Advertisement

ಅಧಿಕಾರಕ್ಕೆ ಬಂದ ತಿಂಗಳೊಳಗೆ ಭರವಸೆ ಈಡೇರಿಕೆ: ಡಿಕೆಶಿ

01:16 AM Jan 23, 2023 | Team Udayavani |

ಮಂಗಳೂರು: ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿದ್ದು, ಅಧಿಕಾರಕ್ಕೆ ಬಂದ ತಿಂಗಳೊಳಗೆ ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸಲಾಗುವುದು. ನುಡಿದಂತೆ ನಡೆವ ಇತಿಹಾಸ ಕಾಂಗ್ರೆಸ್‌ಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

Advertisement

ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಕರಾವಳಿ ಉತ್ಸವ ಮೈದಾನದಲ್ಲಿ ರವಿವಾರ ಆಯೋಜಿಸಲಾದ ಕಾಂಗ್ರೆಸ್‌ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಬಿಜೆಪಿ ಸರಕಾರಕ್ಕೆ 40 ಪರ್ಸೆಂಟ್‌ ಕಮಿಷನ್‌ ಸರಕಾರ ಎಂಬ ಬ್ರ್ಯಾಂಡ್‌ ಇದೆ. ಕಮಿಷನ್‌ ಇಲ್ಲದೆ ಯಾವುದೇ ಕಚೇರಿಗಳಲ್ಲಿ ಕೆಲಸ ಆಗುವುದಿಲ್ಲ ಎಂದು ಜನರಾಡುತ್ತಿದ್ದಾರೆ. ಇಂತಹ ಸರಕಾರ ಯಾಕಿರಬೇಕು ಎಂಬುದಕ್ಕೆ ಜನರು ಉತ್ತರಿಸಬೇಕು. ಪರಿಶುದ್ಧ ಸರಕಾರ ನೀಡುವುದಾಗಿ ಚುನಾವಣೆ ವೇಳೆ ಭ್ರಮೆ ಹುಟ್ಟಿಸುವ ಪ್ರಣಾಳಿಕೆ ನೀಡಿ, ಅಪರೇಶನ್‌ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಏನೂ ನೀಡಿಲ್ಲ. ಬಿಜೆಪಿಯವರು ಕೇವಲ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾತ್ರ ಮಾಡುತ್ತಾರೆ. ಆದರೆ ಕಾಂಗ್ರೆಸ್‌ ಪಕ್ಷದ ಬದ್ಧತೆ ಬದುಕಿಗಾಗಿ. ಸಿದ್ಧರಾಮಯ್ಯ ಸರಕಾರ ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ ಎಂದು ಅವರು ಹೇಳಿದರು.

ಕೋಮು ದ್ವೇಷ ಬಿತ್ತುವವರಿಗೆ ಉತ್ತರ ಕೊಡುವ ಕಾಲ: ಸುರ್ಜೆವಾಲ
ಕರಾವಳಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೋಮು ದ್ವೇಷ ಬಿತ್ತಲಾಗಿದೆ. ಇಂತಹ ಮನಃಸ್ಥಿತಿಗೆ ಈ ಬಾರಿ ಉತ್ತರ ಕೊಡುವ ಕಾಲ ಬಂದಿದೆ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಸರಕಾರ ಜನ ಸಾಮಾನ್ಯರ ಮೇಲೆ ದೌರ್ಜನ್ಯ ಎಸಗುತ್ತಿದೆ. ಈ ಭಾಗದಲ್ಲಿ ಹಿಂದುತ್ವದ ಅಮಲು ಬಿತ್ತಲಾಗಿದೆ. ಉಪನಿಷತ್‌, ವೇದ, ಗೀತೆಯಲ್ಲಿ ಎಲ್ಲೂ ಹಿಂದುತ್ವ ಪದದ ಉಲ್ಲೇಖವಿಲ್ಲ. ಹಿಂದುತ್ವದ ಈ ಶಬ್ದ ಉದ್ಭವ ಆಗಿದ್ದು ಆರ್‌ಎಸ್‌ಎಸ್‌ ಹೆಡ್‌ಕಾಟರ್ಸ್‌ನಲ್ಲಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೆವಾಲ ಆರೋಪಿಸಿದರು.

ಬಿಜೆಪಿಯವರದು ಆಲೋಚನೆ, ಚಿಂತನೆ, ಕ್ರಿಯೆ ಎಲ್ಲವೂ ಅಹಂಕಾರದಿಂದ ಕೂಡಿದೆ. ಚುನಾವಣೆಯ ಸಂದರ್ಭ ಬಿಜೆಪಿ ಮುಖಂಡರು ಕೊಟ್ಟ ಯಾವ ಭರವಸೆಯೂ ಈಡೇರಿಸಿಲ್ಲ. ಪ್ರಜಾಧ್ವನಿ ಯಾತ್ರೆಯ ಮೂಲಕ ಈಗ ಬದಲಾವಣೆಯ ಗಾಳಿ ಬೀಸಬೇಕಾಗಿದೆ. ಬಿಜೆಪಿಯನ್ನು ಕಿತ್ತೂಗೆಯುವ ಕಾಲ ಬಂದಿದೆ ಎಂದು ಅವರು ಹೇಳಿದರು.

Advertisement

ಬೊಮ್ಮಾಯಿಗೆ ಸಿದ್ದು ಸವಾಲು’
“ಸಿಎಂ ಬಸವರಾಜ ಬೊಮ್ಮಾಯಿಯವರೇ ನಿಮಗೆ ತಾಕತ್ತು, ಧಮ್‌ ಇದ್ದಲ್ಲಿ ನೀವು ಚುನಾವಣ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳಲ್ಲಿ ಎಷ್ಟನ್ನು ಈಡೇರಿಸಿದ್ದೀರಿ ಎಂಬ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ. ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದೆ. ಚರ್ಚೆಗೂ ಸಿದ್ಧ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲೆಸೆದರು.
ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ರಾಜ್ಯ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌, ಉಪಾಧ್ಯಕ್ಷ ಪ್ರೊ| ರಾಧಾಕೃಷ್ಣ, ದ.ಕ.ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್‌ ಮುಂಡೋಡಿ, ಮಾಜಿ ಶಾಸಕ ಜೆ.ಆರ್‌. ಲೋಬೋ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್‌ ಡಿ’ಸೋಜಾ, ಯುವ ಮುಖಂಡ ಮಿಥುನ್‌ ರೈ ಮಾತನಾಡಿದರು.

ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ, ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್‌, ಮುಖಂಡರಾದ ಬಿ. ರಮಾನಾಥ ರೈ, ಮಧು ಬಂಗಾರಪ್ಪ, ಡಾ| ಮಂಜುನಾಥ ಭಂಡಾರಿ, ವಿನಯ ಕುಮಾರ್‌ ಸೊರಕೆ, ಅಭಯಚಂದ್ರ ಜೈನ್‌, ಇನಾಯತ್‌ ಆಲಿ, ಮುಹಮ್ಮದ್‌ ನಲಪ್ಪಾಡ್‌, ಮೊಯಿದ್ದೀನ್‌ ಬಾವ, ಕೆಎಸ್‌ಎಂ ಮಸೂದ್‌, ವಸಂತ ಬಂಗೇರ, ಶಕುಂತಲಾ ಶೆಟ್ಟಿ, ಗಂಗಾಧರ ಗೌಡ, ವಿಜಯ ಕುಮಾರ್‌ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಸ್ವಾಗತಿಸಿದರು. ಶಾಸಕ ಯು.ಟಿ.ಖಾದರ್‌ ಪ್ರಾಸ್ತಾವಿಸಿದರು. ಮುಹಮ್ಮದ್‌ ಬಡಗನ್ನೂರು ಮತ್ತು ಮಮತಾ ಗಟ್ಟಿ ನಿರೂಪಿಸಿದರು.
ಕಾಂಗ್ರೆಸ್‌ ಪಕ್ಷಕ್ಕೆ ಹಲವಾರು ಬೆಂಬಲಿಗರೊಂದಿಗೆ ಸೇರ್ಪಡೆಗೊಂಡ ಉದ್ಯಮಿ ಅಶೋಕ್‌ ರೈ ಕೋಡಿಂಬಾಡಿ, ದಿವಂಗತ ಫ‌ಕೀರ ಅವರ ಪತ್ನಿ ಧರಣಿ ಫ‌ಕೀರ, ಎಂ.ಜಿ. ಹೆಗ್ಡೆ ಅವರನ್ನು ಪಕ್ಷದ ಧ್ವಜ ನೀಡಿ ಬರಮಾಡಿಕೊಳ್ಳಲಾಯಿತು.

“ಪೂಜಾರಿ’ಯವರನ್ನು ಕೊಂಡಾಡಿದ ಕೈ ನಾಯಕರು!
ಕಾಂಗ್ರೆಸ್‌ ಸಮಾವೇಶದಲ್ಲಿ ಬಹುಕಾಲದ ಅನಂತರ ವೇದಿಕೆಯಲ್ಲಿ ಕಾಣಿಸಿಕೊಂಡ ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಸಭೆಯ ಕೊನೆಯವರೆಗೂ ಹಾಜರಿದ್ದು, ಗಮನ ಸೆಳೆದರು. ಸಭೆಯಲ್ಲಿ ಮಾತನಾಡಿದ ಕೈ ನಾಯಕರು ಪೂಜಾರಿ ಅವರನ್ನು ಕೊಂಡಾಡಿದರು.

ಸುರ್ಜೆವಾಲರಿಗೆ “ಕಂಬಳದ ಬೆತ್ತ’ ಸ್ಮರಣಿಕೆ
ಮಂಗಳೂರು: ಮಂಗಳೂರಿನಲ್ಲಿ ರವಿವಾರ ನಡೆದ ಕಾಂಗ್ರೆಸ್‌ನ ಪ್ರಜಾಧ್ವನಿ ಬಸ್‌ ಯಾತ್ರೆ ಹಾಗೂ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇìವಾಲ ಅವರಿಗೆ ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಅವರು ಕಂಬಳದ ಕೋಣಗಳನ್ನು ಓಡಿಸುವ ಬೆತ್ತವನ್ನು ಸ್ಮರಣಿಕೆಯಾಗಿ ನೀಡುವ ಮೂಲಕ ವಿಶೇಷವಾಗಿ ಬರಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next