ಬೆಂಗಳೂರು: ಕೋವಿಡ್ ನಿರ್ಬಂಧದ ಇತಿಮಿತಿಗಳ ಮಧ್ಯೆ ಎದುರಿಸಿದ ಬೆಳಗಾವಿ, ಕಲಬುರ್ಗಿ, ಧಾರವಾಡದ ಪಾಲಿಕೆ ಚುನಾವಣೆಯಲ್ಲಿ ಸಮಾಧಾನಕರ ಫಲಿತಾಂಶ ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಆವರು, ಕಲಬುರಗಿಯಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. ಹುಬ್ಬಳ್ಳಿ- ಧಾರವಾಡ ಹಾಗೂ ಬೆಳಗಾವಿಯಲ್ಲಿ ಗೆಲುವು ಸಿಗದಿದ್ದರೂ ನಮ್ಮ ಫಲಿತಾಂಶ ಸುಧಾರಿಸಿದೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಪಕ್ಷದಿಂದ ಇಷ್ಟು ದಿನ ಅಭ್ಯರ್ಥಿ ಹಾಕುತ್ತಿರಲಿಲ್ಲ. ಅಲ್ಲಿ ಸುಮಾರು 10 ಕ್ಷೇತ್ರ ಗೆಲ್ಲುವುದಾಗಿ ಕಾರ್ಯಕರ್ತರು ವರದಿ ಕೊಟ್ಟಿದ್ದರು. ಅಭ್ಯರ್ಥಿ ಹಾಕಬಾರದು ಎಂದು ಸ್ಥಳೀಯ ಮಟ್ಟದಲ್ಲಿ ಒತ್ತಡವೂ ಇತ್ತು. ಆದರೂ ನಾವು ಅಭ್ಯರ್ಥಿಗಳನ್ನು ಹಾಕಿದ್ದೆವು. ನಮಗೆ ಬೆಳಗಾವಿಯಲ್ಲಿ ದೊಡ್ಡ ಸಂಖ್ಯೆ ಬರದೇ ಇದ್ದರೂ ಉತ್ತಮ ಪ್ರಾರಂಭ ಪಡೆದಿದ್ದೇವೆ. ಮುಂದೆ ನಾವು ಎಲ್ಲಿ ಸರಿ ಮಾಡಿಕೊಳ್ಳಬೇಕೋ ಅಲ್ಲಿ ಮಾಡಿಕೊಳ್ಳುತ್ತೇವೆ. ಜನರ ತೀರ್ಪು ಒಪ್ಪಿಕೊಳ್ಳುತ್ತೇವೆ ಎಂದು ತಿಳಿಸಿದರು.
ಯಾವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಾದರೂ ಅದು ಸ್ಥಳೀಯ ಅಭ್ಯರ್ಥಿಗಳ ಮೇಲೆ ನಿರ್ಧಾರವಾಗುತ್ತದೆ. ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗುವಂತಹ ಮೀಸಲಾತಿ ನೀಡಿ ಚುನಾವಣೆ ನಡೆಸಲಾಗಿದೆ. ರಾಜಕಾರಣದಲ್ಲಿ ಇದು ಸಹಜ ಎಂದರು.
ಹುಬ್ಬಳ್ಳಿ-ಧಾರವಾಡದಲ್ಲಿ ಹಾಲಿ, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಪ್ರತಿನಿಧಿಸುತ್ತಿದ್ದು, ಆದರೂ ನಮಗೆ ಬಂದಿರುವ ಫಲಿತಾಂಶ ಸಮಾಧಾನ ತಂದಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ನಮಗೆ ಪ್ರಚಾರ ಮಾಡಲು ಎಲ್ಲೂ ಅವಕಾಶ ನೀಡಲಿಲ್ಲ. ಕೋವಿಡ್ ನಿಯಮಾವಳಿಗಳ ಹೆಸರಲ್ಲಿ ಕಟ್ಟಿಹಾಕಿದರು. ಆದರೆ ಅವರು ಮಾತ್ರ, ಆಡಳಿತ ಯಂತ್ರ, ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.