ಬೆಂಗಳೂರು: ಅಧಿಕಾರ ಇದ್ದಾಗ ಕೆಲಸ ಮಾಡದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ನಗರದಲ್ಲಿ ಮಳೆ ಅವಾಂತರ ವಿಚಾರದಲ್ಲಿ ಮುಖ್ಯಮಂತ್ರಿಯವರ ಪ್ರಲಾಪ ನೋಡಿದರೆ ಕೊಟ್ಟ ಕುದುರೆ ಏರಲಾಗದೆ, ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಅಲ್ಲಮ ಪ್ರಭುಗಳ ವಚನದ ರೀತಿ ಇದೆ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿಗಳು ಅಧಿಕಾರ ಸಿಕ್ಕಾಗ ಕೆಲಸ ಮಾಡಲಾಗದೆ ಈಗ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಒತ್ತುವರಿ ಆಗಿದ್ದರೆ ಈ ಸರ್ಕಾರ ಅದನ್ನು ತೆರವುಗೊಳಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರಿನಲ್ಲಿ ಇಂತಹ ದುಸ್ಥಿತಿ ನಿರ್ಮಾಣವಾಗಿರಲಿಲ್ಲ. ನಿಮ್ಮ ಸರ್ಕಾರ, ಅಧಿಕಾರಿಗಳ ಭ್ರಷ್ಟಾಚಾರದಿಂದ ಬೆಂಗಳೂರಿಗೆ ಈ ಸ್ಥಿತಿ ಬಂದಿದೆ. ಅಧಿಕಾರ ಈಗ ಅವರ ಕೈಯಲ್ಲಿದೆ. ಅವರಿಗೆ ಕೆಲಸ ಮಾಡಲಾಗದಿದ್ದರೆ ಚುನಾವಣೆಗೆ ಹೋಗೋಣ ಬನ್ನಿ ಎಂದು ಪಂಥಾಹ್ವಾನ ನೀಡಿದರು.
ತನಿಖೆ ಆಗಲಿ: ಪಿಎಸ್‌ಐ ಅಕ್ರಮದಲ್ಲಿ ಬಿಜೆಪಿ ಶಾಸಕ ಬಸವರಾಜ ದಡಸಗೂರು ಅವರದ್ದು ಒಂದು ಸಣ್ಣ ಕೈ. ಅವರ ಮಾತಿನಂತೆ ಸರ್ಕಾರ ಎಂದರೆ ಯಾರು? ಸರ್ಕಾರ ಎಂದರೆ ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳು. ಇದಕ್ಕಾಗಿಯೇ ನಾವು ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತಿದ್ದೇವೆ. ಸತ್ಯ ಒಂದೊಂದಾಗಿ ಹೊರ ಬರುತ್ತಿದೆ. ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ಪ್ರಿಯಾಂಕ್ ಖರ್ಗೆ ಅವರನ್ನು ಹೆದರಿಸಲು ನೋಟೀಸ್ ನೀಡಿದ್ದರು ಎಂದು ಹೇಳಿದರು.
ಮಾತೆತ್ತಿದರೆ ಕಾಂಗ್ರೆಸ್ ಕಾಲದ ಹಗರಣದ ತನಿಖೆ ಎಂದು ಬೆದರಿಸಲು ನೋಡುತ್ತೀರಾ? ನಮ್ಮ ಕಾಲದಲ್ಲಿ ಏನೇ ಆಗಿದ್ದರೂ ತನಿಖೆ ನಡೆಸಿ, ತಡ ಯಾಕೆ? ಒಂದು ನಿಮಿಷ ವ್ಯರ್ಥ ಮಾಡದೇ ತನಿಖೆ ಮಾಡಿ. ಖಾಲಿ ಮಾತು ಆಡುವುದು ಬೇಡ. ನಮ್ಮ ತಪ್ಪಿದ್ದರೆ ಸಾಬೀತು ಮಾಡಿ ಗಲ್ಲಿಗೇರಿಸಿ. ಇಂತಹ ಗೊಡುª ಬೆದರಿಕೆಗಳಿಗೆ ಡಿ.ಕೆ. ಶಿವಕುಮಾರ್ ಹೆದರುವ ಮಗ ಅಲ್ಲ.
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ