ಅಳಪ್ಪುಳ(ಕೇರಳ): ಕೆಲವು ನಾಯಕರು ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳಿಂದ ನೋಟಿಸ್ ಪಡೆದ ಕೂಡಲೇ ಪಕ್ಷವನ್ನು ತೊರೆದು ಬಿಜೆಪಿ ಮತ್ತು ಕೇಂದ್ರ ಸರಕಾರದ ಕಾಲಿಗೆ ಬೀಳುತ್ತಾರೆ. ಆದರೆ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತ್ರ ಇದಕ್ಕೆ ಬಗ್ಗಲಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಡಿಕೆಶಿಯನ್ನು ಹಾಡಿ ಹೊಗಳಿದ್ದಾರೆ.
ಕೇರ ಳದ ಅಳಪ್ಪುಳದಲ್ಲಿ ಜರಗಿದ ಪ್ರಚಾರ ಸಭೆ ಯಲ್ಲಿ ಮಾತನಾಡಿದ ವೇಣುಗೋಪಾಲ್, ವಿವಿಧ ತನಿಖಾ ಸಂಸ್ಥೆಗಳ ಮೂಲಕ ಬಿಜೆಪಿ ಹಾಕಿದ ಒತ್ತಡವನ್ನು ಡಿ.ಕೆ.ಶಿವಕುಮಾರ್ ಸೋಲಿಸಿದರು ಎಂದು ಹೇಳಿದ್ದಾರೆ.
ಯಾವುದೇ ಸಕಾರಣವಿಲ್ಲದೆ ಕೇಂದ್ರ ಸರಕಾರದ ಸಂಸ್ಥೆಗಳು ಜೈಲಿಗೆ ಕಳುಹಿಸಿದರೂ ಡಿಕೆ ಶಿ ಕಾಂಗ್ರೆಸ್‌ನಲ್ಲೇ ಉಳಿಯುವ ತಾಕತ್ತು ತೋರಿಸಿದರು. ಈ ಮಧ್ಯೆ ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳಿಂದ ನೋಟಿಸ್ ಪಡೆದ ಹಲವಾರು ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಶರಣಾದರು. ಡಿ.ಕೆ.ಶಿವಕುಮಾರ್ ಮಾತ್ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ತಾಯಿ ಎಂದು ಕರೆದರು. ಶಿವಕುಮಾರ್ ಅವರನ್ನು ಯಾವುದೇ ಕಾರಣವಿಲ್ಲದೆ ತಿಹಾರ್ ಜೈಲಿಗೆ ಕಳುಹಿಸಲಾಯಿತು. ಪಕ್ಷವನ್ನು ತೊರೆದರೆ ಕೇಸ್‌ಗಳಿಂದ ಮುಕ್ತಗೊಳಿಸಲಾಗುವುದು ಎಂದು ಅವರಿಗೆ ಹೇಳಲಾಯಿತು. ಇದನ್ನು ಅವರಿಗೆ ಯಾರು ಹೇಳಿದ್ದು ಎಂದು ಕೂಡ ನನಗೆ ಗೊತ್ತು. ಆದರೆ ಅವರು ಪಕ್ಷ ಬಿಡುವುದಿಲ್ಲ ಎಂದು ಹೇಳಿದರು. ಇದಕ್ಕಾಗಿ ಶಿವಕುಮಾರ್ ಅವರ ಬಗ್ಗೆ ನನಗೆ ತುಂಬಾ ಸಂತೋಷವಿದೆ ಎಂದು ಹೇಳಿದರು.