Advertisement

ಇಸ್ರೋ ಸ್ಥಳಾಂತರ: ಪ್ರಧಾನಿ ಮತ್ತು ಸಿಎಂಗೆ ಡಿಕೆಶಿ ಬರೆದ ಪತ್ರದ ಸಾರಾಂಶ

01:49 PM Nov 28, 2021 | Team Udayavani |

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರವೊಂದನ್ನು ಬರೆದಿದ್ದು, ಅದರ ಪತ್ರದ ಸಾರಾಂಶ ಇಲ್ಲಿದೆ.

Advertisement

ಸನ್ಮಾನ್ಯ ಪ್ರಧಾನಮಂತ್ರಿಗಳಿಗೆ

ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿ ಭಾರತೀಯ ಮಾನವಸಹಿತ ಗಗನಯಾನ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತಿಗೆ ಸ್ಥಳಾಂತರ ಮಾಡುವ ಪ್ರಸ್ತಾಪವನ್ನು ಕೂಡಲೇ ಕೈಬಿಡಬೇಕಾಗಿ ವಿನಂತಿ.

ನಿಮ್ಮ ಬಿಡುವಿಲ್ಲದ ಸಮಯದಲ್ಲೂ ನಮ್ಮ ಮನವಿಯತ್ತ ಗಮನಹರಿಸಿ ಎಂದು ಕೋರುತ್ತೇನೆ. ಕರ್ನಾಟಕ ನಾಡಿನ ಜನರ ಹೆಮ್ಮೆ, ಆತ್ಮಗೌರವಕ್ಕೆ ಸಂಬಂಧಪಟ್ಟ ಯೋಜನೆ ವಿಚಾರವಾಗಿ ನಾನು ಇಂದು ನಿಮ್ಮ ಗಮನ ಸೆಳೆಯುತ್ತಿದ್ದೇನೆ. ಇದು ನನ್ನ ಕರ್ತವ್ಯವೂ ಆಗಿದೆ.

ಹಲವು ದಶಕಗಳಿಂದ ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಕೇಂದ್ರ ಕಛೇರಿ ಹಾಗೂ ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆ ಪಡುತ್ತಾರೆ. ನಿಮಗೆ ತಿಳಿದಿರುವಂತೆ 2007ರಿಂದ ಇಸ್ರೋ ‘ಮಾನವಸಹಿತ ಬಾಹ್ಯಾಕಾಶ ಗಗನಯಾನ’ ಯೋಜನೆಗೆ ಬೇಕಾದ ತಂತ್ರಜ್ಞಾನವನ್ನು ಸಿದ್ಧಪಡಿಸಿಕೊಂಡು ಬಂದಿದೆ.

Advertisement

ಇಸ್ರೋ ಸಂಸ್ಥೆ 2023ರಲ್ಲಿ ತನ್ನ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನದ ಜಿಎಸ್ಎಲ್ವಿ ರಾಕೆಟ್ ಉಡಾವಣೆಗೆ ಸಿದ್ಧತೆ ನಡೆಸಿದೆ. ಇದು ಯಶಸ್ವಿಯಾದರೆ ಅಮೆರಿಕಾ, ಚೀನಾ, ಸೋವಿಯತ್ ಯೂನಿಯನ್ ನಂತರ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶ ಭಾರತವಾಗಲಿದೆ.

ಕನ್ನಡಿಗರು ಭಾವನಾತ್ಮಕ ವ್ಯಕ್ತಿಗಳಾಗಿದ್ದು, ಇಂತಹ ರಾಷ್ಟ್ರೀಯ ಕಾರ್ಯಕ್ರಮಗಳ ಆತಿಥ್ಯವನ್ನು ಬಹಳ ಹೆಮ್ಮೆಯಿಂದ ವಹಿಸಿಕೊಳ್ಳುತ್ತಾರೆ. ಅದೇ ರೀತಿ ಈ ಗಗನಯಾನ ಯೋಜನೆ ಬಗ್ಗೆಯೂ ಕನ್ನಡಿಗರು ಭಾವನಾತ್ಮಕ ಸಂಬಂಧ, ಮನಸ್ಥಿತಿ ಇಟ್ಟುಕೊಂಡಿದ್ದಾರೆ.

ಈ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತಿಗೆ ಸ್ಥಳಾಂತರ ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ಸುದ್ದಿ ಕೇಳಿ ಕನ್ನಡಿಗರು ಬೇಸರಗೊಂಡಿದ್ದಾರೆ. ಈ ಯೋಜನೆ ಸ್ಥಳಾಂತರ ಆಗಿದ್ದೇ ಆದರೆ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯವನ್ನು ಕಡೆಗಣಿಸಿ, ಅದಕ್ಕೆ ದ್ರೋಹ ಬಗೆದು, ಕನ್ನಡಿಗರ ಭಾವನೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಭಾವಿಸಲಾಗುವುದು. ಅಷ್ಟೇ ಅಲ್ಲ, ಇದು ಕನ್ನಡಿಗರ ಸ್ವಾಭಿಮಾನ ಹಾಗೂ ಆತ್ಮಗೌರವಕ್ಕೆ ಧಕ್ಕೆ ತರಲಿದೆ. ಇದು ದೇಶದ ಒಕ್ಕೂಟ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ದೇಶದ ಒಂದು ಭಾಗದ ಜನ ತಮಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಭಾವಿಸಿದರೆ ಅದು ಭವಿಷ್ಯದಲ್ಲಿ ಗಂಭೀರ ಪರಿಣಾಮ ಬೀರಲಿದೆ.

ಹೀಗಾಗಿ, ನಿಮ್ಮ ಕಾರ್ಯಾಲಯ ಕೂಡಲೇ ಮಧ್ಯಪ್ರವೇಶಿಸಿ ಮಾನವಸಹಿತ ಗಗನಯಾನ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತಿಗೆ ಸ್ಥಳಾಂತರ ಮಾಡುವ ಪ್ರಯತ್ನವನ್ನು ತಡೆಯಬೇಕು.

ನಿಮ್ಮಿಂದ ಆದಷ್ಟು ಬೇಗ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗುವ ನಿರೀಕ್ಷೆಯಲ್ಲಿದ್ದೇವೆ.

ಮಾನ್ಯ ಮುಖ್ಯಮಂತ್ರಿಗಳೇ

ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿ ಮಾನವಸಹಿತ ಗಗನಯಾನ ಯೋಜನೆ ನಮ್ಮೆಲ್ಲರ ಹೆಮ್ಮೆ. ಇದು ಕನ್ನಡಿಗರ ಭಾವನೆಯ ವಿಚಾರವಾಗಿದೆ. ಕನ್ನಡಿಗರು ಭಾವನಾತ್ಮಕ ಜನರಾಗಿದ್ದು, ಈ ಯೋಜನೆ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಆದರೆ ಈ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತಿಗೆ ಸ್ಥಳಾಂತರ ಮಾಡುವ ಹುನ್ನಾರದ ವಿಚಾರ ಕೇಳಿ ಕನ್ನಡಿಗರು ದಿಗ್ಭ್ರಾಂತರಾಗಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ನಿರಂತರವಾಗಿ ಜನರ ಭಾವನೆಗೆ ಧಕ್ಕೆ ತಂದು ಈ ರೀತಿಯ ದ್ರೋಹ ಬಗೆದು, ಮಲತಾಯಿ ಧೋರಣೆ ತಾಳುತ್ತಿದೆ. ಈ ನಡೆಯು ಒಕ್ಕೂಟ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

ಹೀಗಾಗಿ ಇಸ್ರೋ ಯೋಜನೆ ಸ್ಥಳಾಂತರದ ಪ್ರಸ್ತಾವನೆ ಕೈಬಿಡುವಂತೆ ಕೋರಿ ನಾನು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದು, ಅದರ ಪ್ರತಿಯನ್ನು ತಮಗೂ ಲಗತ್ತಿಸಲಾಗಿದೆ.

ಹೀಗಾಗಿ ಈ ವಿಚಾರದಲ್ಲಿ ತಾವುಗಳು ಪ್ರಧಾನಿಗಳ ಬಳಿಗೆ ರಾಜ್ಯದ ಸಂಸದರ ನಿಯೋಗವನ್ನು ಕರೆದುಕೊಂಡು ಹೋಗಿ, ನಿಮ್ಮ ಕಚೇರಿಯ ಮೂಲಕ ಒತ್ತಡ ಹೇರಿ, ಈ ಮೇಲ್ಕಂಡ ವಿಚಾರದ ಬಗ್ಗೆ ಅವರಿಗೆ ಮನದಟ್ಟು ಮಾಡಿಕೊಡಿ. ಈ ಯೋಜನೆ ಸ್ಥಳಾಂತರ ಪ್ರಸ್ತಾವನೆ ಕೈಬಿಡುವಂತೆ ಮಾಡಿ ಕನ್ನಡಿಗರ ಸ್ವಾಭಿಮಾನ, ಆತ್ಮಗೌರವ ಎತ್ತಿ ಹಿಡಿಯಿರಿ ಎಂದು ನಿಮ್ಮಲ್ಲಿ ಈ ಮೂಲಕ ಮನವಿ ಮಾಡುತ್ತೇನೆ.

ಧನ್ಯವಾದಗಳು.

Advertisement

Udayavani is now on Telegram. Click here to join our channel and stay updated with the latest news.

Next