ಬೆಂಗಳೂರು: ರಾಜ್ಯದಲ್ಲಿ ಮತ್ತೆ ದೂರವಾಣಿ ಕದ್ದಾಲಿಕೆ ಸದ್ದು ಮಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದು, ನನ್ನ ಫೋನ್ ಟ್ಯಾಪಿಂಗ್ ಆಗಿದೆ. ಇಲ್ಲಿಯವರೆಗೆ ಚೆನ್ನಾಗಿತ್ತು, ಇಂದು ಬೆಳಗ್ಗೆಯಿಂದ ಫೋನ್ ಕರೆಗಳು ಬರುತ್ತಿಲ್ಲ. ಇದರ ಬಗ್ಗೆ ದೂರು ಕೊಡುತ್ತೇನೆ ಎಂದಿದ್ದಾರೆ.
ಫೋನ್ ಟ್ಯಾಪಿಂಗ್ ಆಗ್ತಾ ಇದೆ. ನಮ್ಮ ಸುದರ್ಶನ್ 25 ಕಾಲ್ ಮಾಡಿದ್ದಾರೆ, ಆದರೆ ಒಮ್ಮೆಯೂ ನನಗೆ ಕಾಲ್ ಬಂದಿಲ್ಲ. ಪಾಪ ಏನು ಬೇಕೋ ಅವರು ಮಾಡಿಕೊಳ್ಳಲಿ. ಆದರೆ ನನ್ನ ಫೋನ್ ಟ್ಯಾಪಿಂಗ್ ಆಗುತ್ತಿರುವುದು ನಿಜ. ಹಿಂದೆಯೂ ಆಗುತ್ತಿತ್ತು,ಈಗ ಮತ್ತೆ ಆಗುತ್ತಿದೆ ಎಂದು ಡಿಕೆಶಿ ಆರೋಪಿಸಿದರು.
ಇಂಥವರಿಗೆ ನೋಟೀಸ್ ಕೊಡು ಅಂತ ಮಿನಿಸ್ಟರ್ ಹೇಳುತ್ತಾರಾ? ನೋಟೀಸ್ ಕೊಟ್ಟು ಅವರನ್ನು ಕರೆಸಿ, ಬೆದರಿಕೆ ಯೊಡ್ಡುತ್ತಿದ್ದಾರೆ. ಮಿನಿಸ್ಟರ್ ನೋಟೀಸ್ ಕೊಡುತ್ತೇವೆ ಅಂದರೆ ಹೇಗೆ? ಯಾರಾದರೂ ಹೀಗೆ ಹೇಳುವುದಕ್ಕೆ ಆಗುತ್ತಾ? ನಾವು 30 ವರ್ಷದಿಂದ ರಾಜಕಾರಣ ನೋಡಿದ್ದೇವೆ. ಗೃಹ ಇಲಾಖೆಯ ಬಗ್ಗೆಯೂ ಚೆನ್ನಾಗಿ ಗೊತ್ತಿದೆ ಎಂದು ಅವರು ಹೇಳಿದ್ದಾರೆ.
ನಂಜನಗೂಡು ವೈದ್ಯಾಧಿಕಾರಿ ಆತ್ಮಹತ್ಯೆ ವಿಚಾರವಾಗಿ ಮಾತನಾಡಿದ ಅವರು, ಆರೋಗ್ಯ ಸಿಬ್ಬಂದಿ ಪ್ರಾಣ ಒತ್ತೆ ಇಟ್ಟು ಸೇವೆ ಮಾಡುತ್ತಿದ್ದಾರೆ. ಅವರ ಸೇವೆಗೆ ಎಷ್ಟುಗೌರವ ಕೊಟ್ಟರೂ ಸಾಲದು. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ನಾನು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೆ. ಆಗ ಬಿಜೆಪಿ ನಾಯಕರು ವ್ಯಂಗ್ಯ ಮಾಡಿದ್ದರು. ಇಂದು ಪತಿಯನ್ನು ಕಳೆದುಕೊಂಡ ಹೆಣ್ಣುಮಗಳು ಧ್ವನಿ ಎತ್ತಿದ್ದಾರೆ. ಅರೆಸ್ಟ್ ಮಾಡಲು ನಿಮಗೆ ಎಷ್ಟು ದಿನ ಬೇಕು? ವೈದ್ಯಕೀಯ ಮಿನಿಸ್ಟರ್ ಅಲ್ಲಿ ಹೋಗಿ ನಿಂತ್ರೆ ಸಾಕಾ? ಪ್ರಕಣವನ್ನು ಮುಚ್ಚಿಹಾಕುವ ಪ್ರಯತ್ನ ಯಾಕೆ ಎಂದು ಪ್ರಶ್ನಿಸಿದರು.
ಆರು ತಿಂಗಳಿಂದ ಆ ವೈದ್ಯಾಧಿಕಾರಿಗೆ ಕಿರುಕುಳ ಕೊಡಲಾಗಿದೆ. ಕೆಲಸ ಮಾಡಲು ಸರಿಯಾಗಿ ಅವಕಾಶ ಕೊಟ್ಟಿಲ್ಲ.ಅವರು ಆತ್ಮಹತ್ಯೆ ಮಾಡಿಕೊಳ್ಳೋಕೆ ದಾರಿ ಮಾಡಿಕೊಟ್ಟಿದ್ದಾರೆ. ಬೇರೆಯದು ಆದರೆ ಸುಮೋಟೋ ಕೇಸ್ ಹಾಕಿಕೊಳ್ಳುತ್ತಾರೆ. ಈ ಪ್ರಕರಣದಲ್ಲಿ ಯಾಕೆ ಸರ್ಕಾರಕ್ಕೆ ಹಿಂದೇಟು ಹಾಕುತ್ತಿದೆ ಎಂದು ಡಿಕೆಶಿ ಪ್ರಶ್ನಿಸಿದರು.