ಮಂಗಳೂರು: ಮಣಭಾರದ ಬ್ಯಾಗ್ ಹೊತ್ತು ಬೆನ್ನುಬಾಗಿಸಿ ಶಾಲೆಗೆ ತೆರಳುವ ಮಕ್ಕಳಿಗೊಂದು ಸಿಹಿಸುದ್ದಿ. ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹೊಸ ವರ್ಷದ ಉಡುಗೊರೆಯಾಗಿ ಪ್ರತಿ ಶನಿವಾರ ವನ್ನು “ಬ್ಯಾಗ್‌ರಹಿತ ದಿನ’ವನ್ನಾಗಿ ಘೋಷಿಸಿದ್ದು, ಡಿ. 23ರಿಂದಲೇ ಇದು ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ.
ಮಕ್ಕಳು ಶಾಲೆಯ ಮೆಟ್ಟಿಲು ಏರುತ್ತಿದ್ದಂತೆ ಬ್ಯಾಗ್ ಹೊರೆಯೂ ಆರಂಭವಾಗುತ್ತದೆ. ಪಠ್ಯಪುಸ್ತಕಗಳು, ಬರೆಯುವ ಪುಸ್ತಕಗಳು, ಕಂಪಾಸ್ ಬಾಕ್ಸ್, ಊಟದ ಬುತ್ತಿ, ನೀರಿನ ಬಾಟಲಿ ಇತ್ಯಾದಿ ತುಂಬಿದ ಶಾಲೆಚೀಲ ಮಣಭಾರ. ಕೆಲ ವೊಮ್ಮೆ ತಮ್ಮ ತೂಕಕ್ಕಿಂತಲೂ ಹೆಚ್ಚಿ ರುವ ಬ್ಯಾಗ್ ಹೊತ್ತು ಮಕ್ಕಳು ನಡೆಯಲು ಕಷ್ಟಪಡಬೇಕಾಗುತ್ತದೆ. ಬೆನ್ನು ಬಾಗುತ್ತದೆ. ಪುಸ್ತಕಗಳ ಹೊರೆ ಯಿಂದಲೇ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುವ ಸಂದರ್ಭ ಗಳೂ ಇಲ್ಲದಿಲ್ಲ. ಇದಕ್ಕೆ ಪರಿಹಾರ ಕ್ರಮವಾಗಿ ಡಿ. 23ರಿಂದಲೇ “ಬ್ಯಾಗ್ ರಹಿತ ಶನಿವಾರ’ ಜಾರಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಪ್ರತೀ ವಾರ ನಡೆಸಬೇಕೇ ಅಥವಾ ತಿಂಗಳಿಗೊಮ್ಮೆ ಸಾಕೇ ಎಂಬುದನ್ನು ಹೆತ್ತವರ ಅಭಿಪ್ರಾಯ ಸಂಗ್ರಹಿಸಿ ನಿರ್ಧರಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬರಿಗೈಯಲ್ಲೇ ಶಾಲೆಗೆ: ಬ್ಯಾಗ್ ರಹಿತ ದಿನ, ಶನಿವಾರ ವಿದ್ಯಾರ್ಥಿಗಳು ಬರಿಗೈಯಲ್ಲೇ ಶಾಲೆಗೆ ಬರುತ್ತಾರೆ. ಆದರೆ ಅಂದಿನ ವೇಳಾಪಟ್ಟಿಯಲ್ಲಿ ಬದಲಾವಣೆ ಇರುವುದಿಲ್ಲ. ಪಠ್ಯಪುಸ್ತಕ ಕೇಂದ್ರಿತ, ಪರೀಕ್ಷೆ ಸಂಬಂಧಿಯಾದ ಏಕರೂಪದ ಬೋಧನೆ -ಕಲಿಕೆ ವಿದ್ಯಾರ್ಥಿಗಳಲ್ಲೂ ನಿರಾಸಕ್ತಿ ಮೂಡಿಸುತ್ತದೆ. ಹೀಗಾಗಿ ಬ್ಯಾಗ್ ರಹಿತ ದಿನ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆದರೆ ಈ ಎಲ್ಲ ಪಠ್ಯೇತರ ಚಟುವಟಿಕೆಗಳು ಆಯಾ ಅವಧಿಯ ಪಠ್ಯಕ್ಕೆ ಪೂರಕವಾಗಿಯೇ ಇರುತ್ತವೆ. ಉದಾಹರಣೆಗೆ, ಕನ್ನಡ ಅವಧಿಯಲ್ಲಿ ಆಶು ಭಾಷಣ, ರಸಪ್ರಶ್ನೆ; ವಿಜ್ಞಾನ ಅವಧಿಯಲ್ಲಿ ರಂಗೋಲಿಯಲ್ಲಿ ವಿಜ್ಞಾನ ಚಿತ್ರ ರಚನೆ ಇತ್ಯಾದಿ. ಕಲಿಕೆಯ ಜತೆಗೆ ಆಯಾ ವಿಷಯದಲ್ಲಿ ಸೃಜನಶೀಲತೆ ಮೈಗೂಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಈ ಚಟುವಟಿಕೆಗಳು ಸಹಕಾರಿಯಾಗಲಿವೆ.
ಪಠ್ಯೇತರ ಚಟುವಟಿಕೆಗಳಿವು: ರಸಪ್ರಶ್ನೆ, ಆಶು ಭಾಷಣ, ಅಣಕು ಸಂಸತ್ತು ನಿರ್ವಹಣೆ, ಚರ್ಚಾಕೂಟ, ಕರಕುಶಲ ವಸ್ತು ತಯಾರಿ, ಕಂಪ್ಯೂಟರ್ ಮೂಲಕ ಕಲಿಕೆ, ಪ್ರಯೋಗಶಾಲೆ- ವಾಚನಾಲಯ ಬಳಕೆ, ಪಠ್ಯಸಂಬಂಧಿ ಪಾತ್ರಾಭಿನಯ, ಪದ್ಯ ರಚನೆ, ಆ ಪದ್ಯಕ್ಕೆ ರಾಗ ಸಂಯೋಜಿಸಿ ಹಾಡುವುದು, ಕಿರುನಾಟಕ, ಚಿತ್ರರಚನೆ ಮುಂತಾದ ಚಟುವಟಿಕೆಗಳಿರುತ್ತವೆ. ಇದಲ್ಲದೆ ವಿದ್ಯಾರ್ಥಿಗಳಿಗೆ ಅನುಕೂಲವಾದ ಮತ್ತು ಶೈಕ್ಷಣಿಕವಾಗಿ ಉಪಯುಕ್ತವಾಗಿರುವ ಯಾವುದೇ ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಪ್ರಾಯೋಗಿಕವಾಗಿ ಇಂದಿನಿಂದ ಜಾರಿ ಮಕ್ಕಳ ಪುಸ್ತಕದ ಹೊರೆ ಕಡಿಮೆ ಮಾಡುವುದರೊಂದಿಗೆ ವಾರದಲ್ಲೊಂದು ದಿನ ಸೃಜನಾತ್ಮಕ ಚಟುವಟಿಕೆಗಳ ಮೂಲಕ ಬೋಧನೆ ನಡೆಯಬೇಕು ಎನ್ನುವ ಉದ್ದೇಶದಿಂದ “ನೋ ಬ್ಯಾಗ್ ಡೇ’ ಜಾರಿಗೊಳಿಸ ಲಾಗುತ್ತಿದೆ. ಪ್ರತೀ ಶನಿವಾರ ಇದನ್ನು ಪರಿಣಾಮಕಾರಿಯಾಗಿ ನಡೆಸಲು ನಿರ್ಧರಿಸಲಾಗಿದ್ದು, ಡಿ. 23ರಿಂದಲೇ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಮುಂದೆ ಹೆತ್ತವರ ಅಭಿಪ್ರಾಯ ಪಡೆದು ಸೂಕ್ತ ಬದಲಾವಣೆ ಮಾಡಲಾಗುವುದು.
– ವೈ. ಶಿವರಾಮಯ್ಯ,
ಡಿಡಿಪಿಐ, ಸಾ.ಶಿ. ಇಲಾಖೆ
– ಧನ್ಯಾ ಬಾಳೆಕಜೆ