Advertisement

ದ.ಕ. ಜಿಲ್ಲೆಗೆ 81 ಕೋ.ರೂ. ಅನುದಾನ: ಸಚಿವ ಖಂಡ್ರೆ

06:30 AM Aug 09, 2017 | Team Udayavani |

ಮಂಗಳೂರು: ಪೌರಾಡಳಿತ ಇಲಾಖೆ ವ್ಯಾಪ್ತಿ ಯಲ್ಲಿ ಬರುವ ದಕ್ಷಿಣ ಕನ್ನಡ ಜಿಲ್ಲೆಯ 9 ನಗರ ಹಾಗೂ ಪಟ್ಟಣ ಸ್ಥಳೀಯಾಡಳಿತ ಸಂಸ್ಥೆಗಳಿಗೆ 3ನೇ ಹಂತದ ನಗರೋ ತ್ಥಾನ ಯೋಜನೆಯಲ್ಲಿ 81 ಕೋ.ರೂ. ಅನುದಾನ ಬಿಡುಗಡೆ ಗೊಂಡಿದ್ದು, ಶೀಘ್ರ ಡಿಪಿಆರ್‌ ಸಿದ್ಧಪಡಿಸಿ ತಿಂಗಳೊಳಗೆ ಕಾಮಗಾರಿ ಆರಂಭಗೊಳ್ಳಲಿದೆ ಎಂದು ರಾಜ್ಯ ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಶೇ. 95 ಕಾಮಗಾರಿ ಪೂರ್ಣ
ಜಿಲ್ಲೆಯಲ್ಲಿ ಈ ಹಿಂದೆ ಪೌರಾಡಳಿತ ಇಲಾಖೆ ವ್ಯಾಪ್ತಿಯಲ್ಲಿ 7 ಸ್ಥಳೀಯಾಡಳಿತ ಸಂಸ್ಥೆಗಳಿದ್ದು 2ನೇ ನಗರೋತ್ಥಾನ ಯೋಜನೆಯಲ್ಲಿ 35 ಕೋ.ರೂ. ಅನುದಾನ ಬಿಡುಗಡೆಗೊಂಡಿತ್ತು. ಇದರ ಕಾಮಗಾರಿ ಶೇ. 95ರಷ್ಟು ಪೂರ್ಣಗೊಂಡಿದ್ದು, ಆಗಸ್ಟ್‌ ಅಂತ್ಯದೊಳಗೆ ಎಲ್ಲ ಕಾಮಗಾರಿ ಮುಗಿಯಲಿದೆ. ಆದರೆ ಪ್ರಸ್ತುತ ಜಿಲ್ಲೆಯಲ್ಲಿ ವಿಟ್ಲ ಹಾಗೂ ಕೋಟೆಕಾರ್‌ ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿರುವುದರಿಂದ ಸ್ಥಳೀಯಾಡಳಿತ ಸಂಸ್ಥೆಗಳ ಸಂಖ್ಯೆ 9ಕ್ಕೇರಿದೆ. ಪ್ರಸ್ತುತ 81 ಕೋ.ರೂ. ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಡಿಪಿಆರ್‌ ಸಿದ್ಧವಾಗುತ್ತಿದೆ. ಇಲಾಖೆ ವ್ಯಾಪ್ತಿಯ ರಾಜ್ಯದ ಒಟ್ಟು  265 ಸ್ಥಳೀಯಾಡಳಿತ ಸಂಸ್ಥೆಗಳಿಗೆ 3ನೇ ಹಂತದ ನಗರೋತ್ಥಾನ ಯೋಜನೆಯಲ್ಲಿ 2,855 ಕೋ.ರೂ. ಅನುದಾನ ಬಿಡುಗಡೆಗೊಂಡಿದೆ ಎಂದರು.

ಎಸ್‌ಎಫ್‌ಸಿಯಲ್ಲಿ ಇಲಾಖೆ ವ್ಯಾಪ್ತಿಯ ಸ್ಥಳೀಯಾಡಳಿತ ಸಂಸ್ಥೆಗಳಿಗೆ 2016-17ರಲ್ಲಿ 12.59 ಕೋ.ರೂ. ಅನುದಾನ ಬಂದಿದ್ದು, ಈಗಾಗಲೇ ಶೇ. 80 ಕಾಮಗಾರಿ ಪೂರ್ಣ ಗೊಂಡಿದೆ. 2017-18ರಲ್ಲಿಯೂ 12.59 ಕೋ.ರೂ. ಅನುದಾನ ಬಿಡುಗಡೆ ಗೊಂಡಿದ್ದು, ಟೆಂಡರ್‌ ಪ್ರಕ್ರಿಯೆ ಮುಗಿದು ಈಗಾಗಲೇ ಕಾಮಗಾರಿ ನಡೆಯುತ್ತಿದೆ ಎಂದರು.

ಘನತ್ಯಾಜ್ಯ ವಿಲೇವಾರಿ ಕುರಿತು ಕೂಡ ಗಮನಹರಿಸಲಾಗಿದ್ದು, ಅದರ ನಿರ್ವಹಣೆ ಕುರಿತಂತೆ ತಿಂಗಳೊಳಗೆ ಟೆಂಡರು ಪ್ರಕ್ರಿಯೆ ಪೂರ್ಣ ಗೊಳಿಸಲು ತಿಳಿಸಲಾಗಿದೆ. ಘಟಕ ಸ್ಥಾಪನೆಗೆ ಕೋಟೆಕಾರಿನಲ್ಲಿ ಲಭ್ಯವಿರುವ 3 ಎಕರೆ ಹಾಗೂ ವಿಟ್ಲದಲ್ಲಿ ಲಭ್ಯವಿರುವ ಒಂದು ಎಕರೆ ನಿವೇಶನವನ್ನು 5 ಎಕರೆಗೆ ಏರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ವಿವರಿಸಿದರು.

Advertisement

ಜಿಲ್ಲೆಯ ನಗರ, ಪಟ್ಟಣ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ದುಡಿಯುತ್ತಿರುವ 29 ಮಂದಿ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಲ್ಲಿ 7.5 ಲಕ್ಷ ರೂ. ನೀಡಲು ತೀರ್ಮಾನಿಸಲಾಗಿದೆ. ಜತೆಗೆ ಹೊರಗುತ್ತಿಗೆ ಆಧಾರದಲ್ಲಿ ದುಡಿಯುವ ಪೌರಕಾರ್ಮಿಕರಿಗೆ ಕರಾರು ಮುಗಿದ ತತ್‌ಕ್ಷಣ ಸ್ಥಳೀಯಾಡಳಿತ ಸಂಸ್ಥೆಯಿಂದಲೇ ನೇರವಾಗಿ ವೇತನ ನೀಡಲಾಗುವುದು. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಪ್ರಸ್ತುತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರಕಾರ ಆಡಳಿತಕ್ಕೆ ಬರುವ ಮೊದಲು ಶೇ. 50ರಷ್ಟು ಹುದ್ದೆಗಳು ಖಾಲಿ ಇತ್ತು. ಪ್ರಸ್ತುತ ರಾಜ್ಯದಲ್ಲಿ 2500 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕೊಳಚೆ ನೀರನ್ನು ನದಿಗೆ ಬೀಡುವ ಆರೋಪದ ಕುರಿತ ಪ್ರಶ್ನೆಗೆ ಉತ್ತರಿ ಸಿದ ಸಚಿವರು, ಯುಜಿಡಿ ವ್ಯವಸ್ಥೆ ಸರಿ ಯಿಲ್ಲದೆ ಇಂತಹ ಆರೋಪಗಳು ಕೇಳಿ ಬರು ತ್ತಿವೆ. ಇದಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲು ಈಗಾಗಲೇ ಜಿಲ್ಲಾಧಿ ಕಾರಿಗಳು ಸೂಚನೆ ನೀಡಿದ್ದಾರೆ. ಮುಂದೆ ದೇವನಹಳ್ಳಿ ಮಾದರಿ  ಯಲ್ಲಿ ಜಿಲ್ಲೆ ಯಲ್ಲೂ ಕೊಳಚೆ ನೀರು ವಿಲೇ ವಾರಿಗೆ ಜೆಟ್ಟಿಂಗ್‌ ಮೆಷಿನ್‌ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದರು.

ಬಯಲು ಶೌಚಮುಕ್ತ ಮೊದಲ ಜಿಲ್ಲೆ  ದ.ಕ.?
ದಕ್ಷಿಣ ಕನ್ನಡ ಜಿಲ್ಲೆಯು ತಿಂಗಳೊಳಗೆ ಬಯಲು ಶೌಚ ಮುಕ್ತ ಜಿಲ್ಲೆ ಎಂದು ಘೋಷಣೆ ಯಾಗುವ ಸಾಧ್ಯತೆ ಇದ್ದು, ಈ ರೀತಿ ಘೋಷಿಸಲ್ಪಟ್ಟ ರಾಜ್ಯದ ಮೊದಲ ಜಿಲ್ಲೆ ಎಂಬ ಗೌರವಕ್ಕೆ ಪಾತ್ರವಾಗಲಿದೆ. ಪೌರಾಡಳಿತ ಇಲಾಖೆಯ ವ್ಯಾಪ್ತಿಯ ಮೂಡಬಿದಿರೆಯನ್ನು ಹೊರತುಪಡಿಸಿದರೆ ಉಳಿದ ಸಂಸ್ಥೆಗಳು ಬಯಲು ಶೌಚ ಮುಕ್ತವಾಗಿವೆ. ಇಲ್ಲಿನ ಗ್ರಾ.ಪಂ.ಗಳು ಕೂಡ ಶೀಘ್ರ ಬಯಲು ಶೌಚ ಮುಕ್ತವಾಗಲಿವೆ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next