Advertisement

ಆಪರೇಷನ್ ಕಮಲದಿಂದ ಜನ್ಮ ತಾಳಿದ ಸರ್ಕಾರದಿಂದ ರಾಜ್ಯಕ್ಕೆ ಕಪ್ಪು ಚುಕ್ಕೆ ಬಂದಿದೆ: ಡಿಕೆಶಿ

05:47 PM Apr 24, 2022 | Team Udayavani |

ದಾವಣಗೆರೆ: ಕರ್ನಾಟಕದಲ್ಲಿ ಬುಲ್ಡೋಜರ್ ಮಾದರಿ ಕಾನೂನು ತರಲು ಇದೇನು ಉತ್ತರ ಪ್ರದೇಶ ಅಲ್ಲ ಎಂದು  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದರು.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಮಾದರಿ ತರಲು ಅಲ್ಲಿ ಬೇರೆ ಬೇರೆ ವಿಷಯಗಳು ಇದ್ದವು. ಆದರೆ, ರಾಜ್ಯದಲ್ಲಿ ಪ್ರಜ್ಞಾವಂತ ಜನರಿದ್ದಾರೆ. ಅಂತಹ ಪದ್ಧತಿ ತರಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಕರ್ನಾಟಕವನ್ನು ಉತ್ತರ ಪ್ರದೇಶದೊಂದಿಗೆ ಹೋಲಿಸಬಾರದು ಎಂದರು.

ರಾಜ್ಯದಲ್ಲಿ ಯಾಕಾದರೂ ಬಿಜೆಪಿ ಸರ್ಕಾರ ಬಂದಿದೆಯೋ ಎಂದು ಜನ ಕೊರಗುತ್ತಿದ್ದಾರೆ. ಬಿಜೆಪಿಯವರು ಅಧಿಕಾರಕ್ಕೆ ಬಂದಿರುವುದು ಜನಾದೇಶದಿಂದಲ್ಲ. ಬದಲಿಗೆ ಶಾಸಕರನ್ನು ಖರೀದಿ ಮಾಡಿ ಆಪರೇಷನ್ ಕಮಲ ಮೂಲಕ. ಆಪರೇಷನ್ ಕಮಲದ ಮೂಲಕ ಅಧಿಕಾರ ನಡೆಸುತ್ತಿರುವುದನ್ನು ಸದನದಲ್ಲೇ ಶಾಸಕ ಶ್ರೀನಿವಾಸಗೌಡರೆ ಒಪ್ಪಿಕೊಂಡಿದ್ದಾರೆ. ಆಪರೇಷನ್ ಕಮಲದಿಂದ ಬಿಜೆಪಿ ಸರ್ಕಾರ ಜನ್ಮ ತಾಳಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ:ಉನ್ನತ ಹುದ್ದೆಗಳಿಗೆ ಆರ್ ಎಸ್ ಎಸ್ ಕಾರ್ಯಕರ್ತರ ನೇಮಕದ ಯತ್ನ ನಡೆದಿದೆ : ಸತೀಶ್ ಜಾರಕಿಹೊಳಿ

ಈ ರೀತಿ ಅಕ್ರಮವಾಗಿ ಸರ್ಕಾರ ಮಾಡಿರುವ ಬಿಜೆಪಿಯವರು ಔಷಧಿ, ಗೊಬ್ಬರ, ನೇಮಕಾತಿ ಎಲ್ಲದರಲ್ಲೂ ದುಡ್ಡು ಹೊಡೆಯುತ್ತಿದ್ದಾರೆ. ಕಾಮಗಾರಿಗಳಲ್ಲಿ ಶೇ.40 ರಷ್ಟು ಕಮಿಷನ್ ಪಡೆಯುತ್ತಿದ್ದಾರೆ. ಬಿಜೆಪಿ ಇವತ್ತು ಇರುತ್ತದೆ, ನಾಳೆ ಹೋಗುತ್ತದೆ. ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ಕಪ್ಪು ಚುಕ್ಕೆ ಬಂದಿದೆ ಎಂದು ದೂರಿದರು.

Advertisement

ಕಬ್ಬಾಳಮ್ಮ ದೇವಸ್ಥಾನದಲ್ಲಿ ಸಾವಿರ ಮರಿ ಕಡಿಯುತ್ತಾರೆ. ಕಡಿದಿದ್ದನ್ನು ಮುಸ್ಲಿಂರೇ ಕ್ಲೀನ್ ಮಾಡುತ್ತಾರೆ. ಕೋಲಾರ, ರಾಮನಗರದಲ್ಲಿ ಮಾವಿನ ತೋಪಿಗೆ ಔಷಧಿ ಹೊಡೆಯುವರು ಯಾರು? ಚಿತ್ರದುರ್ಗದಲ್ಲಿ ಕುರಿಗಳ ವ್ಯಾಪಾರ ಆಗುತ್ತಿಲ್ಲ ಎನ್ನುವ ವರದಿ ನೋಡಿದೆ. 8 ಸಾವಿರವಿದ್ದ ಕುರಿಗಳು 3-4 ಸಾವಿರಕ್ಕೆ ಮಾರುತ್ತಿದ್ದಾರೆ. ಈಗ ಬಿಜೆಪಿಯವರು ಕುರಿಗಳನ್ನು ತಗೊಂಡು ಹೋಗುತ್ತಾರಾ ಎಂದು ಪ್ರಶ್ನಿಸಿದರು.

ಗೃಹ ಸಚಿವ ಅರಗ ಜ್ಞಾನೇಂದ್ರ ಬದಲಾವಣೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅರಗ ಜ್ಞಾನೇಂದ್ರ ಅವರಂತಹ ಮುತ್ತುರತ್ನವನ್ನು ಅವರೇ ಇಟ್ಟಿಕೊಳ್ಳಲಿ. ಅಂತಹವರು ಬಿಜೆಪಿಯಲ್ಲಿ ಇದ್ದಾರೆ ಎಂದು ಹೇಳಲು ನಮಗೂ ಶಕ್ತಿ ಬರುತ್ತದೆ ಎಂದರು.

ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಬೇಕು. ಬಿಜೆಪಿಯವರು ಹಲಾಲ್‌‌, ಜಟ್ಕಾ ಕಟ್ ಇಲ್ಲಸಲ್ಲದ ವಿಚಾರ ಮುನ್ನೆಲೆಗೆ ತರುತ್ತಿದ್ದಾರೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next