Advertisement

ಕುಮಾರಸ್ವಾಮಿ ದೊಡ್ಡವರು,ಎಲ್ಲೆಲ್ಲಿ ಹೋರಾಟ ಮಾಡಿದ್ದಾರೋ ನನಗೆ ಗೊತ್ತಿಲ್ಲ; ಡಿಕೆಶಿ ತಿರುಗೇಟು

03:35 PM Dec 25, 2021 | Team Udayavani |

ಹಾಸನ : ಮೇಕೆದಾಟು ಪಾದಯಾತ್ರೆ ವಿಚಾರವನ್ನು ಟೀಕಿಸಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿವರು ಯಾವಾಗ ಎಲ್ಲೆಲ್ಲಿ ಹೋರಾಟ ನಡೆಸಿದ್ದಾರೋ ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

Advertisement

ಹಾಸನದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕುಮಾರಸ್ವಾಮಿ ದೊಡ್ಡವರು. ಅವರು ಯಾವಾಗ, ಎಲ್ಲೆಲ್ಲಿ ಹೋರಾಟ ಮಾಡಿದ್ದಾರೋ ನನಗೆ ಗೊತ್ತಿಲ್ಲ. ಮೇಕೆದಾಟು ವಿಚಾರದಲ್ಲಿ ಕಾಂಗ್ರಸ್‌ ಮುಂದಾಳತ್ವ ವಹಿಸಿದ್ದರೂ ಇದೊಂದು ಪಕ್ಷಾತೀತವಾದ ಹೋರಾಟ. ನಾನೇ ಈ ಹೋರಾಟ ಮಾಡಬೇಕೆಂದುಕೊಂಡಿದ್ದೆ ಎಂದು ಕುಮಾರಸ್ವಾಮಿ ಸದನದಲ್ಲೇ ಹೇಳಿಕೆ ನೀಡಿದ್ದಾರೆ. ಹೀಗಾಗಿ ನಮ್ಮ ಹೋರಾಟಕ್ಕೆ ಅವರ ತಕರಾರು ಇಲ್ಲ ಎಂದು ಭಾವಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

ಪಕ್ಷಪೂಜೆ : ನನ್ನ ಅಧ್ಯಕ್ಷ ಅವಧಿಯಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ. ನಮ್ಮದು ಪಕ್ಷಪೂಜೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಲೆ ಬೀಸುತ್ತಿದೆ. ಕಾಂಗ್ರೆಸ್‌ ಪರ್ವ ಆರಂಭವಾಗಿದೆ. ಎಲ್ಲ ಕಡೆಯೂ ಕಾಂಗ್ರೆಸ್‌ ಗೆಲ್ಲಿಸಿ ಎಂದು ಪ್ರಚಾರ ಮಾಡುತ್ತೇವೆ ಎಂದರು.

ರಾಜ್ಯದಲ್ಲಿ ಯಾರೂ ಬೇಕಾದರೂ ಬೇಷರತ್ತಾಗಿ ಕಾಂಗ್ರೆಸ್‌ ಸೇರಬಹುದು. ಮಾಜಿ ಸಚಿವ ಎ.ಮಂಜು ನನ್ನ ಸ್ನೇಹಿತ. ಅವರು ಕಾಂಗ್ರೆಸ್‌ ಸೇರುತ್ತೇನೆ ಎಂದು ಅರ್ಜಿ ಹಾಕಿಲ್ಲ. ಕಾಂಗ್ರೆಸ್‌ ಸೇರ ಬಯಸುವವರು ಮಾಜಿ ಸಚಿವ ಅಲ್ಲಮ್‌ ವೀರಭದ್ರಪ್ಪ ನೇತೃತ್ವದ ಸಮಿತಿ ಮುಂದೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಇದನ್ನೂ ಓದಿ : ರಾತ್ರಿ ಕರ್ಫ್ಯೂ ಜಾರಿ ಕುರಿತಂತೆ ರವಿವಾರ ಸಭೆಯಲ್ಲಿ ಚರ್ಚೆ: ಸಿಎಂ ಬೊಮ್ಮಾಯಿ

Advertisement

ಸರಕಾರ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯಿದೆ ಜಾರಿಗೆ ತರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನಾವು ಸದನದಲ್ಲಿ ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದೇವೆ. ವಿಧಾನ ಪರಿಷತ್ತಿನಲ್ಲಿ ಅವರಿಗೆ ಬಹುಮತವಿಲ್ಲ. ಜ.5ರ ನಂತರ ಬಹುಮತ ಲಭಿಸುತ್ತದೆ. ಆಗ ಮಂಡನೆ ಮಾಡಬಹುದು. ನಮ್ಮ ನಿಲುವನ್ನು ಈಗಾಗಲೇ ವ್ಯಕ್ತಪಡಿಸಿದ್ದೇವೆ. ಮತ್ತೆ ಮತ್ತೆ ಚರ್ಚಿಸುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next