ರಾಮನಗರ: ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಹಾಗೊಂದು ವೇಳೆ ಗೆದ್ದು ಸಿಎಂ ಆದರೆ ನಮಗೇನು? ನನ್ನ ಕ್ಷೇತ್ರದ ಒಬ್ಬರು (ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ) ಸಿಎಂ ಆದರೆಂದು ಸಂತೋಷಪಡುತ್ತೇನೆ ಎಂದು ಸಂಸದ ಡಿ.ಕೆ. ಸುರೇಶ್ ವ್ಯಂಗ್ಯವಾಡಿದರು.
ಆರ್.ಆರ್.ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವರೆಂಬ ವಿಶ್ವಾಸ ತಮಗಿದೆ ಎಂದರು. ಬಿಡದಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಹಿನ್ನೆಲೆಯಲ್ಲಿ ಆ ಭಾಗದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜನರ ತೀರ್ಪು ನಮ್ಮ ಪರವಾಗಿ ಬರಲಿದೆ ಎನ್ನುವ ವಿಶ್ವಾಸವಿದೆ. ಮುನಿರತ್ನ ಗೆದ್ದರೆ ಮಂತ್ರಿಗಿರಿ ಸಿಗುತ್ತದೆ. ತಮ್ಮ ಕ್ಷೇತ್ರದವರು ಮಂತ್ರಿಯಾದರೆಂದು ಸಂತೋಷಪಡುತ್ತೇನೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಉಪ ಚುನಾವಣೆ ಫಲಿತಾಂಶ ಪರಿಣಾಮ ಬೀರದು ಎಂದು ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ಆಂತರಿಕ ಗೊಂದಲಗಳ ಮೇಲೆ ಪರಿಣಾಮ ಬೀರುತ್ತದೆ. ಚುನಾವಣೆ ಗೆಲ್ಲಲಿ, ಸೋಲಲಿ ಯಾವುದೇ ಕ್ಷಣದಲ್ಲಾದರೂ ಭಿನ್ನಮತ ಸ್ಫೋಟವಾಗವಬಹುದು ಎಂದು ಹೇಳಿದರು.
ಇದನ್ನೂ ಓದಿ:ಪ್ರೀತಿಸಿ ಮದುವೆಯಾದ ಪತ್ನಿಯಿಂದ ಕಿರುಕುಳ! ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಪತಿ
ಸಿಎಂ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಕೆಳಗಿಳಿಯುತ್ತಾರೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಾಗಂತ ತಾವೆಲ್ಲೂ ಹೇಳಿಲ್ಲ. ಬಿಜೆಪಿ ನಾಯಕರೇ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನಮಗೆ ಮಾತ್ರ ಯಡಿಯೂರಪ್ಪ ಅವರೇ ಮುಖ್ಯ ಮಂತ್ರಿ ಆಗಿರಬೇಕು ಎಂದರು. (ಅವರ ಈ ಮಾತುಗಳಲ್ಲಿ ವ್ಯಂಗ್ಯ ಭರಿತ ಧ್ವನಿ ಇತ್ತು.) ಬಿಜೆಪಿ ಸರ್ಕಾರ ಅಭಿವೃದ್ಧಿಗಿಂತ
ಲೂಟಿ ಮಾಡಲು ಸೀಮಿತವಾಗಿದೆ. ಈ ಸರ್ಕಾರದ ಭ್ರಷ್ಟ ವ್ಯವಸ್ಥೆಯನ್ನು ಪ್ರಧಾನಿ ಮೋದಿ ಅವರೇ ಒಪ್ಪಿಕೊಂಡಿದ್ದಾರೆ ಎಂದರು.