ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಮಾರ್ಚ್ 10ರಂದು ಹೊರಬೀಳುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಗೋವಾಗೆ ತೆರಳಲು ಹೈಕಮಾಂಡ್ ಸೂಚನೆ ನೀಡಿದೆ.
ಗೋವಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆಯಿದ್ದು, ಕಳೆದ ಬಾರಿಯಂತೆ “ಆಪರೇಷನ್ ಕಮಲ’ ನಡೆಯಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಒಂದು ದಿನ ಮೊದಲೇ ಅಲ್ಲಿರುವಂತೆ ಡಿ.ಕೆ.ಶಿವಕುಮಾರ್‌ಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಗೋವಾದಲ್ಲಿ ಸರಕಾರ ರಚಿಸಲು ಏನಾದರೂ ಅಡ್ಡಿ ಎದುರಾದರೆ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಡಿ.ಕೆ.ಶಿ.ಗೆ ಹೊಣೆಗಾರಿಕೆ ನೀಡಲಾಗಿದೆ ಎನ್ನಲಾಗಿದೆ.
ಈ ಮಧ್ಯೆ, ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಹೈಕಮಾಂಡ್ ಗೋವಾಗೆ ತೆರಳುವಂತೆ ತಿಳಿಸಿದೆ. ಚುನಾವಣೆ ಪ್ರಚಾರದ ವೇಳೆ ನಾನು ಕೂಡ ಅಲ್ಲಿಗೆ ತೆರಳಿ ಪ್ರಚಾರ ಮಾಡಿದ್ದೆ. ರಾಜ್ಯದಿಂದ ನಮ್ಮ ತಂಡ ಕಳೆದ ಒಂದು ತಿಂಗಳಿಂದ ಅಲ್ಲಿ ಶ್ರಮಿಸುತ್ತಿದೆ. ಅಲ್ಲಿ ನಾವೆಲ್ಲರೂ ಸಾಕಷ್ಟು ಪರಿಶ್ರಮ ಹಾಕಿದ್ದೇವೆ. ಅಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಕಾರ್ಯಕರ್ತನಾಗಿ ಅಲ್ಲಿ ಶ್ರಮಿಸಲು, ಅಲ್ಲಿನ ನಮ್ಮ ಸಹೊದ್ಯೋಗಿಗಳಿಗೆ ಬೆಂಬಲವಾಗಿ ನಿಲ್ಲಲು ನಾನು ಗೋವಾಗೆ ತೆರಳುತ್ತಿದ್ದೇನೆ. ಗೋವಾದಲ್ಲಿ ನನ್ನ ನೇತೃತ್ವದಲ್ಲಿ ಅಲ್ಲ, ಗೋವಾ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.