ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಲಾಗಿದ್ದ ತಡೆಯಾಜ್ಞೆ ಪುನಃ ವಿಸ್ತರಣೆಗೊಂಡಿದೆ.
ಸಿಬಿಐ ತನಿಖೆ ರದ್ದುಕೋರಿ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.
ಪ್ರಕರಣದ ವಿಚಾರಣೆಯನ್ನು ಈಗಾಗಲೇ ಮತ್ತೂಂದು ಏಕಸದಸ್ಯ ನ್ಯಾಯಪೀಠ ನಡೆಸಿದೆ. ಈಗ ಈ ನ್ಯಾಯಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದಿದೆ. ಯಾವ ನ್ಯಾಯಪೀಠ ಅರ್ಜಿಯ ವಿಚಾರಣೆಯನ್ನು ನಡೆಸಬೇಕು ಎಂಬುದರ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳ ಆದೇಶ ಅಗತ್ಯ. ಆ ಹಿನ್ನೆಲೆಯಲ್ಲಿ ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳ ಅವಗಾಹನೆಗೆ ತರುವಂತೆ ಸೂಚಿಸಿದ ನ್ಯಾ.ನಾಗಪ್ರಸನ್ನ ಅವರು, ಮುಖ್ಯನ್ಯಾಯಮೂರ್ತಿಗಳ ಆದೇಶದ ನಂತರ ಅರ್ಜಿಯ ವಿಚಾರಣೆ ನಿರ್ಧಾರವಾಗಲಿ ಎಂದು ಹೇಳಿ ವಿಚಾರಣೆ ಮುಂದೂಡಿದರು. ಅರ್ಜಿಯನ್ನು ಈ ಹಿಂದೆ ನ್ಯಾ. ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತ್ತು.
ಈ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಮೇ ಕೊನೆವರೆಗೆ ತಡೆಯಾಜ್ಞೆ ನೀಡಿ ಏಪ್ರಿಲ್ 13ರಂದು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಆದೇಶಿಸಿತ್ತು. ಅದರಂತೆ, ಶುಕ್ರವಾರ (ಜೂ.2)ರಂದು ಅರ್ಜಿ ಪುನಃ ವಿಚಾರಣೆಗೆ ಬಂದಿತ್ತು. ಅರ್ಜಿಯನ್ನು ಯಾವ ನ್ಯಾಯಪೀಠ ವಿಚಾರಣೆ ನಡೆಸಬೇಕೆಂಬ ಬಗ್ಗೆ ಮುಖ್ಯನ್ಯಾಯಮೂರ್ತಿಯವರು ನಿರ್ಧಾರ ಕೈಗೊಳ್ಳಬೇಕಿದೆ. ಹಾಗಾಗಿ, ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗುತ್ತಿದೆ. ಅದರಂತೆ, ಮುಂದಿನ ವಿಚಾರಣೆವರೆಗೆ ಸಿಬಿಐ ತನಿಖೆಗೆ ಈ ಹಿಂದೆ ನೀಡಲಾಗಿದ್ದ ತಡೆಯಾಜ್ಞೆ ಮುಂದುವರಿಯಲಿದೆ ಎಂದು ನ್ಯಾಯಪೀಠ ಹೇಳಿದೆ.