ಮಂಗಳೂರು: ದಲಿತೇತರರು, ಪ್ರಭಾವೀ ವ್ಯಕ್ತಿಗಳು, ಸರಕಾರಿ ಮತ್ತು ಸರಕಾರೇತರ ಇಲಾಖೆಗಳು ಒತ್ತುವರಿ ಮಾಡಿರುವ ಭೂಮಿಯನ್ನು ಸರಕಾರದ ಸ್ವಾಧೀನ ಪಡೆಯಬೇಕು ಮತ್ತು ಅರ್ಹ ಬಡ ದಲಿತರಿಗೆ ಹಕ್ಕುಪತ್ರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆ. 8ರಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಿತಿ ಅಧ್ಯಕ್ಷ ಚಂದು ಎಲ್., ಡಿಸಿ ಮನ್ನಾ ಭೂಮಿ ಹಂಚಿಕೆ ವಿಷಯದಲ್ಲಿ ಈ ಹಿಂದೆ ಅನುಸರಿಸಿಕೊಂಡು ಬಂದ ಕ್ರಮಗಳನ್ನು ಧಿಕ್ಕರಿಸಿರುವ ಜಿಲ್ಲಾಧಿಕಾರಿಯವರು, ದಲಿತ ವಿರೋಧಿ ನೀತಿ ಅನುಸರಿಸಿದ್ದಾರೆ. ಅವರನ್ನು ಈ ಜಿಲ್ಲೆಯಿಂದ ವರ್ಗಾಯಿಸಬೇಕೆಂದು ಈ ವೇಳೆ ಒತ್ತಾಯಿಸಲಾಗುವುದು ಎಂದರು.
ಜು. 2ರಂದು ಡಿಸಿ ಕಚೇರಿಯಲ್ಲಿ ನಡೆದ ದಲಿತರ ಕುಂದು ಕೊರತೆ ಸಭೆಯಲ್ಲಿ ಡಿಸಿ ಮನ್ನಾ ಭೂಮಿಯ ಕುರಿತು ಚರ್ಚೆ ನಡೆದಾಗ ಜಿಲ್ಲಾಧಿಕಾರಿಯವರು ಈ ಹಿಂದೆ ಅನುಸರಿಸಿಕೊಂಡು ಬಂದ ಕ್ರಮಗಳನ್ನು ಧಿಕ್ಕರಿಸಿ, ಡಿಸಿ ಮನ್ನಾ ಭೂಮಿಯ ಹಂಚಿಕೆಗೆ ಸರಕಾರದ ಮಾರ್ಗಸೂಚಿಯನ್ನು ಪಡೆಯಲಾಗುವುದು. ಸರಕಾರದ ಭೂ ಮಂಜೂರಾತಿ ನಿಯಮ 1969ರ ಪ್ರಕಾರ ಡಿಸಿ ಮನ್ನಾ ಭೂಮಿಯನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಇದಕ್ಕೆ ದಲಿತ ಮುಖಂಡರು ಆಕ್ಷೇಪಿಸಿ ಅಭಿಪ್ರಾಯ ನೀಡಿದಾಗ, ಸ್ವೀಕರಿಸದೇ ಜಿಲ್ಲಾಧಿಕಾರಿಯವರು ಸಭೆಯಿಂದ ಹೊರ ನಡೆಯುವ ಮೂಲಕ ದಲಿತ ವಿರೋಧಿಯಾಗಿ ನಡೆದುಕೊಂಡಿದ್ದಾರೆ ಎಂದು ಅವರು ಆಪಾದಿಸಿದರು.
ಅಂದು ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ತನಕ ಮೆರವಣಿಗೆ ಹಾಗೂ ಪ್ರತಿಭಟನೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಓಪ್ರತಿ ತಾಲೂಕಿನಲ್ಲಿ ಹಂತಹಂತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಮುಖಂಡರಾದ ಅಶೋಕ್ ಕೊಂಚಾಡಿ, ನಿರ್ಮಲ್‌ಕುಮಾರ್, ರಮೇಶ್ ಕೋಟ್ಯಾನ್, ಬಿ. ಕೆ. ವಸಂತ, ಬಾಲಚಂದ್ರ ಕೃಷ್ಣಾಪುರ, ರೋಹಿತಾಕ್ಷ ಕೆ. ಮೊದಲಾದವರು ಉಪಸ್ಥಿತರಿದ್ದರು.