ಮೈಸೂರು: ಇವರ ಡಬಲ್ ಇಂಜಿನ್ ಸರ್ಕಾರ ಹೈ ಸ್ಪೀಡಾಗಿ ಹೋಗಿಲ್ಲ. ಅದರಿಂದ ಕೇವಲ ಹೊಗೆ ಬಂತೇ ಹೊರತು, ಇಂಜಿನ್ ಮುಂದೆ ಹೋಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳಿನ ರಾಜ್ಯ ಸರ್ಕಾರದ ಬಜೆಟ್ ಅಂತಿಮ ಬಜೆಟ್ ಇರಲಿದೆ. ಹಿಂದಿನ ವರ್ಷದ ಬಜೆಟ್ ಕೇವಲ ಘೋಷಣೆ, ಭರವಸೆಗಳ ಭಾಷಣದ ಬಜೆಟ್ ಆಗಿತ್ತು. ಕಳೆದ ಬಾರಿಯ ಬಜೆಟ್ ಪುಸ್ತಕ ನನ್ನ ಬಳಿಯಿದೆ. ಜನರಿಗೆ ಎಷ್ಟು ಭರವಸೆ ಕೊಟ್ಟಿದ್ದರು, ಎಷ್ಟು ಅನುಷ್ಠಾನಕ್ಕೆ ತಂದರೆಂದು ಬೊಮ್ಮಾಯಿ ಅವರು ಇಂದು ಸಂಜೆಯೊಳಗೆ ಹೇಳಬೇಕು. ನಾನು ಜನರಿಗೆ ನುಡಿದಂತೆ ನಡೆದಿದ್ದೇನೆ ಅಂತ ಬಸವರಾಜ ಬೊಮ್ಮಾಯಿ ಸಂಜೆಯೊಳಗೆ ಹೇಳಬೇಕು. ಹಿಂದಿನ ಬಜೆಟ್ ಜಾರಿಯಾಗದೆ ಮತ್ತೆ ಬಜೆಟ್ ಮಾಡಿದರೆ ಅದು ಭಾಷಣ ಮಾತ್ರ ಆಗುತ್ತದೆ ಎಂದರು.
ನಿಮ್ಮ ಪ್ರಣಾಳಿಕೆಯ 90% ಜಾರಿಗೆ ತರಲಾಗಿಲ್ಲ. ಯಡಿಯೂರಪ್ಪ ಹಸಿರು ಟವೆಲ್ ಹಾಕೊಂಡು ಪ್ರಮಾಣ ವಚನ ಸ್ವೀಕರಿಸಿದ್ದರು. ರೈತರಿಗೆ ಮೀಸಲಾದ ಕಾರ್ಯಕ್ರಮ ಬಜೆಟ್‌ನಲ್ಲಿ ತರಬೇಕಿತ್ತು. ಆದರೆ ಬರಿ ಸುಳ್ಳು ಹೇಳುತ್ತಿದ್ದೀರಿ. ಯಾವ ರೈತನಿಗೆ ಆದಾಯ ಒಂದುವರೆ ಪಟ್ಟಾಗಿದೆ ಹೇಳಿ? ರೈತ ಬಂಧು ಆವರ್ಥ ನಿಧಿ ಎಲ್ಲಿಟ್ಟಿದ್ದೀರಿ ಹೇಳಿ. ರೈತರ ಪಂಪ್‌ಸೆಟ್‌ಗೆ 10 ಗಂಟೆ ಉಚಿತ ವಿದ್ಯುತ್ ಕೊಟ್ಟಿದ್ದೀರಾ. ನಮಗೆ ಉಚಿತ ವಿದ್ಯುತ್ ಬಗ್ಗೆ ಟೀಕೆ ಮಾಡುತ್ತೀರಿ. ಹಾಗಾದ್ರೆ ನೀವು ಯಾಕೆ ಹೇಳಿದ್ದೀರಿ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.
ಇದನ್ನೂ ಓದಿ:Watch: ತೆರೆದ ಬಾವಿಗೆ ಬಿದ್ದ ಚಿರತೆ ಮತ್ತು ಬೆಕ್ಕು…ಮುಂದೇನಾಯ್ತು? ವೈರಲ್ ವಿಡಿಯೋ
ಮೈಸೂರು- ಬೆಂಗಳೂರು ಹೈವೇಯಲ್ಲಿ 250 ರೂಪಾಯಿ ಟೋಲ್ ನಿಗದಿಗೆ ಆಕ್ರೋಶ ಹೊರಹಾಕಿದ ಅವರು, ಸರ್ವಿಸ್ ರಸ್ತೆ ನೀಡುವವರೆಗೂ ಟೋಲ್ ಸಂಗ್ರಹ ಮಾಡಕೂಡದು. ಟೋಲ್ ಕಟ್ಟಲು ಆಗದವರಿಗೆ ಸರ್ವಿಸ್ ರೋಡ್ ವ್ಯವಸ್ಥೆ ಮಾಡಿದ ನಂತರ ಟೋಲ್ ಸಂಗ್ರಹ ಮಾಡಿ. ಮೋದಿಯವರು ಮೈಸೂರನ್ನು ಪ್ಯಾರಿಸ್ ಮಾಡುತ್ತೇವೆ ಎಂದಿದ್ದರು, ಆದರೆ ಪ್ಯಾರಿಸ್ ಮಾಡೋದು ಬೇಡ. ಪ್ಯಾರಿಸ್ ಮಾದರಿಯಲ್ಲಿ ಒಂದು ರಸ್ತೆಯನ್ನಾದರೂ ನಿರ್ಮಿಸಿಕೊಡಿ ಸಾಕು ಎಂದರು.