ಗಳು ಶನಿವಾರ ಕರೆ ನೀಡಿದ್ದ ದ.ಕ. ಜಿಲ್ಲಾ ಸ್ವಯಂ ಪ್ರೇರಿತ ಹರತಾಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಮಂಗಳೂರು ನಗರದಲ್ಲಿ ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರೆ ಉಳಿದೆಡೆ ವಿರಳವಾಗಿ ಸಂಚಾರ ನಡೆಸಿದ್ದವು. ಸರಕಾರಿ ಬಸ್‌ಗಳ ಸಂಚಾರ ಬೆಳಗ್ಗೆ ಆರಂಭವಾಗಿತ್ತು. ಆದರೆ, ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಕೆಲವು ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಯಿತು.
Advertisement
ಇದರೊಂದಿಗೆ ಟಯರ್ ಹಾಗೂ ವಾಹನಕ್ಕೆ ಬೆಂಕಿ ಹಾಕಿದ ಪ್ರಕರಣಗಳೂ ನಡೆದಿವೆ. ಕೇರಳದತ್ತ ಸಾಗುವ ತಲಪಾಡಿ ಹಾಗೂ ವಿಟ್ಲ ಗಡಿಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
Related Articles
ಮಂಗಳೂರು ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ಕೆಲವು ಖಾಸಗಿ ಹಾಗೂ ಸರಕಾರಿ ಬಸ್‌ಗಳು ಸಂಚಾರ ಆರಂಭಿಸುತ್ತಿದ್ದಂತೆ ಬಸ್‌ಗಳಿಗೆ ಕಲ್ಲುತೂರಾಟ ನಡೆಸಿದ ಘಟನೆ ನಡೆಯಿತು. ಪಂಡಿತ್ ಹೌಸ್, ಕೋಟೆಕಾರ್, ಅಸೈಗೋಳಿ, ದೇರೆಬೈಲ್ ಹಾಗೂ ಪಡೀಲ್‌ನಲ್ಲಿ ದುಷ್ಕರ್ಮಿಗಳು ಟೈರ್‌ಗೆ ಬೆಂಕಿ ಹಾಕಿದ್ದು, ಕಂಕನಾಡಿಯಲ್ಲಿ ಬಸ್ಸಿಗೆ ಕಲ್ಲೆಸೆತ, ಟಯರ್‌ಗೆ ಬೆಂಕಿ, ಕೊಣಾಜೆಯ ಗಣೇಶ್‌ಮಹಲ್ ಕ್ರಾಸ್ ಬಳಿ ಕೆಎಸ್‌ಆರ್‌ಟಿಸಿ ನರ್ಮ್ ಬಸ್‌ಗೆ ಕಲ್ಲೆಸೆತವಾಗಿದೆ. ಪಚ್ಚನಾಡಿಯಲ್ಲಿ 19 ನಂಬರಿನ ಸರಕಾರಿ ನರ್ಮ್ ಬಸ್‌ಗೆ, ತಲಪಾಡಿ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ 3 ಕೆಎಸ್‌ಆರ್‌ಟಿಸಿ ಬಸ್ ಮತ್ತು ಖಾಸಗಿ ಬಸ್ ಹಾಗೂ ಅತ್ತಾವರದಲ್ಲಿ 27 ನಂಬರಿನ ಬಸ್‌ಗೆ ದುಷ್ಕರ್ಮಿಗಳು ಕಲ್ಲೆಸೆದ ಘಟನೆ ವರದಿಯಾಗಿದೆ. ಬಜ್ಪೆ ವ್ಯಾಪ್ತಿಯ ಅಂತೋನಿಕಟ್ಟೆ ಹಾಗೂ ಕರ್ಮರ್‌ನಲ್ಲಿ 47 ನಂಬರ್‌ನ ಕೆಎಸ್‌ಆರ್‌ಟಿಸಿ ನರ್ಮ್ ಬಸ್‌ಗೆ ಕಲ್ಲೆಸೆತವಾಗಿದ್ದು, ಕೆಂಜಾರು ಏರ್‌ಪೋರ್ಟ್ ಡಿಪಾರ್ಚರ್ ಆದ್ಯಪಾಡಿ ರಸ್ತೆಯಲ್ಲಿ ಮುಂಜಾನೆಯೇ ಟೈರ್‌ಗೆ ಬೆಂಕಿ ಹಾಕಲಾಗಿತ್ತು. ಗುರುಪುರ ಕೈಕಂಬ, ಕಿನ್ನಿಗೋಳಿಯಲ್ಲೂ ಬಂದ್ ಯಶಸ್ವಿ
ಯಾಗಿತ್ತು. ಬಂದ್ ಮುಂಜಾಗ್ರತಾ ಕ್ರಮವಾಗಿ ಉಳಾಯಿಬೆಟ್ಟು ಹಾಗೂ ಕಾಟಿಪಳ್ಳಕ್ಕೆ ಹೆಚ್ಚುವರಿ ಸರಕಾರಿ ಬಸ್‌ಗಳ ಏರ್ಪಾಟು ಮಾಡಲಾಗಿತ್ತು.
Advertisement
ಪಂಪ್‌ವೆಲ್‌ನಲ್ಲಿ ಸರಕಾರಿ ಬಸ್‌ಗೆ ಹಾಗೂ ಹಳೆಯಂಗಡಿಯಲ್ಲೂ ಕಲ್ಲು ತೂರಾಟವಾಗಿದೆ. ಘಟನೆ ನಡೆದ ಕೆಲವು ಕಡೆ ಬಿಗಿ ಬಂದೋಬಸ್ತ್ ನಡೆಸಲಾಗಿದೆ. ಸುರತ್ಕಲ್, ಉಳ್ಳಾಲ, ಕೊಣಾಜೆ, ತಲಪಾಡಿ ಮುಂತಾದೆಡೆ ಬಸ್ ಸಂಚಾರ ಸ್ಥಗಿತಗೊಂಡಿದ್ದಲ್ಲದೇ, ಆಟೋ ರಿಕ್ಷಾಗಳು ಕೂಡ ವಿರಳವಾಗಿದ್ದವು. ತಲಪಾಡಿಯಲ್ಲಿ ನಡೆದ ಕಲ್ಲೆಸೆತದಲ್ಲಿ ಬಸ್ಸು ಚಾಲಕ ಹುಬ್ಬಳ್ಳಿಯ ಕರಿಬಸಯ್ಯ, ತುಂಬೆ ಬಳಿ ಕಲ್ಲೆಸೆತದಿಂದ ಪ್ರಯಾಣಿಕ ಪ್ರಸಾದ್ ಅವರಿಗೆ ಗಾಯವಾಗಿದೆ. ಇಬ್ಬರು ಗಾಯಾಳುಗಳು ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಬಂಟ್ವಾಳ ತಾ|: ಲಾರಿಗೆ ಬೆಂಕಿ ಬಂಟ್ವಾಳ ತಾಲೂಕಿನ ತುಂಬೆ ವ್ಯಾಪ್ತಿಯಲ್ಲಿ ಸರಕಾರಿ ಬಸ್‌ಗೆ ಕಲ್ಲೆಸೆತವಾಗಿರುವುದಲ್ಲದೇ, ವಿಟ್ಲ ಒಕ್ಕೆತ್ತೂರಿನಲ್ಲಿ ಅಬೂಬಕ್ಕರ್ ಹಾಜಿ ಅವರಿಗೆ ಸೇರಿದ್ದ ಲಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಕೂಡ ಶನಿವಾರ ಬೆಳಗ್ಗೆ ನಡೆದಿದೆ. ಲಾರಿ ಮುಂಭಾಗ ಉರಿದು ಹೋಗಿದ್ದು, ಅಗ್ನಿ ಶಾಮಕ ದಳದ ಸಿಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ವಿಟ್ಲ ಸಮೀಪದ ಕೇರಳ ಗಡಿಭಾಗವಾದ ಕುದ್ದು ಪದವಿನಲ್ಲಿ ಬಸ್‌ಗೆ ಕಲ್ಲು ತೂರಾಟವಾಗಿದ್ದು, ಕೆ.ಸಿ. ರೋಡ್ ಬಳಿ ಟೈರ್‌ಗೆ ಬೆಂಕಿ ಹಾಕಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಬಂದ್‌ಗೆ ಉತ್ತಮ ಸ್ಪಂದನೆ ದೊರಕಿದ್ದು, ಬೆಳಗ್ಗಿನಿಂದಲೇ ಅಂಗಡಿ ಮುಂಗಟ್ಟು ತೆರೆದಿರಲಿಲ್ಲ.
ಸರಕಾರಿ ಬಸ್‌ಗಳು ಬೆಳಗ್ಗಿನ ಸಮಯದಲ್ಲಿ ಚಲಿಸುತ್ತಿದ್ದವಾದರೂ ಮಧ್ಯಾಹ್ನ ಹತ್ತಿರವಾಗುತ್ತಿದ್ದಂತೆ; ಹಲವು ಸ್ಟೇಟ್ಬ್ಯಾಂಕ್ ಬಸ್‌ಗಳನ್ನೂ ಬಿಸಿ ರೋಡ್‌ವರೆಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಮಂಗಳೂರಿನತ್ತ ತೆರಳಲಿಚ್ಛಿಸಿದ್ದ ಹಲವು ಪ್ರಯಾಣಿಕರು ಬಿಸಿ ರೋಡ್‌ನಲ್ಲೇ ಬಾಕಿಯಾಗಿ ಹಾಸನ ಕಡೆಯಿಂದ ಬರುವ ಬಸ್‌ಗಳನ್ನು ಅವಲಂಬಿಸುವ ಸ್ಥಿತಿ ಎದುರಾಯಿತು. ಪುತ್ತೂರು ತಾ|: ಕಲ್ಲು ತೂರಾಟ ಪುತ್ತೂರು ತಾಲೂಕಿನಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಕೆಎಸ್‌ಆರ್‌ಟಿಸಿ ಬಸ್ ಹೊರತುಪಡಿಸಿ ಇತರ ವಾಹನ ಸಂಚಾರ ಬಹಳಷ್ಟು ವಿರಳವಾಗಿತ್ತು. ಕಡಬದಲ್ಲೂ ಬಂದ್‌ಗೆಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪುತ್ತೂರು ನಗರದ ಕೃಷ್ಣನಗರ, ಬೆದ್ರಾಳ ಮತ್ತು ಮುಖ್ಯ ಬಸ್ ನಿಲ್ದಾಣದ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲು ತೂರಾಟ ನಡೆದಿದ್ದು, ತೆಂಕಿಲದಲ್ಲಿ ರಸ್ತೆಯಲ್ಲೇ ಟೈರ್‌ಗೆ ಬೆಂಕಿ ಹಚ್ಚಲಾಗಿತ್ತು. ಪುತ್ತೂರು ನಗರ ವ್ಯಾಪ್ತಿಯಲ್ಲಿ ಬಂದ್‌ಗೆ ಧನಾತ್ಮಕ ಪ್ರತಿಕ್ರಿಯೆ ದೊರಕಿದ್ದರೆ, ಗ್ರಾಮಾಂತರ ವ್ಯಾಪ್ತಿಯಲ್ಲಿ ಮಿಶ್ರ ಪ್ರತಿಕ್ರಿಯೆ ಒದಗಿತ್ತು. ಬೆಳ್ತಂಗಡಿ ತಾ|: ಯಶಸ್ವಿ ಬಂದ್ ಗುರುವಾಯನಕೆರೆ ಬಳಿ ಸರಕಾರಿ ಬಸ್‌ಗೆ ಕಲ್ಲೆಸೆತದ ಘಟನೆ ಹೊರತು ಪಡಿಸಿ, ಬೆಳ್ತಂಗಡಿ ವ್ಯಾಪ್ತಿಯ ಮಡಂತ್ಯಾರ್ ಹಾಗೂ ಮಚ್ಚಿನ ಮುಂತಾದ ಹಲವೆಡೆ ಬಂದ್ ಶಾಂತ ರೀತಿಯಲ್ಲಿ ನಡೆಯುವುದರೊಂದಿಗೆ ಯಶಸ್ವಿಯಾಗಿದೆ. ಈ ಪ್ರದೇಶಗಳಲ್ಲಿ ಎಂದಿನಂತೆ ಸರಕಾರಿ ಬಸ್‌ಗಳ ಓಡಾಟವಿತ್ತಾದರೂ ಖಾಸಗಿ ಬಸ್‌ಗಳ ಓಡಾಟ ಮಾತ್ರ ಕಡಿಮೆಯಾಗಿತ್ತು. ಸುಳ್ಯ ತಾ|: ಸ್ಪಂದನೆ ಶಾಂತ ಸುಳ್ಯ ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಬಂದ್ ನಡೆದಿದೆ. ಬೆಳಗ್ಗೆ ಕೆಲವು ಅಂಗಡಿಗಳು ತೆರೆದಿದ್ದರೂ ಬಳಿಕ ಅವುಗಳನ್ನು ಬಂದ್ ಮಾಡಲಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳು ಚಲಿಸುತ್ತಿದ್ದವಾದರೂ ಖಾಸಗಿ ಬಸ್‌ಗಳು ಮಾತ್ರ ರಸ್ತೆಗಿಳಿದಿರಲಿಲ್ಲ. ಶಾಲಾ-ಕಾಲೇಜುಗಳು ಕೂಡ ಎಂದಿ ನಂತೆ ನಡೆದಿದ್ದು, ವಿದ್ಯಾರ್ಥಿಗಳನ್ನು ಸ್ವಲ್ಪ ಬೇಗ ಬಿಟ್ಟಿದ್ದಾರೆ. ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಯಾವುದೇ ಬಂದ್ ನಡೆದಿರಲಿಲ್ಲ ಎನ್ನಲಾಗಿದೆ. ಪೊಲೀಸ್ ಬಿಗಿ ಭದ್ರತೆ: ತಪಾಸಣೆ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮನದ ಹಿನ್ನೆಲೆಯಲ್ಲಿ ಸುರಕ್ಷೆಯ ದೃಷ್ಟಿಯಿಂದ 3000 ಪೊಲೀಸರನ್ನು ನಿಯೋಜಿಸಲಾಗಿದ್ದು, ನಗರಾದ್ಯಂತ ಅಲ್ಲಲ್ಲಿ ಪೊಲೀಸರು ತಿರುಗುತ್ತಿದ್ದರು. ಎಸಿಪಿ ಶ್ರುತಿ ನೇತೃತ್ವದಲ್ಲಿ ನೆಹರೂ ಮೈದಾನದ ಬಳಿ ವ್ಯಕ್ತಿಗಳ ಹಾಗೂ ಅವರು ಹೊಂದಿದ್ದ ಬ್ಯಾಗ್‌ಗಳ ಸೂಕ್ತ ತಪಾಸಣಾ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ, ಹಂಪನಕಟ್ಟೆಯಿಂದ ಕೆ.ಎಸ್. ರಾವ್ ರಸ್ತೆಗೆ ಸಾಗುವಲ್ಲಿ ಬಂದರು ಠಾಣಾ ಇನ್ಸ್‌ಪೆಕ್ಟರ್ ಶಾಂತರಾಮ್ ಹಾಗೂ ಸಿಬಂದಿ ಸಂಶಯಾಸ್ಪದ ಬೈಕ್ ಸವಾರರನ್ನು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದರು. ಅಲ್ಲದೇ, ನಂತೂರು ಭಾಗದಲ್ಲಿ ಕದ್ರಿ ಠಾಣಾ ಇನ್ಸ್‌ಪೆಕ್ಟರ್ ಮಾರುತಿ ನಾಯಕ್, ಬಳ್ಳಾಲ್ ಬಾಗ್ ರಸ್ತೆಯಲ್ಲಿ ಬರ್ಕೆ ಠಾಣಾ ಪಿಎಸ್‌ಐ ನರೇಂದ್ರ ಹಾಗೂ ಸಿಬಂದಿ ತಪಾಸಣಾ ಪ್ರಕ್ರಿಯೆ ನಡೆಸಿದ್ದರು.