Advertisement

ಕಾಂಗ್ರೆಸ್‌ಗೆ 136 ಸ್ಥಾನ ಖಚಿತ: ಡಿಕೆಶಿ

10:09 PM Dec 15, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 136 ಹಾಗೂ ಬಿಜೆಪಿ 67 ಸ್ಥಾನ ಗೆಲ್ಲಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭವಿಷ್ಯ ನುಡಿದಿದ್ದು, ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Advertisement

ಪ್ರಸ್‌ಕ್ಲಬ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಮಾಡಿಸಿರುವ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ 136 ಸ್ಥಾನ ಗೆಲ್ಲಲಿದೆ ಎಂದು ತಿಳಿಸಿದರು. ಬಿಜೆಪಿಯವರು ಪದೇಪದೆ ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಕಿತ್ತಾಟ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇಬ್ಬರ ನಡುವೆ ಒಂದೇ ಒಂದು ಮನಸ್ತಾಪ ತೋರಿಸಲಿ. ನಾನು ಸಿದ್ದರಾಮಯ್ಯ ಅವರು ಒಂದು ಸಣ್ಣ ಸನ್ನಿವೇಶದಲ್ಲಿ ಕಿತ್ತಾಡಿರುವುದನ್ನು ಹೇಳಿ ನೋಡೋಣ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ನಾವೆಲ್ಲ ನಾಯಕರೂ ಒಗ್ಗಟ್ಟಾಗಿ ಕೆಲಸ ಮಾಡಿ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮ ಹಾಕುತ್ತಿದ್ದೇವೆ ಎಂದು ಹೇಳಿದರು.

ಆಡಳಿತ ಪಕ್ಷದಲ್ಲಿನ ಆಂತರಿಕ ಭಿನ್ನಮತ ಹೆಚ್ಚು ಚರ್ಚೆ ಆಗುತ್ತಿಲ್ಲ. ಈ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಬಿಜೆಪಿಯವರು ತಮ್ಮ ಮುಖ್ಯಮಂತ್ರಿ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ ಮುಖ್ಯಮಂತ್ರಿ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಅಂದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ನಾನು ಅಧ್ಯಕ್ಷನಾಗಿ ಜವಾಬ್ದಾರಿ ತೆಗೆದುಕೊಂಡ ಬಳಿಕ ಸರಿಯಾಗಿ ಒಂದು ದಿನವೂ ನಿದ್ದೆ ಮಾಡದೆ, ಬೀದಿಗಿಳಿದು ಹೋರಾಟ ಮಾಡಿದ್ದೇವೆ. ನಾನು ಬಹಳ ಸಾಧನೆ ಮಾಡಿದ್ದೇನೆ ಎಂದು ಹೇಳುವುದಿಲ್ಲ ನನಗಿದ್ದ ವಿಚಾರ, ಗುರಿ, ಶಕ್ತಿಯಲ್ಲಿ ಕೇವಲ 25-30ರಷ್ಟು ಕೆಲಸ ಮಾಡಿದ್ದೇನೆ ಎಂದರು.

Advertisement

ಹತ್ತು ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಎಂದು ಸರಕಾರ ಹಾಗೂ ಬಿಜೆಪಿಯವರು ಹೇಳುತ್ತಿದ್ದಾರೆ. ಶಿವಮೊಗ್ಗ, ಮಂಗಳೂರು, ಉಡುಪಿ ಭಾಗದಲ್ಲಿ ಎಷ್ಟು  ಉದ್ಯಮಿಗಳು ಬಂಡವಾಳ ಹೂಡಲು  ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದನ್ನು ಸರಕಾರ ತಿಳಿಸಲಿ. ಇಡೀ ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿರುವುದೇ ಬಿಜೆಪಿ ಸಾಧನೆ ಎಂದು ಟೀಕಿಸಿದರು.

ಕಣ್ಣೊರೆಸುವ ತಂತ್ರ:

ಮಾತೆತ್ತಿದರೆ ಧಮ್‌ ಎನ್ನುವ ಮುಖ್ಯಮಂತ್ರಿಗಳು ಮೀಸಲಾತಿ ವಿಚಾರ ಸಂಸತ್ತಿನಲ್ಲಿ ತಂದು, ಸಂವಿಧಾನದ 9ನೇ ಶೆಡ್ಯುಲ್‌ನಲ್ಲಿ ಸೇರಿಸಿ ಸಂವಿಧಾನಕ್ಕೆ ತಿದ್ದುಪಡಿ ತಂದು ಸಾಧನೆ ಮಾಡಿ ತಮ್ಮ ಧಮ್‌ ತೋರಿಸಲಿ. ನಾವು ಹಾಕಿರುವ ಅಡಿಪಾಯಕ್ಕೆ ಅವರು ಇತಿಶ್ರೀ ಹಾಡಲಿ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next