Advertisement

Koppala; ಶೆಟ್ಟರ್ ಆಡಿದ ನುಡಿಮುತ್ತು ಗಮನಿಸಿ ಎಂಎಲ್ ಸಿ ಮಾಡಿದ್ದೆವು: ಡಿಕೆ ಶಿವಕುಮಾರ್

05:29 PM Jan 27, 2024 | Team Udayavani |

ಕೊಪ್ಪಳ: ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಗೆ ಬಿಜೆಪಿಯವರಿಂದಾದ ಅನ್ಯಾಯದಿಂದ ಬಂದಿದ್ದರು. ಕಾಂಗ್ರೆಸ್ ನಿಂದ ಟಿಕೆಟ್ ಕೊಟ್ಟಿದ್ದೆವು, ಗೆಲ್ಲುತ್ತಾರೆ ಎಂದುಕೊಂಡಿದ್ದೆವು. ಆದರೆ ಅವರು ಬಹಳ ಅಂತರದಿಂದ ಸೋತರು. ಮಾಜಿ ಸಿಎಂ ಬಂದರೆಂದು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತ ಮಾಡಿದ್ದೆವು. ಬಿಜೆಪಿ ಬಗ್ಗೆ ಆಡಿದ ಮಾತು, ನುಡಿದಂತಹ ನುಡಿಮುತ್ತು ಗಮನಿಸಿ ಎಂಎಲ್ ಸಿ ಮಾಡಿದ್ದೆವು. ಆದರೆ ಈಗ ಪಕ್ಷ ಬಿಟ್ಟು ಹೋದರು. ಸಿಎಂ, ಡಿಸಿಎಂ ಆದವರು ನಮ್ಮ ಮನೆಗೆ ಬಂದರು ಎಂದುಕೊಂಡಿದ್ದೆವು. ಆದರೆ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಹೋದರು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಯಾವಾಗಲೂ ನಿಂತ ನೀರಲ್ಲ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುತ್ತಾರೆ, ಬರುತ್ತಾರೆ. ಹೋಗುವುದು, ಬರುವುದು ಸಾಮಾನ್ಯ ವಿಚಾರ. ಆದರೆ ಯಾರೇ ಪಕ್ಷಕ್ಕೆ ಬರುವಾಗ ಪೂರ್ವಾಪರ ತಿಳಿದುಕೊಂಡು ಸೇರಿಸಿಕೊಳ್ಳಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದ್ದಾರೆ ಎಂದರು.

ತುಂಗಭದ್ರಾ ಸಮಾನಾಂತರ ಜಲಾಶಯ ವಿಚಾರಕ್ಕೆ ಮಾತನಾಡಿ, ಸಮಾನಾಂತರ ಜಲಾಶಯ ನಿರ್ಮಾನಕ್ಕೆ ಸರಕಾರ ಬದ್ಧವಿದೆ. ಆಂಧ್ರಪ್ರದೇಶ, ತೆಲಂಗಾಣ ಸಿಎಂಗಳಿಗೆ ಪತ್ರ ಬರೆದಿದ್ದೇನೆ. ಮೂರು ರಾಜ್ಯದ ಸಚಿವರು ತೀರ್ಮಾನಕ್ಕೆ ಬರೋಣ ಎಂದಿದ್ದಾರೆ. ತೆಲಂಗಾಣ ರಾಜ್ಯದವರು ಚುನಾವಣಾ ಬ್ಯೂಸಿಯಲ್ಲಿ ಇದ್ದಾರೆ. ಹೀಗಾಗಿ ನಮಗೆ ಎರಡೂ ರಾಜ್ಯದವರು ಸಮಯ ಕೊಟ್ಟಿಲ್ಲ. ಸುಖಾಸುಮ್ಮನೆ 30 ಟಿಎಂಸಿ ನೀರು ಕಳೆದುಕೊಳ್ತಿದ್ದೇವೆ. ಇದು ಕರ್ನಾಟಕ ರಾಜ್ಯಕ್ಕೆ ದೊಡ್ಡ ನಷ್ಟ. ಸಮಾನಾಂತರ ಜಲಾಶಯ ಕಟ್ಟಬೇಕೆಂದು ಬಹಳ ದಿನದ ಕನಸು. ಬಹಳ ವರ್ಷದಿಂದ ಸಾವಿರಾರು ಜನರು ಹೋರಾಟ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸಹ ಅಧಿವೇಶನದಲ್ಲಿ ಮಾತಾಡಿದ್ದಾರೆ ಎಂದರು.

ಗವಿ ಮಠದ ಇತಿಹಾಸ ನಾನು ಕೇಳಿದ್ದೆ. ಬಹಳ ದಿನದ ಆಸೆ, ತುಡಿತವಿತ್ತು. ಈ ಭಾಗದ ನಾಯಕರುಗಳು ಬರಲು ಬಹಳ ಒತ್ತಾಯ ಮಾಡಿದರು. ಹೀಗಾಗಿ ನಾನು ಗವಿಸಿದ್ದೇಶ್ವರ ಜಾತ್ರೆಗೆ ಬಂದಿದ್ದೇನೆ. ಉತ್ತರ ಕರ್ನಾಟಕ ಭಾಗದಲ್ಲಿ ಬಹಳ ಕ್ರಾಂತಿ ನಡೆಯುತ್ತಿದೆ. ಶ್ರೀಗಳಿಂದ ಕೊಪ್ಪಳದಲ್ಲಿ ಬಹಳ ಬದಲಾವಣೆಯಾಗುತ್ತಿದೆ. ಈ ಭಾಗದ ಜನಕ್ಕೆ ಗವಿ ಶ್ರೀಗಳು ಶಕ್ತಿ ತುಂಬಿದ್ದಾರೆ. ಸರ್ಕಾರದಿಂದಲೂ ಮಠಕ್ಕೆ ಶಕ್ತಿ ತುಂಬಲು ಬಂದಿದ್ದೇನೆ. ರಾಜ್ಯದ ಬೃಹತ್ ಕಾರ್ಯಕ್ರಮಗಳಲ್ಲಿ ಇದೊಂದು ದೊಡ್ಡ ಧಾರ್ಮಿಕ ಜಾತ್ರೆ. ಜನರ ಭಾವನೆ, ನಂಬಿಕೆ ಜೊತೆಗೆ ಇದ್ದೇನೆ ಎಂದರು.

ಬಿಜೆಪಿ ಸರ್ಕಾರದಲ್ಲಿ ಗವಿ ಮಠಕ್ಕೆ ಮಂಜೂರಾದ ಹಣವನ್ನು ಕಾಂಗ್ರೆಸ್ ತಡೆಹಿಡಿದಿದೆ ಎಂಬ ಆರೋಪಕ್ಕೆ ಮಾತನಾಡಿದ ಅವರು, ಆರೋಪ ಮಾತನಾಡುವುದು ಮುಖ್ಯವಲ್ಲ, ಜೋಬಲ್ಲಿ ದುಡ್ಡು ಬಂದರೆ ಮಾತಾಡಬೇಕು. ಐದು ಗ್ಯಾರಂಟಿ ಕೊಟ್ಟಿದ್ದೇವೆ, ಜನರಿಗೆ ಉಪಯೋಗವಾಗುತ್ತಿದೆ. ಬಿಜೆಪಿಯವರು ಆದೇಶ ಮಾಡಿದ್ದಾರೆ, ಮಠಕ್ಕೆ ಹಣ ಕೊಟ್ಟಿಲ್ಲ. ಐದು ಗ್ಯಾರಂಟಿ ಅವರು ಭಾವನೆ ಮೇಲೆ ಹೋಗುತ್ತಿದ್ದಾರೆ ಎಂದರು.

Advertisement

ನಿಗಮ ಮಂಡಳಿ ಸ್ಥಾನ ಬಹಳ ಜನ ಬೇಡ ಅಂದಿದ್ದಾರೆ. ಬಹಳ ಜನರು ಅಧ್ಯಕ್ಷ ಸ್ಥಾನ ಬೇಡ ಅಂದಿದ್ದಾರೆ. ಬೇಡ ಎಂದವರನ್ನ ಕರೆಸಿ ಮಾತಾಡಿ ಸರಿ ಮಾಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next