Advertisement

ಶ್ರೀ ನಾರಾಯಣ ಗುರು ವಸತಿ ಶಾಲೆ: ದ.ಕ. ಜಿಲ್ಲೆಯ ಶಾಲೆ ಬಂಟ್ವಾಳದ ಪುಂಜಾಲಕಟ್ಟೆಗೆ

01:55 AM Apr 06, 2022 | Team Udayavani |

ಬಂಟ್ವಾಳ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ನಾಲ್ಕು ಜಿಲ್ಲೆಗಳಿಗೆ ತಲಾ ಒಂದೊಂದು ಶ್ರೀನಾರಾಯಣ ಗುರು ವಸತಿ ಶಾಲೆಗಳನ್ನು ಮಂಜೂರು ಮಾಡಿದ್ದು, ದ.ಕ. ಜಿಲ್ಲೆಯದನ್ನು ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯಲ್ಲಿ ನಿರ್ಮಿಸುವ ಕುರಿತು ಸಿದ್ಧತೆಗಳು ನಡೆಯುತ್ತಿವೆ.

Advertisement

ಬಜೆಟ್‌ನಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಂದು ಶ್ರೀ ನಾರಾಯಣಗುರು ವಸತಿ ಶಾಲೆ ಪ್ರಾರಂಭಿಸುವ ಘೋಷಣೆ ಮಾಡಲಾಗಿತ್ತು. ಹಿಂದುಳಿದ ವರ್ಗಗಳ ಇಲಾಖೆಯ ಮೂಲಕ ಈ ಶಾಲೆಗಳು ನಿರ್ವಹಣೆಯಾಗುವ ಸಾಧ್ಯತೆ ಇದ್ದು, ಅದೇ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇತ್ತೀಚೆಗೆ ಬಂಟ್ವಾಳದ ಕಾರ್ಯಕ್ರಮವೊಂದರಲ್ಲಿ 29 ಕೋ.ರೂ. ಅನುದಾನದ ದ.ಕ. ಜಿಲ್ಲೆಯ ವಸತಿ ಶಾಲೆಯನ್ನು ಬಂಟ್ವಾಳಕ್ಕೆ ನೀಡುವುದಾಗಿ ಭರವಸೆ ಕೊಟ್ಟಿದ್ದರು.

15 ಎಕರೆ ನಿವೇಶನ ಮೀಸಲು
ಪುಂಜಾಲಕಟ್ಟೆ ಪ್ರಾ. ಆರೋಗ್ಯ ಕೇಂದ್ರದ ಹಿಂಭಾಗದಲ್ಲಿ ಸುಮಾರು 15 ಎಕರೆ ನಿವೇಶನವನ್ನು ಏಕಲವ್ಯ ಶಾಲೆಗೆ ಮೀಸಲಿರಿಸಲಾಗಿದ್ದು, ಅದರ ಆರ್‌ಟಿಸಿ ಶಾಲೆಯ ಹೆಸರಿಗೆ ಮಂಜೂರಾಗಿತ್ತು. ಆ ಶಾಲೆಯ ಮಂಜೂರಾತಿ ಪ್ರಕ್ರಿಯೆ ವಿಳಂಬವಾದ ಕಾರಣ ಪ್ರಸ್ತುತ ಅದೇ ನಿವೇಶನವನ್ನು ಶ್ರೀ ನಾರಾಯಣ ಗುರು ವಸತಿ ಶಾಲೆಗೆ ಮಂಜೂರು ಮಾಡುವ ಪ್ರಯತ್ನಮಾಡಲಾಗುತ್ತಿದೆ.

ಶ್ರೀ ನಾರಾಯಣ ಗುರು ವಸತಿ ಶಾಲೆ ಮಂಜೂರಾಗುವ ಮೊದಲೇ ನಾವೂರು ಗ್ರಾಮದಲ್ಲಿ ಸುಮಾರು 10 ಎಕರೆ ನಿವೇಶನವನ್ನು ವಾಜಪೇಯಿ ವಸತಿ ಶಾಲೆಗಾಗಿ ಮೀಸಲಿಟ್ಟು, ಮಂಜೂರಾತಿಗೆ ಪ್ರಯತ್ನ ಮಾಡಲಾಗಿತ್ತು. ಅದರ ನಡುವೆ ಬಂಟ್ವಾಳಕ್ಕೆ ಶ್ರೀ ನಾರಾಯಣಗುರು ವಸತಿ ಶಾಲೆ ಲಭಿಸಿದೆ. ಮುಂದಿನ ದಿನಗಳಲ್ಲಿ ಏಕಲವ್ಯ ಶಾಲೆ ಬಂದರೆ ಅದು ಬಂಟ್ವಾಳದ ಬೇರೆಡೆಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ.

ಹಾಲಿ ವಸತಿ ಶಾಲೆಗೆ ಗುರುತಿಸಿದ ಸ್ಥಳವು ಬಂಟ್ವಾಳದ ಪಿಲಾತಬೆಟ್ಟು ಗ್ರಾಮಕ್ಕೆ ಸಂಬಂಧಿಸಿದೆ. ಪುಂಜಾಲ ಕಟ್ಟೆ ಪ್ರದೇಶವು ಬಂಟ್ವಾಳ ಹಾಗೂ ಬೆಳ್ತಂಗಡಿ ಎರಡೂ ಕ್ಷೇತ್ರಗಳ ಸಾಕಷ್ಟು ಗ್ರಾಮೀಣ ಪ್ರದೇಶಗಳಿಗೆ ಸಮೀಪದಲ್ಲಿದೆ. ಹಾಲಿ ಗುರುತಿಸಿದ ನಿವೇಶನ ಶಾಲೆ ನಿರ್ಮಾಣಕ್ಕೆ ಸೂಕ್ತವಾಗಿದ್ದು, ಹೆದ್ದಾರಿಗೆ ಸಮೀಪ ವಿರುವುದರಿಂದ ಇದೇ ಸ್ಥಳವನ್ನು ಆಯ್ಕೆ ಮಾಡಿರುವ ಸಾಧ್ಯತೆ ಇದೆ.

Advertisement

ಶ್ರೀ ನಾರಾಯಣಗುರು ವಸತಿ ಶಾಲೆಯನ್ನು ಬಂಟ್ವಾಳಕ್ಕೆ ನೀಡುವುದಾಗಿ ಸಚಿವರು, ಸಂಸದರು ಭರವಸೆ ನೀಡಿದ್ದಾರೆ. ಬೇಕಾದ ಸೂಕ್ತ ಸ್ಥಳ ಪುಂಜಾಲಕಟ್ಟೆಯಲ್ಲಿ ಲಭ್ಯವಿರುವುದರಿಂದ ಅಲ್ಲಿ ನಿರ್ಮಿಸುವ ಚಿಂತನೆ ಇದೆ. ಅಲ್ಲಿರುವ ನಿವೇಶನ ಸಂಬಂಧಪಟ್ಟ ವಸತಿ ಶಾಲೆಗೆ ಮಂಜೂರಾದ ಬಳಿಕ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು.
-ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು
ಶಾಸಕರು, ಬಂಟ್ವಾಳ

ಬಂಟ್ವಾಳದಲ್ಲಿ ಈಗಾಗಲೇ ಜಾಗ ಕಾದಿರಿಸಿರುವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಅಲ್ಲಿಗೆ ನಾರಾಯಣ ಗುರು ವಸತಿ ಶಾಲೆಯನ್ನು ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿಪ್ರತೀ ಕ್ಷೇತ್ರದಲ್ಲೂ ಇಂತಹ ವಸತಿ ಶಾಲೆಗಳನ್ನು ಅನುಷ್ಠಾನ ಮಾಡಲಿದ್ದೇವೆ.ಹಾಲಿ 4 ಜಿಲ್ಲೆಗಳಿಗೆ ತಲಾ ಒಂದೊಂದು ವಸತಿ ಶಾಲೆ ಮಂಜೂರಾಗಿದ್ದು,
ಪ್ರತೀ ಜಿಲ್ಲೆಯ ಮಧ್ಯಭಾಗ ಜಾಗ ಇರುವಲ್ಲಿ ಹಾಗೂ ವಸತಿ ಶಾಲೆಕಡಿಮೆ ಇರುವಲ್ಲಿ ಅನುಷ್ಠಾನ ಮಾಡಲಿದ್ದೇವೆ. ವಸತಿ ಶಾಲೆಗಳಿಗೆಮೆರಿಟ್‌ ಆಧಾರದಲ್ಲಿ ಮಕ್ಕಳ ನೇಮಕಾತಿಯ ಜತೆಗೆ ಶೇ. 25ಸ್ಥಳೀಯ ವಿದ್ಯಾರ್ಥಿಗಳಿಗೂ ಆದ್ಯತೆ ನೀಡುತ್ತೇವೆ.
-ಕೋಟ ಶ್ರೀನಿವಾಸ ಪೂಜಾರಿ
ಸಚಿವರು, ಸಮಾಜ ಕಲ್ಯಾಣ-ಹಿಂದುಳಿದ ವರ್ಗಗಳ ಇಲಾಖೆ

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next