Advertisement

ದ.ಕ. ಜಿಲ್ಲೆ: ಮಕ್ಕಳ ಆರೋಗ್ಯದ ಮೇಲೆ ವಿಶೇಷ ನಿಗಾ

10:02 PM Aug 20, 2021 | Team Udayavani |

ಮಹಾನಗರ: ಸಂಭಾವ್ಯ ಕೋವಿಡ್‌ ಮೂರನೇ ಅಲೆಗೆ ದ.ಕ. ಜಿಲ್ಲಾ ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ವಿಶೇಷ ನಿಗಾ ವಹಿಸುವ ನಿಟ್ಟಿನಲ್ಲಿ ವಿವಿಧ ಕ್ರಮ ಕೈಗೊಳ್ಳಲು ಮುಂದಾಗಿದೆ.

Advertisement

ಕೋವಿಡ್‌ ಮೂರನೇ ಅಲೆಯಲ್ಲಿ ಮಕ್ಕಳಿಗೆ ಸಮಸ್ಯೆ ಉಂಟಾಗಬಹುದು ಎಂಬ ತಜ್ಞರ ಅಭಿಪ್ರಾಯದಂತೆ ಜಿಲ್ಲೆಯಲ್ಲಿ ಈಗಾಗಲೇ ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ನಡೆಯುತ್ತಿದ್ದು, ಆರೋಗ್ಯ ಇಲಾಖೆಯಿಂದ ಮನೆ ಮನೆಗೆ ಭೇಟಿ ನೀಡಲಾಗುತ್ತಿದೆ. ಆ ವೇಳೆ ಮಕ್ಕಳ ಆರೋಗ್ಯದ ಬಗ್ಗೆ ಮನೆ ಮಂದಿಯಿಂದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಒಂದು ವೇಳೆ ಮಕ್ಕಳಲ್ಲಿ ಜ್ವರ ಸಹಿತ ಕೋವಿಡ್‌ ಲಕ್ಷಣವಿದ್ದರೆ ಅಥವಾ ಕೋವಿಡ್‌ ಬಳಿಕ ಅವರ ಆರೋಗ್ಯದಲ್ಲಿ ಬದಲಾವಣೆಯಾದರೆ ಆ ಮಾಹಿತಿಯನ್ನು ಅಲ್ಲಿ ಸಂಗ್ರಹಿಸಲಾಗುತ್ತದೆ.

ಜಿಲ್ಲೆಯಲ್ಲಿ ಈಗಾಗಲೇ ಮಕ್ಕಳ ಆರೋಗ್ಯದ ದೃಷ್ಟಿಯಲ್ಲಿ ಖಾಸಗಿ ಆಸ್ಪತ್ರೆಗಳ ಮಕ್ಕಳ ತಜ್ಞರ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳಲ್ಲಿಕೋವಿಡ್‌ ಕಾಣಿಸಿಕೊಂಡರೆ ಖಾಸಗಿ ಆಸ್ಪತ್ರೆಗಳ ಮಕ್ಕಳ ತಜ್ಞರು ಕೂಡ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಇನ್ನು, ಜಿಲ್ಲೆಯಲ್ಲಿ ಸದ್ಯ 9 ಆಕ್ಸಿಜನ್‌ ಸ್ಥಾವರ ಕಾರ್ಯನಿರ್ವಹಿಸುತ್ತಿದ್ದು, ಇನ್ನೇನು ಕೆಲ ದಿನಗಳಲ್ಲಿಯೇ ಜಿಲ್ಲೆಯಲ್ಲಿ ಒಟ್ಟು 16 ಆಕ್ಸಿಜನ್‌ ಸ್ಥಾವರಗಳು ಸೇವೆಗೆ ಸಿಗಲಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಭವಿಷ್ಯದಲ್ಲಿ ಆಕ್ಸಿಜನ್‌ ಸಮಸ್ಯೆ ಬಾರದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ತಯಾರಿ ಮಾಡಿಕೊಂಡಿದೆ.

ಇದನ್ನೂ ಓದಿ:12 ವಯಸ್ಸಿಗಿಂತ ಮೇಲ್ಪಟ್ಟ ಮಕ್ಕಳಿಗೆ ಸಿದ್ಧವಾದ ಮೊದಲ ಕೋವಿಡ್ ಲಸಿಕೆಗೆ ಭಾರತದಲ್ಲಿ ಅನುಮೋದನೆ

ಕೋವಿಡ್‌ಗೆ ಬೆಡ್‌ ಮೀಸಲು
ಆರೋಗ್ಯ ಇಲಾಖೆ ಮಾಹಿತಿಯಂತೆ, ಎರಡು ಜಿಲ್ಲೆಯ ಆಸ್ಪತ್ರೆ ಮತ್ತು 8 ಮೆಡಿಕಲ್‌ ಕಾಲೇಜುಗಳಲ್ಲಿ 6,831 ಹಾಸಿಗೆ ಇದ್ದು, 3,182 ಬೆಡ್‌ ಕೋವಿಡ್‌ಗೆ ಮೀಸಲಿಡಲಾಗಿದೆ. 4 ತಾಲೂಕು ಆಸ್ಪತ್ರೆಯಲ್ಲಿ 400 ಬೆಡ್‌ಗಳ ಪೈಕಿ 200 ಕೋವಿಡ್‌ಗೆ ಮೀಸಲಿಡಲಾಗಿದೆ. 6 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 230 ಬೆಡ್‌ ಇದ್ದು 115 ಬೆಡ್‌ ಕೊರೊನಾಗೆ ಮೀಸಲು ಮಾಡಲಾಗಿದೆ. 36 ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 2,659 ಬೆಡ್‌ ಕೋವಿಡ್‌ಗೆ ಮೀಸಲಿಡಲಾಗಿದೆ. 118 ಕೆಪಿಎಂಇಎ ನೋಂದಣಿಗೊಂಡ ಖಾಸಗಿ ಆಸ್ಪತ್ರೆಗಳ 3,381 ಬೆಡ್‌ಗಳಲ್ಲಿ 1,691 ಹಾಸಿಗೆ ಕೋವಿಡ್‌ಗೆ ಮೀಸಲಿಡಲಾಗಿದೆ. ಸುವರ್ಣ ಆರೋಗ್ಯ ಸುರಕ್ಷೆ ಟ್ರಸ್ಟ್‌ನಡಿ 80 ಖಾಸಗಿ ಆಸ್ಪತ್ರೆಗಳಲ್ಲಿ 12,610 ಬೆಡ್‌ಗಳ ಪೈಕಿ 6,305 ಹಾಸಿಗೆ ಕೋವಿಡ್‌ಗೆ ಮೀಸಲಿಡಲಾಗಿದೆ.

Advertisement

ಕೋವಿಡ್‌ ಬಳಿಕವೂ ನಿಗಾ
ಕೋವಿಡ್‌ ತುತ್ತಾದ ಮಕ್ಕಳಿಗೆ “ಮಿಸ್ಸಿ’ ಎಂಬ ಕಾಯಿಲೆ ತಗಲುವ ಸಾಧ್ಯತೆ ಇರುತ್ತದೆ. ಕೋವಿಡ್‌ಗೆ ತುತ್ತಾದ ಮಕ್ಕಳಿಗೆ 2 ತಿಂಗಳ ಬಳಿಕ ಮೈ ಕೈ ತುರಿಕೆ, ಜ್ವರ ಸಹಿತ ಕೆಲವು ಲಕ್ಷಣ ಕಾಣಿಸಿಕೊಳ್ಳುತ್ತವೆ. ಈ ಕಾಯಿಲೆಗೆ ಔಷಧ ಇದ್ದು, ಜಿಲ್ಲೆಯ ಸುಮಾರು 20 ಮಂದಿ ಮಕ್ಕಳು ಈಗಾಗಲೇ ಈ ರೋಗಕ್ಕೆ ತುತ್ತಾಗಿದ್ದಾರೆ. ಈ ನಿಟ್ಟಿನಲ್ಲಿ ಕೊರೊನಾ ಬಳಿಕವೂ ಮಕ್ಕಳ ಆರೋಗ್ಯ ಹೇಗಿದೆ ? ಎಂಬ ಬಗ್ಗೆ ಅವರ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ.

ಜಿಲ್ಲೆಯ 9,498 ಮಕ್ಕಳಿಗೆ ಕೋವಿಡ್‌
ದ.ಕ. ಜಿಲ್ಲೆಯಲ್ಲಿ ಈವರೆಗೆ 0-15 ವರ್ಷದೊಳಗಿನ 9,498 ಮಕ್ಕಳಲ್ಲಿ ಕೋವಿಡ್‌ ದೃಢಪಟ್ಟಿದೆ. ಮೊದಲನೇ ಅಲೆಗೆ ಹೋಲಿಕೆ ಮಾಡಿದರೆ ಎರಡನೇ ಅಲೆಯಲ್ಲಿ ಕೋವಿಡ್‌ ತೀವ್ರತೆ ಹೆಚ್ಚಾಗಿದ್ದು, ಮಕ್ಕಳಲ್ಲಿಯೂ ಹೆಚ್ಚಾಗಿ ವ್ಯಾಪಿಸಿತ್ತು. ಮೊದಲನೇ ಅಲೆಯಲ್ಲಿ ಜಿಲ್ಲೆಯ 2,112 ಮಕ್ಕಳಿಗೆ ಕೊರೊನಾ ತಗಲಿದ್ದರೆ ಎರಡನೇ ಅಲೆಯಲ್ಲಿ 7,386 ಮಕ್ಕಳಲ್ಲಿ ಕೋವಿಡ್‌ ದೃಢಪಟ್ಟಿದೆ. ಈವರೆಗೆ ಒಟ್ಟು 0-5 ವರ್ಷದೊಳಗಿನ 3 ಮಂದಿ ಮತ್ತು 11-15 ವರ್ಷದೊಳಗಿನ ಒಬ್ಬರು ಸಾವನ್ನಪ್ಪಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ ಶೇ.7ರಷ್ಟು ಮಕ್ಕಳು ಕೋವಿಡ್‌ಗೆ ತುತ್ತಾಗಿದ್ದು, ಎರಡನೇ ಅಲೆಯಲ್ಲಿ ಕೊರೊನಾ ವ್ಯಾಪಕತೆ ಹೆಚ್ಚಾಗಿತ್ತು. ಇದರ ಪರಿಣಾಮ ತುಸು ಏರಿಕೆ ಕಂಡಿದೆ.

ಮೂರನೇ ಅಲೆ ತಡೆಯುವ ಉದ್ದೇಶ
ಜಿಲ್ಲೆಯಲ್ಲಿ ಸಂಭಾವ್ಯ ಕೊರೊನಾ ಮೂರನೇ ಅಲೆಯನ್ನು ತಡೆಯುವ ಉದ್ದೇಶವನ್ನು ಆರೋಗ್ಯ ಇಲಾಖೆ ಹೊಂದಿದೆ. ಅದಕ್ಕೆಂದು ಈಗಾಗಲೇ ಕೋವಿಡ್‌ ಸಂಗ್ರಹ ಹೆಚ್ಚು ಮಾಡುತ್ತಿದ್ದೇವೆ. ಪ್ರತೀ ದಿನ ಸರಾಸರಿ 9 ರಿಂದ 10 ಸಾವಿರದಷ್ಟು ಕೋವಿಡ್‌ ಟೆಸ್ಟ್‌ ಮಾಡಲಾಗುತ್ತಿದೆ. ಕೋವಿಡ್‌ ರೋಗಿಗಳ ಪ್ರಾಥಮಿಕ ಸಂಪರ್ಕ ಕಡ್ಡಾಯವಾಗಿ ಪತ್ತೆ ಹೆಚ್ಚಿ ತಪಾಸಣೆ ಮಾಡುತ್ತಿದ್ದೇವೆ. ಇದರಿಂದ ಸಂಭಾವ್ಯ ಮೂರನೇ ಅಲೆ ತೀವ್ರತೆ ಕಡಿಮೆ ಮಾಡುವುದು ನಮ್ಮ ಉದ್ದೇಶ.
-ಡಾ| ಕಿಶೋರ್‌ ಕುಮಾರ್‌, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next