಚ್ಚು ರಂಜನ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್‌ ದೇವಯ್ಯ ಭಾಗವಹಿಸಿದ್ದರು. ಬಳಿಕ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ 51 ಮಂದಿ ಭಾಗವಹಿಸಿದ್ದರು.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಸಭೆ
ಸಂಜೆ ನಡೆದ ದ.ಕ. ಜಿಲ್ಲೆಯ ಕೋರ್‌ ಕಮಿಟಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್‌. ಅಂಗಾರ, ಶಾಸಕರಾದ ಸಂಜೀವ ಮಠಂದೂರು, ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ಹರೀಶ್‌ ಪೂಂಜ, ಪ್ರತಾಪ ಸಿಂಹ ನಾಯಕ್‌, ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡುಬಿದಿರೆ, ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ, ಭರತೇಶ್‌, ಜಿಲ್ಲಾ ಪ್ರಭಾರಿ ರಾಜೇಶ್‌ ಕಾವೇರಿ ಭಾಗವಹಿಸಿದ್ದರು.ಬಳಿಕ ಜಿಲ್ಲಾ ಪ್ರಮುಖರ ಸಭೆ ಜರಗಿದ್ದು 74 ಮಂದಿ ಭಾಗವಹಿಸಿದ್ದರು.

ಇಂದು ಬಂಟ್ವಾಳದಲ್ಲಿ ಸಭೆ
ಬ್ರಹ್ಮರಕೂಟ್ಲುವಿನ ಬಂಟವಾಳ ಬಂಟರ ಭವನದಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ದ.ಕ., ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಬಿಜೆಪಿ ಪದಾಧಿಕಾರಿಗಳ ಸಭೆ ಜರಗಲಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಂಗಳವಾರ ರಾತ್ರಿ ಮಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಬಂಟ್ವಾಳದಲ್ಲಿ ನಡೆಯಲಿರುವ ಸಭೆಯಲ್ಲಿ ಬಿಜೆಪಿ ಶಕ್ತಿಕೇಂದ್ರಗಳ ಪ್ರಮುಖರು, ಮಂಡಲ ಪ್ರಮುಖರು, ಮೋರ್ಚಾ, ಪ್ರಕೋಷ್ಠಗಳ ಪ‌Åಮುಖರು ಭಾಗವಹಿಸಲಿದ್ದಾರೆ.

ಪಕ್ಷ ಇನ್ನಷ್ಟು ಬಲವರ್ಧನೆ ಕ್ರಮ: ಬೊಮ್ಮಾಯಿ
ರಾಜಕೀಯ, ಸಾಮಾಜಿಕ ಸ್ಥಿತಿಗತಿಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಎ. 16 ಮತ್ತು 17ರಂದು ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು ಬೂತ್‌ ಮಟ್ಟದ, ಪೇಜ್‌ಮಟ್ಟ, ಮೋರ್ಚಾ, ಪ್ರಕೋಷ್ಠಗಳ ರಚನೆ ಸೇರಿದಂತೆ ಪಕ್ಷದ ವಿವಿಧ ಜವಾಬ್ದಾರಿಗಳಲ್ಲಿರುವವರಿಗೆ ಪಕ್ಷ ಸಂಘಟನೆಯಲ್ಲಿ ಗುರಿ ನೀಡಲಾಗಿದ್ದು ಇದರ ಬಗ್ಗೆಯೂ ಪರಿಶೀಲನೆ ನಡೆದಿದೆ ಎಂದು ಚುನಾವಣೆ ಸಿದ್ಧತಾ ತಂಡದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next