Advertisement

D.K. Shivakumar ಮುಖ್ಯಮಂತ್ರಿ ಆಗೋದು ನಿಶ್ಚಿತ : ಚನ್ನಗಿರಿ ಶಾಸಕ ಶಿವಗಂಗಾ

06:44 PM Jun 30, 2024 | Team Udayavani |

ಕೊಟ್ಟೂರು (ಬಳ್ಳಾರಿ): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮತ್ತು ಲೋಕಸಭೆ ಚುನಾವಣೆಯಲ್ಲಿ ಒಂಭತ್ತು ಸ್ಥಾನ ಪಡೆಯಲು ಪ್ರಮುಖ ಕಾರಣರಾದ ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್‌ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗೋದು ಖಚಿತ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ಸಿಎಂ, ಡಿಸಿಎಂ ಹುದ್ದೆಗಳಿಗೆ ದಂಗಲ್ ನಡೆದಿರುವ ನಡುವೆಯೇ  ಡಿಸಿಎಂ ಡಿ.ಕೆ.ಶಿವಕುಮಾರ್‌ರನ್ನು ಮುಖ್ಯಮಂತ್ರಿ ಮಾಡಲಿ, ಆಮೇಲೆ ಡಜನ್ ಡಿಸಿಎಂ ಮಾಡಲಿ ಎಂದು ಈ ಹಿಂದೆ ನೀಡಿದ್ದ ಹೇಳಿಕೆಯ ಸಮರ್ಥಿಸಿಕೊಂಡರು.

ಕೆಪಿಸಿಸಿ ಅಧ್ಯಕ್ಷರಾದವರನ್ನೇ ಮುಖ್ಯಮಂತ್ರಿಯಾಗಿ ಮಾಡುವುದು ಕಾಂಗ್ರೆಸ್‌ನಲ್ಲಿ ನಡೆದು ಬಂದ ಪದ್ಧತಿ.  ಆದರೆ ಈ ಬಾರಿ ಕೆಲ ಕಾರಣಕ್ಕಾಗಿ ಸಿದ್ದರಾಮಯ್ಯನವರನ್ನು ಹೈಕಮಾಂಡ್ ಮುಖ್ಯಮಂತ್ರಿಯಾಗಿಸಿದೆ. ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಗ್ಯಾರಂಟಿಗಳ ಸಮರ್ಥವಾಗಿ ಜಾರಿ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ನಂತರ ಶಿವಕುಮಾರ್  ಪಕ್ಷವನ್ನು ತಳ ಮಟ್ಟದಲ್ಲಿ ಸಂಘಟಿಸಿ ವಿಧಾನಸಭೆಯಲ್ಲಿ ಅತೀ ಹೆಚ್ಚು ಸ್ಥಾನ ಗಳಿಸಿ ಅಧಿಕಾರ ಗದ್ದುಗೆ ಹಿಡಿಯಲು ಮತ್ತು  ಲೋಕಸಭೆ ಚುನಾವಣೆಯಲ್ಲಿ ಒಂಭತ್ತು ಸ್ಥಾನ ಗಳಿಸಲು ಪ್ರಮುಖ ಕಾರಣರಾಗಿದ್ದಾರೆ. ಹೀಗಾಗಿ ಅವರು ಮುಖ್ಯಮಂತ್ರಿ ಆಗ್ಲೇಬೇಕು, ಮುಂದಿನ ದಿನಗಳಲ್ಲಿ ಆಗೇ ಆಗುತ್ತಾರೆ ಎಂದರು.

ಸಚಿವ ರಾಜಣ್ಣ ಬಹಿರಂಗ ಚರ್ಚಿಸಬೇಕಿಲ್ಲ:

ಡಿಸಿಎಅ ಹುದ್ದೆ ಬಯಸುವವರು ಪಕ್ಷದ ಚೌಕಟ್ಟಿನಲ್ಲಿ ಅಥವಾ ಹೈಕಮಾಂಡ್ ಬಳಿ ತೆರಳಿ ವಿಷಯ ಚರ್ಚೆ ನಡೆಸಬೇಕು. ಆದರೆ ಹಿರಿಯರು, ಅನುಭವಿಗಳು, ನಮ್ಮಂತ ಕಿರಿಯ ಶಾಸಕರಿಗೆ ಮಾದರಿಯಾಗಬೇಕಾದ ಸಚಿವರಾದ ಕೆ.ಎನ್.ರಾಜಣ್ಣ ಡಿಸಿಎಂ ಹುದ್ದೆ ಬಗ್ಗೆ ಬಹಿರಂಗವಾಗಿ ಚರ್ಚಿಸುವ ಅಗತ್ಯವಿರಲಿಲ್ಲ. ಡಿಕೆಶಿಯವರ ಶ್ರಮದಿಂದ ಇದೀಗ  ಸದೃಢವಾಗಿರುವ ಪಕ್ಷದ ರಾಜ್ಯಾಧ್ಯಕ್ಷರಾಗಲು ಸಿದ್ಧ ಎಂದು ಹೇಳುತ್ತಿರುವವರು, ಪಕ್ಷ ಕಷ್ಟದ ಕಾಲದಲ್ಲಿದ್ದಾಗ ಯಾರೂ ಮಾತನಾಡಿರಲಿಲ್ಲ. ಆಗ ಡಿಕೆಶಿಯವರು ಅದರ ಜವಾಬ್ದಾರಿ ಹೊತ್ತು ಪಕ್ಷವನ್ನು ಗಟ್ಟಿಗೊಳಿಸಿದ್ದಾರೆ ಎಂದು ಹೇಳಿದರು.

Advertisement

ಡಿಕೆಶಿಯವರು ಮುಖ್ಯಮಂತ್ರಿಯಾಗಲಿ ಎಂದು ಒಕ್ಕಲಿಗ ಸ್ವಾಮೀಜಿಯವರೊಬ್ಬರು ಬಹಿರಂಗವಾಗಿ ಹೇಳಿದ್ದರಲ್ಲಿ ತಪ್ಪೇನಿಲ್ಲ. ರಾಜ್ಯದ ಜನರ ಭಾವನೆಗಳಿಗೆ, ಭಕ್ತರ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ ಅಷ್ಟೆ. ಸಿಎಂ, ಡಿಸಿಎಂ ಹುದ್ದೆಗಳಿಗೆ ನಮ್ಮ ಪಕ್ಷದೊಳಗೆ ಮಾತುಗಳು ಕೇಳಿ ಬರುತ್ತಿವೆಯಾದರೂ, ಹಿಂಬಾಗಿಲ ಅಧಿಕಾರ ಹಿಡಿಯುವ ಕಾತರದಲ್ಲಿರುವ ಬಿಜೆಪಿ ಇದನ್ನು ದೊಡ್ಡದಾಗಿ ಬಿಂಬಿಸಿ ವ್ಯಾಪಕ ಪ್ರಚಾರ ಮಾಡುತ್ತಿದೆ. ಬಿಜೆಪಿ ಅಧಿಕಾರ ಹಿಡಿಯುವ ಕನಸು ಕಾಣುವುದು ಬಿಟ್ಟು ಬಿಡಲಿ. ಕಾಂಗ್ರೆಸ್ ಐದು ವರ್ಷ ಪೂರ್ಣಗೊಳಿಸುತ್ತದೆ ಎಂದರು.

ಶ್ರೀ ಸ್ವಾಮಿ ದರ್ಶನ ಪಡೆದ ಶಾಸಕ ಶಿವಗಂಗಾ ಬಸವರಾಜು ತಮ್ಮ ತೂಕದಷ್ಟೇ ಬೆಲ್ಲವನ್ನು ಸ್ವಾಮಿ ಪ್ರಸಾದ ನಿಲಯಕ್ಕೆ ದಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next