Advertisement

ಡಿ.ಕೆ.ಸುರೇಶ್‌ ಗೆಲುವಿಗೆ ಮತ್ತೆ ಮೈತ್ರಿ ಒಗ್ಗಟ್ಟಿನ ಮಂತ್ರ

07:15 AM Mar 19, 2019 | |

ರಾಮನಗರ: ಏ. 18ರಂದು ನಡೆಯುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಗೆ ಮೈತ್ರಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಪೂರ್ವ ಭಾವಿ ಸಭೆ ಬೆಂಗಳೂರಿನಲ್ಲಿ ನಡೆದಿದೆ. ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ ಅವರ ಗೆಲುವಿಗೆ ಎರಡೂ ಪಕ್ಷಗಳ ಮುಖಂಡರು ಮತ್ತೆ ಒಗ್ಗಟ್ಟಿನ ಮಂತ್ರವನ್ನು ಜಪಿಸಿದ್ದಾರೆ. ಬೇರು ಮಟ್ಟದಲ್ಲಿ ಬಿಜೆಪಿಯ ಓಟವನ್ನು ಮಣಿಸಲು ರಾಜಕೀಯ ತಂತ್ರಗಾರಿಕೆ ರೂಪಿಸಲು ಸಹ ಮೈತ್ರಿ ಪಕ್ಷಗಳ ಮುಖಂಡರು ನಿರ್ಧರಿಸಿದ್ದಾರೆ. ಇನ್ನೊಂದೆಡೆ ಮೈತ್ರಿ ಪಕ್ಷಗಳ ಅಭ್ಯರ್ಥಿಗೆ ಸಮರ್ಥ ಪೈಪೋಟಿ ನೀಡ ಬಲ್ಲ ಅಭ್ಯರ್ಥಿಯನ್ನು ಬಿಜೆಪಿ ಇನ್ನು ಅಖೈರು ಗೊಳಿಸಿಲ್ಲ!

Advertisement

ಸುರೇಶ್‌ ಗೆಲುವಿಗೆ ಶ್ರಮಿಸಲು ಮೈತ್ರಿ ನಿರ್ಧಾರ: ಕ್ಷೇತ್ರ ಸಂಸದ ಡಿ.ಕೆ.ಸುರೇಶ್‌ರನ್ನು ಮತ್ತೆ ಕಣಕ್ಕಿಳಿಸಲು ಈಗಾಗಲೆ ನಿರ್ಧಾರವಾಗಿದೆ. ಅವರನ್ನು ಭರ್ಜರಿ ಮತಗಳ ಅಂತರದಲ್ಲಿ ಗೆಲ್ಲಸಿಕೊಳ್ಳಲು ಮೈತ್ರಿ ಪಕ್ಷಗಳ ಮುಖಂಡರು ನಿರ್ಧರಿಸಿದ್ದಾರೆ. ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯ ವೇಳೆ ಬಿಜೆಪಿ ಅಭ್ಯರ್ಥಿಯನ್ನು ಕಣದಿಂದ ಹಿಂದಕ್ಕೆ ಸರಿಯುವಂತೆ ಮಾಡಿ ಅನಿತಾ ಕುಮಾರಸ್ವಾಮಿ ಅವರ ಗೆಲುವಿಗೆ ಹಾದಿ ಸುಗಮ ಮಾಡಿಕೊಟ್ಟ ಕಾಂಗ್ರೆಸ್‌ ಮುಖಂಡರ ಬಗ್ಗೆ ಸ್ಥಳೀಯ ಜೆಡಿಎಸ್‌ ಕಾರ್ಯಕರ್ತರಲ್ಲಿ ಕೃತಜ್ಞತಾ ಭಾವ ಇದೆ. ಹೀಗಾಗಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿರುವ ಡಿ.ಕೆ.ಸುರೇಶ್‌ರನ್ನು ಗೆಲ್ಲಿಸಿ ಋಣ ತೀರಿಸುವ ಬಗ್ಗೆ ಜೆಡಿಎಸ್‌ನ ಕೆಲವು ಕಾರ್ಯಕರ್ತರು ಪ್ರತಿಕ್ರಿಯಿಸಿದ್ದಾರೆ. 

ಬೆಂಗಳೂರಿನಲ್ಲಿ ಸಭೆ: ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ರನ್ನು ಬೆಂಬಲಿಸುವ ವಿಚಾರದಲ್ಲಿ ಭಾನುವಾರ ಸಂಜೆ ಬೆಂಗಳೂರಿನ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟೂ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪ್ರಮುಖರ ಸಭೆ ನಡೆದಿದೆ. ಸಿಎಂ ಎಚ್‌.ಡಿ.ಕುಮಾರಸ್ವಮಿ, ಸಚಿವ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌, ರಾಜರಾಜೇಶ್ವರಿ ನಗರ ಎಂ.ಎಲ್‌.ಎ. ಮುನಿರಾಜು, ಮಾಗಡಿ ಎಂ.ಎಲ್‌.ಎ ಎ.ಮಂಜು, ಮಾಜಿ ಶಾಸಕರುಗಳಾದ ಎಚ್‌.ಸಿ.ಬಾಲಕೃಷ್ಣ, ಅಶ್ವಥ್‌,ಜಿಪಂ ಅಧ್ಯಕ್ಷ ಎಂ.ಎನ್‌.ನಾಗರಾಜ್‌ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ಎರಡೂ ಪಕ್ಷಗಳ ಘಟಾನುಘಟಿಗಳು ಭಾಗವಹಿಸಿದ್ದರು. 

ಈ ವೇಳೆ ಮಾತನಾಡಿರುವ ಸಿಎಂ ಎಚ್‌.ಡಿ.ಕುಮಾರಸ್ವಾಮಿ ರಾಮನಗರ ವಿಧಾನಸಭಾ ಚುನಾವಣೆಯ ವೇಳೆ ಅನಿತಾ ಕುಮಾರಸ್ವಾಮಿ ಅವರ ಗೆಲುವಿಗೆ ಎರಡೂ ಪಕ್ಷಗಳ ಕಾರ್ಯಕರ್ತರು ಶ್ರಮಿಸಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಇದೇ ರೀತಿಯಲ್ಲಿ ಡಿ.ಕೆ.ಸುರೇಶ್‌ ಅವರ ಗೆಲುವಿಗೂ ಎರಡೂ ಪಕ್ಷಗಳ ಕಾರ್ಯಕರ್ತರು ಶ್ರಮಿಸಬೇಕಾಗಿದೆ. ವಿಶೇಷವಾಗಿ ಜಿಲ್ಲೆಯ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರು ಶ್ರಮವಹಿಸಿ ಡಿ.ಕೆ.ಸುರೇಶ್‌ ಅವರಿಗೆ ಜಿಲ್ಲೆಯಲ್ಲಿ ಕನಿಷ್ಠ 5 ಲಕ್ಷಕ್ಕೂ ಹೆಚ್ಚು ಮತಗಳು ದೊರೆಯುವಂತೆ ಮಾಡಿ ಎಂದು ಕರೆ ಕೊಟ್ಟಿರುವುದಾಗಿ ಹೇಳಿದ್ದಾರೆ. ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ 1 ಲಕ್ಷ ಮತಗಳ ಲೀಡ್‌ ಕೊಡಿಸಿ ಎಂದು ತಿಳಿಸಿದ್ದಾರೆ. 
 
ಕೆಲಸ ಮಾಡಿದ್ದೇನೆ, ಗುರುತಿಸಿ: ಡಿ.ಕೆ.ಸುರೇಶ್‌: ಕಳೆದ 5 ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಗ್ರಾಮಪಂಚಾಯ್ತಿ ಮಟ್ಟದಲ್ಲೂ ಕಾಳಜಿವಹಿಸಿ ತಾವು ಮಾಡಿರುವ ಕೆಲಸಗಳು ಕಣ್ಣ ಮುಂದಿದೆ. ಅಲ್ಲದೆ ಕ್ಷೇತ್ರದ ಜನರೇ ಈ ಬಗ್ಗೆ ಮಾತನಾಡುತ್ತಾರೆ. ಎರಡೂ ಪಕ್ಷಗಳ ಕಾರ್ಯಕರ್ತರು ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮತ ಕೇಳಿ ಎಂದು ಸಂಸದ ಡಿ.ಕೆ.ಸುರೇಶ್‌ ಸಭೆಯಲ್ಲಿ ಹೇಳಿದರು. 

ಬೇರು ಮಟ್ಟದಲ್ಲೇ ಬಿಜೆಪಿ ಹಣೆಯಲು ತಂತ್ರ: ಈ ಬಾರಿಯ ಲೋಕಸಭಾ ಚುನಾವಣೆ ನರೇಂದ್ರ ಮೋದಿ ವರ್ಸಸ್‌ ಅನ್ಯ ಪಕ್ಷಗಳ ಅಭ್ಯರ್ಥಿಗಳು ಎನ್ನಲಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಬೂತ್‌ ಮಟ್ಟದಲ್ಲಿರುವ ನರೇಂದ್ರ ಮೋದಿ ಪರ ಮತದಾರರ ಮನವೊಲಿಸಲು ಸ್ಥಳೀಯ ಕಾರ್ಯಕರ್ತರೇ ಹೆಚ್ಚು ಸಕ್ರಿಯರಾಗಬೇಕು ಎಂಬ ಅಭಿಪ್ರಾಯವನ್ನು ವರಿಷ್ಠರು ವ್ಯಕ್ತಪಡಿಸಿರುವುದಾಗಿ ಮೂಲಗಳು ತಿಳಿಸಿವೆ. 
 
ಬಿಜೆಪಿ ಅಭ್ಯರ್ಥಿ ನಾಳೆ ಫೈನಲ್‌!: ಗೋವಾ ಮುಖ್ಯಮಂತ್ರಿ ಪರಿಕ್ಕರ್‌ ಅವರ ನಿಧನದಿಂದಾಗಿ ಬಿಜೆಪಿ ಪಟ್ಟಿ ಅಧಿಕೃತವಾಗಿ ಪ್ರಕಟಣೆಯಾಗಿಲ್ಲ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಅಥವಾ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್‌ರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದ್ದರು, ಇವರಿಬ್ಬರ ಪೈಕಿ ಒಬ್ಬರ ಹೆಸರನ್ನು ಮಂಗಳವಾರ ಫೈನಲ್‌ ಆಗಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಯಾರಿಗೇ ಟಿಕೆಟ್‌ ಸಿಕ್ಕರೂ ಅವರ ಗೆಲುವಿಗೆ ಶ್ರಮಿಸಲು ಸಿ.ಪಿ.ವೈ ಮತ್ತು ಎಂ.ರುದ್ರೇಶ್‌ ಈಗಾಗಲೆ ಭರವಸೆ ನೀಡಿದ್ದಾರೆ.
 
ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕ್ಷೇತ್ರ ವ್ಯಾಪ್ತಿಯ ಮೈತ್ರಿ ಪಕ್ಷಗಳ ಪ್ರಮುಖರ ಸಭೆ ನಡೆದಿದೆ. ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿವುಸಂತೆ ತಿಳಿಸಲಾಗಿದೆ. ಸ್ಥಳೀಯ ಶಾಸಕರಾದ ಅನಿತಾ ಕುಮಾರಸ್ವಾಮಿ ಅವರ ಅಣಿತಿ ಮತ್ತು ಮಾರ್ಗದರ್ಶನದಲ್ಲಿ ಜೆಡಿಎಸ್‌ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಯ ಪರ ಪ್ರಚಾರದಲ್ಲಿ ತೊಡಗಿಸಿಕೊಳ್ಳವರು. 
-ರಾಜಶೇಖರ್‌, ರಾಮನಗರ ತಾಲೂಕು ಜೆಡಿಎಸ್‌ ಅಧ್ಯಕ್ಷ, 

Advertisement

ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್‌ ಮತ್ತೆ ಕಣಕ್ಕೆ ಇಳಿಯಲಿದ್ದಾರೆ. ಮೈತ್ರಿ ಪಕ್ಷಗಳ ಕಾರ್ಯಕರ್ತರು ಅವರ ಗೆಲುವಿಗೆ ಶ್ರಮಿಸುತ್ತಾರೆ. ಡಿ.ಕೆ.ಸುರೇಶ್‌ ಅತ್ಯುತ್ತಮ ಕಾರ್ಯಗಳು ಅವರ ಕೈ ಹಿಡಿಯುವುದರಲ್ಲಿ ಸಂಶಯವಿಲ್ಲ.
-ಎ.ಬಿ.ಚೇತನ್‌ ಕುಮಾರ್‌, ರಾಮನಗರ ತಾಲೂಕು ಕಾಂಗ್ರೆಸ್‌ ಅಧ್ಯಕ್ಷ

* ಬಿ.ವಿ.ಸೂರ್ಯಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next