Advertisement

ದ.ಕ. ಕ್ಷೇತ್ರಕ್ಕಿದು ಮೂರನೇ ಚುನಾವಣೆ!

01:00 AM Mar 20, 2019 | Harsha Rao |

ಮಂಗಳೂರು: ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆಯ ಬಳಿಕ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಇದೀಗ 3ನೇ ಚುನಾವಣೆ ಎದುರಿಸುತ್ತಿದೆ. ಒಟ್ಟಾರೆಯಾಗಿ ಮಂಗಳೂರು ಪ್ರದೇಶಕ್ಕೆ ಇದು 17ನೇ ಮಹಾಚುನಾವಣೆಯಾಗಿದೆ.
1951ರಲ್ಲಿ ಲೋಕಸಭೆಗೆ ಪ್ರಥಮ ಚುನಾವಣೆ ನಡೆದಿದ್ದು ಇದರ ಮತ ಎಣಿಕೆ 1952ರಲ್ಲಿ ನಡೆದಿತ್ತು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಇನ್ನೊಂದು ವಿಶೇಷ ಎಂದರೆ ಇತರ ಜಿಲ್ಲೆಗಳ ಪ್ರದೇಶಗಳನ್ನು ಒಳಗೊಳ್ಳದೆ ಇಡೀ ಜಿಲ್ಲೆ 
ಒಂದು ಲೋಕಸಭೆ ಕ್ಷೇತ್ರವಾಗಿರುವುದು. ಇದು ಕ್ಷೇತ್ರದಲ್ಲಿ ಚುನಾವಣ ಪ್ರಕ್ರಿಯೆಗಳಿಗೂ ಅನುಕೂಲವಾಗಿದೆ.

Advertisement

1951ರಲ್ಲಿ ಈಗಿನ ದಕ್ಷಿಣ ಕನ್ನಡ ಜಿಲ್ಲೆಯ ಬಹುಭಾಗ ಸೇರಿ ಮಂಗಳೂರು ಪ್ರದೇಶ ಮದ್ರಾಸ್‌ ಪ್ರಾಂತ್ರÂದಲ್ಲಿ ಸೇರ್ಪಡೆಯಾಗಿ ಸೌತ್‌ ಕೆನರಾ ಲೋಕಸಭಾ ಕ್ಷೇತ್ರವಾಗಿತ್ತು. ಭಾಷವಾರು ಪ್ರಾಂತ್ಯ ರಚನೆಯ ಬಳಿಕ 1957ರಲ್ಲಿ ಕೊಡಗು ಜಿಲ್ಲೆ ಒಳಗೊಂಡು ಮಂಗಳೂರು ಲೋಕಸಭಾ ಕ್ಷೇತ್ರ ರಚನೆಯಾಯಿತು. ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸೇರಿದಂತೆ ಕೆಲವು ಪ್ರದೇಶಗಳು ಉಡುಪಿ ಲೋಕಸಭಾ ಕ್ಷೇತ್ರಕ್ಕೆ ಹಾಗೂ ಬೆಳ್ತಂಗಡಿ ತಾಲೂಕಿನ ಕೆಲವು ಭಾಗಗಳು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಯಾಗಿದ್ದು ಆಗ ಇಡೀ ಜಿಲ್ಲೆಯನ್ನು ಪರಿಗಣಿಸಿದರೆ ಮೂರು ಸಂಸದರು ಇದ್ದರು. 2009ರ ವರೆಗೆ ಮಂಗಳೂರು ಲೋಕಸಭಾ ಕ್ಷೇತ್ರ ಹೆಸರಿನಲ್ಲಿ ಮುಂದುವರಿಯಿತು. 

2009ರಲ್ಲಿ ಕ್ಷೇತ್ರ ಪುನರ್‌ವಿಂಗಡನೆ ವೇಳೆ ಕೊಡಗು ಜಿಲ್ಲೆಯನ್ನು ಬಿಟ್ಟು ಇಡೀ ದಕ್ಷಿಣ ಕನ್ನಡ ಜಿಲ್ಲೆ ಒಳಗೊಂಡು ಮಂಗಳೂರು ಬದಲಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವಾಗಿ ರೂಪುಗೊಂಡಿತು.

ಸೌತ್‌ ಕೆನರಾದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದವರೆಗೆ ನಡೆದ 16 ಲೋಕಸಭಾ ಚುನಾವಣೆಗಳಲ್ಲಿ 9 ಬಾರಿ ಕಾಂಗ್ರೆಸ್‌ ಹಾಗೂ 7 ಬಾರಿ ಬಿಜೆಪಿ ಜಯಗಳಿಸಿದೆ. 1951ರಿಂದ 1989ರ ವರೆಗೆ ನಿರಂತರವಾಗಿ ಕಾಂಗ್ರೆಸ್‌ ಹಾಗೂ 1991ರಿಂದ 2014ರ ವರೆಗೆ ನಿರಂತರವಾಗಿ ಬಿಜೆಪಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದೆ.

ಕ್ಷೇತ್ರ ಮಹಾತೆ¾
ಈ ಲೋಕ ಸಭಾ ಕ್ಷೇತ್ರ ದಿಂದ ಸ್ಪರ್ಧಿಸಿದ ಅಭ್ಯರ್ಥಿಗಳ ಪೈಕಿ ಡಾ| ವೀರಪ್ಪ ಮೊಲಿ ಹಾಗೂ ಡಿ.ವಿ. ಸದಾನಂದ ಗೌಡ ಅವರು ಕರ್ನಾಟಕದ ಮುಖ್ಯಮಂತ್ರಿ ಪದವಿಗೇರಿದವರು. ಡಾ| ಎಂ. ವೀರಪ್ಪ ಮೊಲಿ ಮಾಜಿ ಮುಖ್ಯಮಂತ್ರಿಯಾಗಿ ಕ್ಷೇತ್ರದಿಂದ ಸ್ಪರ್ಧಿಸಿದ್ದರೆ ಡಿ.ವಿ. ಸದಾನಂದ ಗೌಡ  ಸಂಸತ್ಸದಸ್ಯನಾದ ಬಳಿಕ ಮುಖ್ಯಮಂತ್ರಿಯಾಗಿದ್ದರು. ಜನಾರ್ದನ ಪೂಜಾರಿ ಹಾಗೂ ಬಿ. ಧನಂಜಯ ಕುಮಾರ್‌ ಕೇಂದ್ರ ಸಚಿವರಾಗಿದ್ದರು.

Advertisement

ಪೂಜಾರಿ ಸ್ಪರ್ಧಾ ದಾಖಲೆ
ಸೌತ್‌ಕೆನರಾದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದವರೆಗೆ ನಡೆದಿರುವ ಒಟ್ಟು 16 ಚುನಾವಣೆಗಳಲ್ಲಿ ಗರಿಷ್ಠ ಸ್ಪರ್ಧೆಯ ದಾಖಲೆಯನ್ನು ಬಿ. ಜನಾರ್ದನ ಪೂಜಾರಿ ಅವರು ಹೊಂದಿದ್ದಾರೆ. ಪೂಜಾರಿಯವರು ಒಟ್ಟು 9 ಬಾರಿ ಸ್ಪರ್ಧಿಸಿದ್ದು 4 ಬಾರಿ ಜಯಗಳಿಸಿದ್ದಾರೆ. ಧನಂಜಯ ಕುಮಾರ್‌ ಅವರು 5 ಬಾರಿ ಸ್ಪರ್ಧಿಸಿ 4 ಬಾರಿ ವಿಜಯಿಯಾಗಿದ್ದಾರೆ. ಡಾ| ಎಂ. ವೀರಪ್ಪ ಮೊಲಿ ಎರಡು ಬಾರಿ ಸ್ಪರ್ಧಿಸಿದ್ದಾರೆ. ನಳಿನ್‌ ಕುಮಾರ್‌ ಕಟೀಲು ಎರಡು ಬಾರಿ ಸ್ಪರ್ಧಿಸಿ ಸತತ ಜಯ ಗಳಿಸಿದ್ದಾರೆ.

ಕ್ಷೇತ್ರವನ್ನು ಪ್ರತಿನಿಧಿಸಿದವರು
1951ರಲ್ಲಿ ನಡೆದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಸೌತ್‌ ಕೆನರಾ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಬೆನಗಲ್‌ ಶಿವರಾವ್‌ (ಕಾಂಗ್ರೆಸ್‌) ಅವರು ಸಂಸತ್ಸದಸ್ಯನಾಗಿ ಆಯ್ಕೆಯಾಗಿದ್ದರು. ಮಂಗಳೂರು ಕ್ಷೇತ್ರದಿಂದ 1957ರಲ್ಲಿ ಕೆ.ಆರ್‌. ಆಚಾರ್‌ (ಕಾಂಗ್ರೆಸ್‌), 1962 ಎ. ಶಂಕರ್‌ ಆಳ್ವ (ಕಾಂಗ್ರೆಸ್‌), 1967 ಸಿ.ಎಂ. ಪೂಣಚ್ಚ (ಕಾಂಗ್ರೆಸ್‌), 1971 ಕೆ.ಕೆ. ಶೆಟ್ಟಿ (ಕಾಂಗ್ರೆಸ್‌), 1977 ಬಿ. ಜನಾರ್ದನ ಪೂಜಾರಿ (ಕಾಂಗ್ರೆಸ್‌), 1980 ಬಿ.ಜನಾರ್ದನ ಪೂಜಾರಿ (ಕಾಂಗ್ರೆಸ್‌) , 1984 ಬಿ. ಜನಾರ್ದನ ಪೂಜಾರಿ(ಕಾಂಗ್ರೆಸ್‌), 1989 ಬಿ. ಜನಾರ್ದನ ಪೂಜಾರಿ (ಕಾಂಗ್ರೆಸ್‌), 1991 ಬಿ.ಧನಂಜಯ ಕುಮಾರ್‌ (ಬಿಜೆಪಿ), 1996 ಬಿ. ಧನಂಜಯ ಕುಮಾರ್‌ (ಬಿಜೆಪಿ), 1998 ಬಿ. ಧನಂಜಯ ಕುಮಾರ್‌, (ಬಿಜೆಪಿ), 2004 ಡಿ.ವಿ. ಸದಾನಂದ ಗೌಡ (ಬಿಜೆಪಿ)  ಆಯ್ಕೆಯಾಗಿದ್ದರು. 2009ರಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವಾಗಿ ಪುನರ್‌ವಿಂಗಡನೆಯಾದ ಬಳಿಕ 2009 ಹಾಗೂ 2014ರಲ್ಲಿ ಬಿಜೆಪಿಯ ನಳಿನ್‌ ಕುಮಾರ್‌ ಕಟೀಲು ಅವರು ಈ ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸಿಕೊಂಡು ಬರುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next