ಹುಬ್ಬಳ್ಳಿ: ಬಿಜೆಪಿ ಒಡೆದ ಮನೆಯಾಗಿದ್ದು, ಹಾನಗಲ್ಲ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಿಜೆಪಿ ಅಭ್ಯರ್ಥಿಯನ್ನು ಹೊರ ಹಾಕಿ ಅಲ್ಲಿನ ಮುಖಂಡರು ಸಭೆ ಮಾಡಿದ್ದಾರೆ. ಕ್ಷೇತ್ರದ ಜನರಿಗೆ ಅಭ್ಯರ್ಥಿ ಬೇಡವಾಗಿದ್ದು, ಅವರನ್ನು ಸೋಲಿಸಲು ಜನರೇ ಮುಂದಾಗಿದ್ದಾರೆ. ಈ ಉಪ ಚುನಾವಣೆಯನ್ನು ಪ್ರತಿಯೊಬ್ಬ ನಾಯಕರು ಮಾಡು ಇಲ್ಲವೇ ಮಡಿ ಎಂದು ನಿರ್ಧರಿಸಿ ಪ್ರಾಮಾಣಿಕವಾಗಿ ಚುನಾವಣೆ ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.
ಗುರುವಾರ ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಗಾಗಿ 20 ದಿನ ಮೀಸಲಿಡುವ ಶಾಸಕರು, ಮಾಜಿ ಶಾಸಕರು, ಪದಾಧಿಕಾರಿಗಳು, ನಾಯಕರಿಗೆ ಮಾತ್ರ ಜವಬ್ದಾರಿ ನೀಡುವಂತೆ ರಾಜ್ಯ ಉಸ್ತುವಾರಿ ರಣದೀಪ ಸುಜೇìವಾಲಾ ಅವರು ತಿಳಿಸಿದ್ದಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿನ ಕಾರ್ಯಕರ್ತರ, ಜನರು ಉತ್ಸಾಹ ನೋಡಿದರೆ ಚುನಾವಣೆ ಇಮ್ಮಡಿಗೊಳಿಸಿದೆ. ನಾಯಕರಿಂದ ವಿನಾಕಾರಣ ಸುತ್ತದೆ ಪ್ರಾಮಾಣಿಕವಾಗಿ ಮತಯಾಚಿಸಬೇಕು ಎಂದರು.
ಮಾಚಿ ಸಚಿವ ಎಚ್.ಕೆ.ಪಾಟೀಲ ನೇತೃತ್ವದಲ್ಲಿ ಹಾನಗಲ್ಲ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಜನರು ಬಿಜೆಪಿ ಸೋಲಿಸಲು ಮುಂದಾಗಿದ್ದಾರೆ. ಇದು ಮುಖ್ಯಮಂತ್ರಿಗಳ ಕ್ಷೇತ್ರ ಗೆಲವು ಸಾಧ್ಯವೋ ಎನ್ನುವ ಆಂತಕ ಬೇಡ. ಬಿಜೆಪಿ ಇದೀಗ ಒಡೆದ ಮನೆಯಾಗಿದೆ. ಜವಾಬ್ದಾರಿ ಪಡೆದವರು ತಮ್ಮ ಸ್ವಂತ ಖರ್ಚಿನಲ್ಲೇ ಚುನಾವಣೆ ಮಾಡಬೇಕು. ಯಾರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ಪಕ್ಷ ಗಮನಿಸುತ್ತದೆ. ವಿನಯ ಕುಲಕರ್ಣಿ ಅವರಿಗೂ ಜವಾಬ್ದಾರಿ ನೀಡಲಾಗುವುದು. ಆಕಾಂಕ್ಷಿಯಾಗಿದ್ದ ಮನೋಹರ ತಹಶೀಲ್ದಾರ್ ಅವರಿಗೆ ಪಕ್ಷ ದೊಡ್ಡ ಜವಾಬ್ದಾರಿ ನೀಡಲಿದೆ.
ವಿಧಾನ ಪರಿಷತ್ತು ಪ್ರತಿಪಕ್ಷ ನಾಯಕ ಎಸ್. ಆರ್.ಪಾಟೀಲ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ಅವರು ಸವಾಲಾಗಿ ಸ್ವೀಕರಿಸಿದ್ದಾರೆಂದು ಹೇಳುತ್ತಿದ್ದಾರೆ. ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಕೇಂದ್ರದ ಎಲ್ಲಾ ಸಚಿವರಿದ್ದರೂ ಮಮತಾ ಬ್ಯಾನರ್ಜಿ ಮುಂದೆ ಏನೂ ನಡೆಯಲಿಲ್ಲ. ಹಾನಗಲ್ಲ, ಸಿಂದಗಿ ಎರಡು ಕ್ಷೇತ್ರದಲ್ಲಿ ಗೆಲುವು ನಿಶ್ಚಿತವಾಗಿದೆ. ಎಫ್‌ಐಆರ್ ಇಲ್ಲದೆ 48 ಗಂಟೆಗಳ ಕಾಲ ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಹಿಂದೆ ಇಂದಿರಾ ಗಾಂಧಿಯವರನ್ನು ಅಂದಿನ ಸರಕಾರ ಬಂಧಿಸಿತ್ತು. ನಂತರ ಪಕ್ಷದ ಅಧಿಕಾರಕ್ಕೆ ಬಂದಿತ್ತು. ಹಿಂದಿನ ಘಟನೆ ಇದೀಗ ಪುನರಾವರ್ತನೆಯಾಗಿದ್ದು, ಇತಿಹಾಸ ಮರುಕಳಿಸಲಿದೆ.
ಮುಖಂಡ ಬಿ.ಕೆ.ಹರಿಪ್ರಸಾದ ಮಾತನಾಡಿ, ರಾಷ್ಟ್ರ ಬಹಳ ಸಂದಿಗ್ಧ ಪರಿಸ್ಥಿತಿಯಿದೆ. ಸಾಮಾನ್ಯರ ಪರಿಸ್ಥಿತಿ ಬೇಡ. ಪ್ರಿಯಾಂಕ ಗಾಂಧಿಯಂತಹವರನ್ನು ಎರಡು ದಿನ ಕಾನೂನು ಬಾಹಿರ ಬಂಧನ ಮಾಡುತ್ತಾರೆಂದರೆ ಅಧಿಕಾರದ ದರ್ಪ ತುಂಬಿ ತುಳುಕುತ್ತಿದೆ. ಕಾಂಗ್ರೆಸ್ ಪಕ್ಷ ದುರ್ಬಲವಾಗಿಲ್ಲ. ದೇಶ ದುರ್ಬಲವಾಗಿದೆ. ಈ ದೇಶವನ್ನು ಉಳಿಸಬೇಕು ಎಂದರು. ಹಾನಗಲ್ಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಮಾತನಾಡಿ, 2023 ವಿಧಾನಸಭೆ ಚುನಾವಣೆ ಯಾತ್ರೆ ಹಾನಗಲ್ಲ ಚುನಾವಣೆ ಮೂಲಕ ಆರಂಭವಾಗಲಿದೆ. ಜನ ವಿರೋಧಿ ನೀತಿ ಅಲೆ ಹೆಚ್ಚಾಗಿದೆ. ಪ್ರತಿಯೊಂದು ಬೂತ್‌ನಲ್ಲಿ 25-30 ಸಕ್ರಿಯ ಕಾರ್ಯಕರ್ತರಿದ್ದಾರೆ. ಪ್ರತಿಯೊಂದು ಬೂತ್‌ನಲ್ಲಿ 350-400 ಕಾಂಗ್ರೆಸ್ ಬೂತ್‌ಗಳಿವೆ. ಅಲ್ಲಿನ ಉಸ್ತುವಾರಿಗಳು 50-75 ಹೆಚ್ಚಿಸಿದರೆ ಗೆಲುವಿನ ಅಂತರ 30 ಸಾವಿರ ಅಂತರ ಹೆಚ್ಚಾಗಲಿದೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಮುಖಂಡರಾದ ಕೆ.ಬಿ.ಕೋಳಿವಾಡ, ಲಕ್ಷ್ಮೀ ಹೆಬ್ಟಾಳ್ಕರ್ ಮಾತನಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಧ್ರುವ ನಾರಾಯಣ, ಸಲೀಂ ಅಹ್ಮದ್, ಶಾಸಕರಾದ ಯು.ಟಿ. ಖಾದರ, ಬೈರತಿ ಸುರೇಶ, ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಮುಖಂಡರಾದ ಅಲ್ಲಂ ವೀರಭದ್ರಪ್ಪ, ಎ.ಎಂ.ಹಿಂಡಸಗೇರಿ, ಮನೋಹರ ತಹಶೀಲ್ದಾರ, ಪುಷ್ಪಾ ಅಮರನಾಥ ಇನ್ನಿತರರಿದ್ದರು.