Advertisement

ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆಗೆ ತಕರಾರರಿಲ್ಲ: ಡಿ.ಕೆ.ಶಿವಕುಮಾರ್

09:29 PM Mar 24, 2022 | Team Udayavani |

ಕೊಪ್ಪಳ: ಪಠ್ಯ ಪುಸ್ತಕಗಳಲ್ಲಿ ಭಗವದ್ಗೀತೆ ಸೇರ್ಪಡೆ ಮಾಡುವ ವಿಚಾರಕ್ಕೆ ನಮ್ಮದೇನು ತಕಾರರು ಇಲ್ಲ. ಕಾಂಗ್ರೆಸ್ ಪಕ್ಷವೇ ಮೊದಲು ಇಡೀ ದೇಶಕ್ಕೆ ಭಗವದ್ಗೀತೆಯನ್ನು ಪರಿಚಯಿಸುವ ಕೆಲಸ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈಗಾಗಲೇ ಪಠ್ಯದಲ್ಲಿ ಬುದ್ಧ, ಬಸವ, ಕ್ರಿಶ್ಚಿಯನ್, ಕುರಹಾನ್, ಭಗವದ್ಗೀತೆ, ಹಿಂದೂ ಧರ್ಮದ ಬಗ್ಗೆಯೂ ಇದೆ. ಈಗ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆಯ ಸೇರ್ಪಡೆ ಮಾಡುವ ವಿಚಾರ ಮಾತಾಡುತ್ತಿದ್ದಾರೆ. ಈಗ ಕೆಲವು ಅಂಶಗಳನ್ನು ಜಾಸ್ತಿ ಮಾಡ್ತೇವೆ ಎಂದು ಹೇಳ್ತಿದ್ದಾರೆ. ಅದಕ್ಕೆ ನಮ್ಮದೇನು ತಕಾರರು ಇಲ್ಲ. ಆದರೆ ಅವರು ಏನ್ ಮಾಡ್ತಾರೋ ನೋಡೋಣ ಎಂದರು.

ಈ ಹಿಂದೆಯೇ ದಿ.ರಾಜೀವ್ ಗಾಂಧಿ ಅವರು ದೇಶಕ್ಕೆ ಭಗವದ್ಗೀತೆಯನ್ನು ಪರಿಚಯಿಸಿಕೊಟ್ಟಿದ್ದಾರೆ. ಆಗ ಟೀವಿಗಳು ಇರಲಿಲ್ಲ. ದೂರದರ್ಶನದ ಮೂಲಕ ರಾಮಾಯಣ, ಮಹಾಭಾರತವನ್ನು ಜನರ ಮನೆ ಮನೆಗೆ ಪರಿಚಯಿಸುವ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷ. ಭಗವದ್ಗೀತೆಗೆ ಕಾಂಗ್ರೆಸ್ ಮೊದಲೇ ಬೇಸ್ ಹಾಕಿಕೊಟ್ಟಿದೆ. ಈಗ ಬಿಜೆಪಿಯವರು ಈ ವಿಚಾರ ಎತ್ತುತ್ತಿದ್ದಾರೆ ಎಂದರು.

ನಮ್ಮ ಆಚಾರ್ ವಿಚಾರ ಎಲ್ಲೆಡೆ ಪ್ರಚಾರ ಮಾಡಬೇಕು ಎಂದು ಸಂವಿಧಾನದಲ್ಲೇ ಹೇಳಿದೆ. ಕಾಂಗ್ರೆಸ್ ಪಕ್ಷ ಎಲ್ಲ ವರ್ಗದ ಜನರನ್ನು, ಧರ್ಮವನ್ನು ಪ್ರಚಾರ ಮಾಡಲು ಅವಕಾಶವನ್ನು ಮೊದಲೇ ಮಾಡಿ ಕೊಟ್ಟಿದೆ. ನಾವೇ ಮೊದಲು ದೇಶಕ್ಕೆ ಭಗವದ್ಗೀತೆ ಹೇಳಿದ್ದೇವೆ. ರಾಜೀವ್ ಗಾಂಧಿ ಅವರು ಈ ವಿಚಾರವನ್ನು ಮೊದಲೇ ಹೇಳಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲ ಧರ್ಮಕ್ಕೂ ರಕ್ಷಣೆ ಕೊಡಬೇಕು ಎಂದು ಸಂವಿಧಾನದಲ್ಲೇ ಬರೆದಿದ್ದಾರೆ. ಅದಕ್ಕೆ ಜವಾಹರ್ ಲಾಲ್ ನೆಹರು ಅವರೇ ಸ್ಟ್ಯಾಂಪ್ ಒತ್ತಿದ್ದಾರೆ ಎಂದರು.

ಮುಸ್ಲಿಂ ಸಮುದಾಯಕ್ಕೆ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ನಿಬಂಧ ಹೇರುವುದು ಸರಿಯಲ್ಲ. ಅದನ್ನು ಖಂಡಿಸುವೆ. ಆ ರೀತಿ ಮಾಡುವುದಲ್ಲ. ಮಾನವೀಯತೆ ದೃಷ್ಟಿಯಿಂದ, ಹೊಟ್ಟೆ ಪಾಡಿಗೆ ಮಾಡುತ್ತಿದ್ದಾರೆ. ಅವರದೇ ಆದಂತಹ ಕೆಲವು ವೃತ್ತಿಗಳಿವೆ. ಅವುಗಳನ್ನು ಮಾಡುತ್ತಿದ್ದಾರೆ. ಕೆಲವೊಂದು ದೇವಸ್ಥಾನಗಳ ಸಮಿತಿಯು ಆವರಣದ ಒಳಗೆ ವ್ಯಾಪಾರ ವಹಿವಾಟಿಗೆ ಕೆಲವು ನಿರ್ಧಾರ ಮಾಡಿಕೊಂಡಿದ್ದಾರೆ. ಆದರೆ ರಸ್ತೆ, ಜಾತ್ರೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ನಿಲ್ಲಿಸೋಕಾಗಲ್ಲ. ಆ ರೀತಿ ನಿರ್ಬಂಧ ಸರಿಯಲ್ಲ. ನಾವು ಮುಸ್ಲಿಂರ ವಿರೋಧಿಯಲ್ಲ. ನಾವು ಸಂವಿಧಾನದ ಪರವಾಗಿ ಇದ್ದೇವೆ ಎಂದರು.

Advertisement

ಕಾಂಗ್ರೆಸ್ ಸದಸ್ಯತ್ವ ನೊಂದಣಿಗೆ ಇನ್ನು ಏಳು ದಿನ ಬಾಕಿಯಿದೆ. ಕೊಪ್ಪಳ ಜಿಲ್ಲೆಯು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿ ಸದಸ್ಯತ್ವ ಮಾಡಿದ್ದು ನನಗೆ ಸಂತಸ ತಂದಿದೆ. ಎಲ್ಲ ಜಿಲ್ಲೆಯಲ್ಲೂ ನೊಂದಣಿ ಪ್ರಗತಿ ಕಾಣಲು ಪ್ರವಾಸ ಮಾಡುತ್ತಿದ್ದೇನೆ. ಜನತೆ ಬಿಜೆಪಿ ಆಡಳಿತ ಬೇಸತ್ತು ಕಾಂಗ್ರೆಸ್ ಸದಸ್ಯತ್ವ ಪಡೆಯಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸದಸ್ಯತ್ವದ ನೊಂದಣಿ 40-50 ಲಕ್ಷ ತಲುಪಬೇಕೆಂಬ ಆಸೆಯಿದೆ. ಇನ್ನು ಸದಸ್ಯತ್ವ ಪ್ರಕ್ರಿಯೆ ನಡೆದಿದೆ. ರಾಜಕಾರಣದಲ್ಲಿ ಆಸೆ ಇರಬೇಕು. ಹಾಗಾಗಿ ನಾವು ಹುರುಪಿನಿಂದಲೇ ಕೆಲವೊಂದು ಸ್ಪರ್ಧೆ ನಡೆಸಿದ್ದೇವೆ. ನಮ್ಮ ನೊಂದಣಿದಾರರಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next