ಬೆಳಗಾವಿ : ಇದು ಪ್ರಜಾಪ್ರಭುತ್ವ, ರೈತ ಮುಖಂಡರಿರಲಿ, ಕಾರ್ಮಿಕ ಮುಖಂಡರಿರಲಿ ಅವರ ಪ್ರತಿಭಟನೆ ಹತ್ತಿಕ್ಕಲು ಕಾನೂನು ದುರ್ಬಳಕೆ ಸರಿಯಲ್ಲ ಎಂದು ಬಸವಕಲ್ಯಾಣದಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಶನಿವಾರ ಮಧ್ಯಾಹ್ನ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ನಾವು ರಾಜಕೀಯದವರು ನಾವು ಸಭೆ ಮಾಡುತ್ತಿದ್ದೇವೆ. ಇದು ಕೂಡ ಸರ್ಕಾರದ ವಿರುದ್ಧದ ಪ್ರತಿಭಟನೆಯೆ. ಅವರನ್ನು ಹೊಗಳುವುದು ಸಭೆ, ಬೈದರೇ ಕೆಟ್ಟದ್ದಾ? ಅವರು ಮಾಡಿರುವ ತಪ್ಪನ್ನು ವಿರೋಧಿಸುತ್ತೇವೆ. ಈ ಸಂಘಟನೆಗಳು ಅವರ ಕಷ್ಟಗಳನ್ನು ಹೇಳಿಕೊಂಡು ಚರ್ಚೆ ಮಾಡುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೆ ನೀಡಲಾಗಿರುವ ಹಕ್ಕನ್ನು ಮೊಟಕು ಮಾಡುತ್ತಿರುವುದು ಸರಿಯಲ್ಲ. ನಾನು ಇದನ್ನು ಖಂಡಿಸುತ್ತೇನೆ ಎಂದರು.
ಸರ್ಕಾರವೇ ನೌಕರರ ಬಳಿ ಹೋಗಿ ಮಾತನಾಡಲಿ. ಅಥವಾ ಅವರನ್ನು ಕರೆಸಿಕೊಂಡು ಮಾತನಾಡಲಿ. ಅದನ್ನು ಬಿಟ್ಟು ಅವರನ್ನು ಬಂಧಿಸುವುದು ಸರಿಯಲ್ಲ. ದೆಹಲಿಯಲ್ಲಿ ನಡೆಯುತ್ತಿರುವ ರೀತಿಯಲ್ಲೇ ಇಲ್ಲೂ ಪ್ರತಿಭಟನೆ ಮಾಡಲಿ ಅಂತಾ ಈ ರೀತಿ ಮಾಡುತ್ತಿದ್ದಾರೆ. ಇದು ಹೆಚ್ಚು ದಿನ ಉಳಿಯಲ್ಲ. ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಪ್ರತಿಭಟನೆ ಹತ್ತಿಕ್ಕುತ್ತಿರುವುದಕ್ಕೆ ನಾವು ಯಾವ ದರ್ಬಾರ್ ಎಂದು ಕರೆಯೋಣ. ಇದಕ್ಕೆ ಹೊಸ ಪದ ಹುಡುಕಿಕೊಡಿ ಎಂದರು.
ಅರುಣ್ ಸಿಂಗ್ ಅವರಿಗೆ ಸೋಲಿನ ಭಯ: ‘ನಮ್ಮ ಅಭ್ಯರ್ಥಿ ಮೂಢನಂಬಿಕೆ ಬೇಡ ಎಂದು ಹೇಳುತ್ತಾರೆ. ನಮಗೆ ಒಂದು ನಂಬಿಕೆ ಇದೆ. ಅವರಿಗೆ ಅವರದೇ ಆದ ನಂಬಿಕೆ ಇದೆ. ಅದರಲ್ಲಿ ತಪ್ಪೇನಿದೆ? ಅವರು ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ನ ತತ್ವ, ನೀತಿ ಇದೆ. ವೈಯಕ್ತಿಕ ವಿಚಾರಗಳೇ ಬೇರೆ. ಅವರು ಶಾಸಕರಾದ ಮೇಲೆ ಸಂವಿಧಾನಬದ್ಧವಾಗಿ ಪ್ರಮಾಣವಚನ ತೆಗೆದುಕೊಂಡಿದ್ದು, ಅದಕ್ಕೆ ಬದ್ಧರಾಗಿದ್ದಾರೆ.
ಅರುಣ್ ಸಿಂಗ್ ಅವರಿಗೆ ತಮ್ಮ ಅಭ್ಯರ್ಥಿ ಸೋಲುತ್ತಾರೆ ಎಂಬ ಭಯ ಬಂದಿದೆ. ಹೀಗಾಗಿ ನಮ್ಮ ಅಭ್ಯರ್ಥಿ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಮೊದಲು ಏರಿಕೆ ಮಾಡಲಾಗಿರುವ ಗೊಬ್ಬರ, ಪೆಟ್ರೋಲ್, ಡೀಸೆಲ್, ಗ್ಯಾಸ್, ಎಣ್ಣೆ, ಕಬ್ಬಿನ, ಸೀಮೆಂಟ್ ದರವನ್ನು ಇಳಿಸಲಿ ಆಮೇಲೆ ಗಣಿತದ ಬಗ್ಗೆ ಮಾತನಾಡೋಣ ಎಂದರು.