Advertisement
ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬೆಂಬಲವಾಗಿ ನಿಂತಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ನಂತರ ಪರ್ಯಾಯ ಶಕ್ತಿಯಾಗಿ ಗುರುತಿಸಿಕೊಳ್ಳಲು ತೆರೆ ಮರೆಯಲ್ಲಿ ಕಸರತ್ತು ನಡೆಸಿದ್ದು, ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ, ಶಾಸಕರ ಅಸಮಾಧಾನ ಎಲ್ಲ ಸಮಸ್ಯೆಗಳಿಗೂ ಸಚಿವರು-ಶಾಸಕರು ಸಿದ್ದರಾಮಯ್ಯ ಅವರ ಬಳಿಯೇ ತೆರಳುತ್ತಿರುವುದರಿಂದ ನಾನೂ ಪಕ್ಷದ ನಾಯಕನಾಗಿ ನಿಮ್ಮ ನೆರವಿಗೆ ಬರುತ್ತೇನೆ ಎಂಬ ಸಂದೇಶ ರವಾನಿಸಲು ಉಪಹಾರ ಕೂಟ ಆಯೋಜಿಸಲಾಗಿತ್ತು.
Related Articles
ಉಪಹಾರ ಕೂಟದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಶೀಘ್ರವೇ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಾರ್ಯತಂತ್ರ ರೂಪಿಸುವ ಕುರಿತು ಚರ್ಚೆ ಮಾಡಿದ್ದೇವೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಎಲ್ಲ ಸಂದರ್ಭದಲ್ಲಿ ಕರೆಯಲು ಆಗುವುದಿಲ್ಲ. ಯಾವಾಗ ಅವರ ಅಗತ್ಯ ಇದೆಯೋ ಆಗ ಮಾತ್ರ ಕರೆಯುತ್ತೇವೆ. ಸಿದ್ದರಾಮಯ್ಯ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಅವರ ಮನೆಯಲ್ಲಿ ನಡೆದ ಸಭೆಯಲ್ಲಿನ ಸಲಹೆ ಸೂಚನೆಯಂತೆಯೇ ಇಂದಿನ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದರು.
Advertisement
ಇನ್ನು ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಖಾತೆಗಳ ಬದಲಾವಣೆ ಆಗುವುದಿಲ್ಲ. ಕೇವಲ ಸಂಪುಟ ವಿಸ್ತರಣೆಯಾಗಲಿದ್ದು, ವಿಸ್ತರಣೆ ಮಾಡುವುದು ಮುಖ್ಯಮಂತ್ರಿಗೆ ಬಿಟ್ಟ ವಿಚಾರ. ಚುನಾವಣೆಗೆ ಅಭ್ಯರ್ಥಿಗಳನ್ನು ಹೈ ಕಮಾಂಡ್ ನಿರ್ಧಾರ ಮಾಡುತ್ತದೆ. ಆದಾಯ ತೆರಿಗೆ ಇಲಾಖೆ ದಾಳಿ ಟಾರ್ಗೆಟ್ ಮಾಡುತ್ತಿರುವ ಬಗ್ಗೆ ಕಾಲ ಬಂದಾಗ ಉತ್ತರ ನೀಡುತ್ತೇನೆ ಎಂದು ಹೇಳಿದರು.
ಉಪಹಾರ ಕೂಟ ನಿರಂತರ?ಮತ್ತೂಂದು ಮೂಲಗಳ ಪ್ರಕಾರ, ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಸಚಿವರಲ್ಲಿ ಒಗ್ಗಟ್ಟಿದೆ ಎನ್ನುವುದು ತೋರಿಸಲು ಪ್ರತಿ ಸಂಪುಟ ಸಭೆ ನಡೆಯುವ ದಿನ ಬೆಳಗ್ಗೆ ಯಾರಾದರೊಬ್ಬರು ಸಚಿವರ ಮನೆಯಲ್ಲಿ ಉಪಹಾರ ಕೂಟ ಏರ್ಪಡಿಸಿ ಅಂದಿನ ಸಂಪುಟ ಸಭೆಯಲ್ಲಿ ಬರುವ ವಿಷಯಗಳ ಬಗ್ಗೆ ಚರ್ಚಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನೂ ಗಮನದಲ್ಲಿಟ್ಟುಕೊಂಡೇ ಒಮ್ಮತದ ತೀರ್ಮಾನ ಕೈಗೊಳ್ಳಬೇಕು. ಜತೆಗೆ ಸಂಪುಟದಲ್ಲೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಅವರ ಸೂಚನೆ ಮೇರೆಗೆ ಉಪಹಾರ ಕೂಟ ಆಯೋಜಿಸಲಾಗುತ್ತಿದೆ. ಮುಂದಿನ ಉಪಹಾರ ಕೂಟದ ಜವಾಬ್ದಾರಿ ಆರ್.ವಿ.ದೇಶಪಾಂಡೆಯವರದು ಎಂದು ಹೇಳಲಾಗಿದೆ. ಬೆಳ್ಳಿ ತಟ್ಟೆಯಲು ಉಪಹಾರ
ಸಚಿವ ಡಿ.ಕೆ. ಶಿವಕುಮಾರ್ ಅವರ ಸರ್ಕಾರಿ ನಿವಾಸ ಗುರುವಾರ ಸಚಿವರ ಸ್ವಾಗತಕ್ಕಾಗಿ ಹೂಗಳಿಂದ ಅಲಂಕಾರಗೊಂಡಿತ್ತು. ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಉಪಹಾರ ಕೂಟಕ್ಕೆ ಆಗಮಿಸಿದ ಸಚಿವರಿಗೆ ಬೆಳ್ಳಿ ತಟ್ಟೆ ಹಾಗೂ ಲೋಟದಲ್ಲಿ ಉಪಹಾರ ಬಡಿಸಲಾಗಿತ್ತು. ಇಡ್ಲಿ, ವಡೆ, ಚೌಚೌ ಬಾತ್, ಮಸಾಲೆ ದೋಸೆ, ಸೆಟ್‌ದೋಸೆ, ಪೂರಿ ಸಾಗು, ನೀರ್ ದೋಸೆ, ಪೊಂಗಲ್ ಹಾಗೂ ಮುಳಬಾಗಿಲು ದೋಸೆ ವಿಶೇಷವಾಗಿತ್ತು. ಉಪಹಾರ ಕೂಟಕ್ಕೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಆರ್.ವಿ ದೇಶಪಾಂಡೆ, ಕೆ.ಜೆ. ಜಾರ್ಜ್, ಯು.ಟಿ.ಖಾದರ್, ವೆಂಕಟರಮಣಪ್ಪ, ಕೃಷ್ಣ ಬೈರೇಗೌಡ, ಪುಟ್ಟರಂಗ ಶೆಟ್ಟಿ, ಪ್ರಿಯಾಂಕ್ ಖರ್ಗೆ, ಶಿವಾನಂದ ಪಾಟೀಲ್, ರಾಜಶೇಖರ ಪಾಟೀಲ್, ಶಿವಶಂಕರ ರೆಡ್ಡಿ, ಜಯಮಾಲಾ, ಜಮೀರ್ ಅಹಮದ್ ಖಾನ್ ಹಾಗೂ ಆರ್. ಶಂಕರ್ ಪಾಲ್ಗೊಂಡಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೂಡ ಪಾಲ್ಗೊಂಡಿದ್ದರು. ರಮೇಶ್ ಗೈರು
ಡಿ.ಕೆ.ಶಿವಕುಮಾರ್ ಜೊತೆ ಮುನಿಸಿಕೊಂಡಿದ್ದ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಉಪಹಾರ ಕೂಟದಿಂದ ದೂರ ಉಳಿದರು. ಮುಂಬೈನಲ್ಲಿರುವ ರಮೇಶ್ ಜಾರಕಿಹೊಳಿಯನ್ನು ಡಿ.ಕೆ. ಶಿವಕುಮಾರ್ ದೂರವಾಣಿ ಮೂಲಕ ಸಂಪರ್ಕಿಸಿದರು ಎಂದು ತಿಳಿದು ಬಂದಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿದೇಶ ಪ್ರವಾಸಕ್ಕೆ ತೆರಳಿದ್ದರಿಂದ ಅವರು ಸಭೆಗೆ ಹಾಜರಾಗಿರಲಿಲ್ಲ.