Advertisement

ರಾಜ್ಯದಲ್ಲಿ ಆಲಿಬಾಬಾ, 40 ಕಳ್ಳರ ಸರ್ಕಾರ: ಸಿದ್ದರಾಮಯ್ಯ ಆಕ್ರೋಶ

08:46 PM Jan 10, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಆಲಿಬಾಬಾ ಮತ್ತು 40 ಕಳ್ಳರ ಸರ್ಕಾರ ಅಧಿಕಾರದಲ್ಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವರಾಜ ಬೊಮ್ಮಾಯಿ ರಾಜ್ಯ ಕಂಡ ಭ್ರಷ್ಟ ಮುಖ್ಯಮಂತ್ರಿಯಷ್ಟೇ ಅಲ್ಲ, ಅತ್ಯಂತ ದುರ್ಬಲ ಮುಖ್ಯಮಂತ್ರಿ. ಇವರಿಂದ ರಾಜ್ಯದ ಘನತೆಗೆ ಕಳಂಕ ಬಂದಿದೆ ಎಂದು ದೂರಿದರು.

ಬಿಜೆಪಿ ಸರ್ಕಾರ ಅನೈತಿಕ ಮಾರ್ಗದ ಮೂಲಕ ರಚನೆಯಾದ ಸರ್ಕಾರ. 2018ರಲ್ಲಿ ಇವರಿಗೆ ಜನ ಪೂರ್ಣ ಪ್ರಮಾಣದಲ್ಲಿ ಆಶೀರ್ವಾದ ಮಾಡಿರಲಿಲ್ಲ, 104 ಸ್ಥಾನಗಳಲ್ಲಿ ಮಾತ್ರ ಗೆದ್ದಿದ್ದರು. ಆ ನಂತರ ಆಪರೇಷನ್‌ ಕಮಲದ ಮೂಲಕ ಅನೈತಿಕ ಮಾರ್ಗದಲ್ಲಿ ಈ ಸರ್ಕಾರ ರಾಜ್ಯದ ಮೇಲೆ ವಕ್ಕರಿಸಿಕೊಂಡಿದೆ. ಕೋಟ್ಯಂತರ ರೂ. ಪಾಪದ ಹಣ ಖರ್ಚು ಮಾಡಿ, ಶಾಸಕರನ್ನು ಕೊಂಡುಕೊಂಡು ಸರ್ಕಾರ ರಚನೆ ಮಾಡಿದ್ದಾರೆ. ಇದಕ್ಕೆ ಖರ್ಚು ಮಾಡಿದ ಸಂಪೂರ್ಣ ಹಣ ಭ್ರಷ್ಟಾಚಾರದ್ದು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರದ ಸಾಗರದಲ್ಲಿ ಮುಳುಗಿಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲಂತೂ ರಾಜ್ಯಕ್ಕೆ ದೊಡ್ಡ ಕಳಂಕವನ್ನು ತಂದಿದ್ದಾರೆ. ರಾಜ್ಯ ಕಂಡಂತಹ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದರೆ ಬಸವರಾಜ ಬೊಮ್ಮಾಯಿ. ಇವರು ಬರೀ ಭ್ರಷ್ಟ ಮಾತ್ರವಲ್ಲ, ಕೇಂದ್ರ ಸರ್ಕಾರದ ಮುಂದೆ ಹೇಡಿತನದಿಂದ ವರ್ತಿಸುವ ದುರ್ಬಲ ವ್ಯಕ್ತಿ ಕೂಡ ಹೌದು ಎಂದು ಆರೋಪಿಸಿದರು.

15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ 5495 ಕೋಟಿ ರೂ. ವಿಶೇಷ ಅನುದಾನ ರಾಜ್ಯಕ್ಕೆ ನೀಡಬೇಕು ಎಂದು ಶಿಫಾರಸು ಮಾಡಿತ್ತು. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರು ಈ ಶಿಫಾರಸನ್ನು ತಿರಸ್ಕಾರ ಮಾಡಿದರು. ರಾಜ್ಯದಿಂದ 25 ಜನ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ, ಸರ್ಕಾರವಾಗಲಿ, ಸಂಸದರಾಗಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಿಲ್ಲ ಎಂದು ಹೇಳಿದರು.

Advertisement

ಈ ಸರ್ಕಾರದ ದ್ವೇಷ ರಾಜಕೀಯದಿಂದ ಜನ ಬೇಸತ್ತು ಹೋಗಿದ್ದಾರೆ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಬಡವರು, ರೈತರು ಆತಂಕದಿಂದ ಬದುಕುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಾಗಿದೆ. ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಕರ್ನಾಟಕ ಇಂದು ಎರಡನೇ ಸ್ಥಾನದಲ್ಲಿದೆ. ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಎರಡು ದಶಕಗಳಷ್ಟು ಹಿಂದಕ್ಕೆ ಹೋಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

70 ವರ್ಷಗಳಲ್ಲಿ 2.42 ಲಕ್ಷ ಕೋಟಿ, ನಾಲ್ಕು ವರ್ಷಗಳಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದರ ಪರಿಣಾಮ ರಾಜ್ಯವು ಅಸಲು ಮತ್ತು ಬಡ್ಡಿ ರೂಪದಲ್ಲಿ 43,000 ಕೋಟಿ ಹಣ ಕಟ್ಟಬೇಕಾಗಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕಡಿಮೆಯಾಗಿ, ರಾಜ್ಯದ ಅಭಿವೃದ್ಧಿ ಕುಂಠಿತವಾಗಲಿದೆ. ಇಂದು ಪ್ರತಿ ಕನ್ನಡಿಗನ ಮೇಲೆ 86,000 ರೂ. ಸಾಲ ಇದೆ. ಹೀಗಾದರೆ ರಾಜ್ಯ ಉಳಿಯುತ್ತಾ? ಈ ರಾಜ್ಯವನ್ನು ಉಳಿಸಲು, ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡಲು ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಬೇಕು, ನಾವು ಗೆಲ್ಲಬೇಕು ಎಂಬ ಕಾರಣಕ್ಕೆ ಅಲ್ಲ.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next