Advertisement

ದ.ಕ. ಜಿಲ್ಲೆಗೆ 25 ಸಾವಿರ ಕ್ವಿಂಟಲ್‌ ಕುಚ್ಚಲಕ್ಕಿ ಬಿಡುಗಡೆ

11:55 AM Apr 12, 2020 | Sriram |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪಡಿತರ ಚೀಟಿದಾರರಿಗೆ ವಿತರಣೆ ಮಾಡಲು ಜಿಲ್ಲೆಗೆ 25 ಸಾವಿರ ಕ್ವಿಂಟಲ್‌ ಕುಚ್ಚುಲಕ್ಕಿ ಬಿಡುಗಡೆಗೊಂಡಿದ್ದು, ಮುಂದಿನ ತಿಂಗಳಿನಿಂದ ವಿತರಣೆ ನಡೆಯಲಿದೆ.

Advertisement

ಕುಚ್ಚಲಕ್ಕಿ ಅಭಾವದಿಂದಾಗಿ ಕೆಲವು ತಿಂಗಳುಗಳಿಂದ ಪಡಿತರದಲ್ಲಿ ಇದು ಲಭ್ಯವಾಗುತ್ತಿರಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಚ್ಚಲಕ್ಕಿ ಅನ್ನ ಊಟ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಪಡಿತರದಲ್ಲಿ ಕುಚ್ಚಲಕ್ಕಿಯೇ ಬೇಕು ಎಂಬ ಬೇಡಿಕೆ ಹೆಚ್ಚಿತ್ತು. ಈ ಹಿನ್ನೆಲೆಯಲ್ಲಿ ಸರಕಾರಿ ಮಟ್ಟದಲ್ಲಿ ಮಾತುಕತೆ ನಡೆದು ಒಪ್ಪಿಗೆ ದೊರೆತಿದ್ದು, ಜಿಲ್ಲೆಯ ಪಡಿತರ ಚೀಟಿದಾರರಿಗೆ ಶೀಘ್ರ 20 ಸಾವಿರ ಕ್ವಿಂಟಲ್‌ ಕುಚ್ಚಲಕ್ಕಿ ಬಿಡುಗಡೆ ಮಾಡುವುದಾಗಿ ಕಳೆದ ವಾರ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದರು. ಅದರಂತೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಗುರುವಾರ 25 ಸಾವಿರ ಕ್ವಿಂಟಲ್‌ ಕುಚ್ಚಲಕ್ಕಿ ಬಿಡುಗಡೆಯಾಗಿದೆ.

ಮೇ ತಿಂಗಳಿಂದ ವಿತರಣೆ
ಎಪ್ರಿಲ್‌, ಮೇ ತಿಂಗಳ ಪಡಿತರ ವಿತರಣೆ ಪ್ರಕ್ರಿಯೆ ಎ. 1ರಿಂದಲೇ ಆರಂಭವಾಗಿದ್ದು, ಅವರೆಲ್ಲ ಬೆಳ್ತಿಗೆ ಅಕ್ಕಿಯನ್ನು ಪಡೆದುಕೊಂಡಿದ್ದಾರೆ. ಮುಂದಿನ ತಿಂಗಳು ಕುಚ್ಚಲಕ್ಕಿ ವಿತರಿಸುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 97,822 ಚೀಟಿದಾರರು ಬಾಕಿಜಿಲ್ಲೆಯಲ್ಲಿ ಒಟ್ಟು 2,73,902 ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳಿವೆ. ಈ ಪೈಕಿ 1,76,080 ಪಡಿತರ ಚೀಟಿದಾರರಿಗೆ ಬೆಳ್ತಿಗೆ ಅಕ್ಕಿ ಸಹಿತ ಪಡಿತರವನ್ನು ವಿತರಣೆ ಮಾಡಲಾಗಿದೆ. 97,822 ಚೀಟಿದಾರರು ಪಡಿತರ ಪಡೆಯಲು ಬಾಕಿ ಇದ್ದಾರೆ.

ವಿತರಣೆ ಮುಂದಿನ ಸಲ
ದ.ಕ. ಜಿಲ್ಲೆಗೆ 25 ಸಾವಿರ ಕ್ವಿಂಟಲ್‌ ಕುಚ್ಚಲಕ್ಕಿ ಗುರುವಾರ ಬಿಡುಗಡೆಯಾಗಿದೆ. ಈ ತಿಂಗಳಿನ ವಿತರಣೆ ಆರಂಭವಾಗಿ 11 ದಿನ ಕಳೆದಿರುವುದರಿಂದ ಈ ಬಾರಿ ಅದನ್ನು ವಿತರಿಸಲು ಆಗುವುದಿಲ್ಲ. ಮುಂದಿನ ಸಲ ವಿತರಣೆ ನಡೆಯಲಿದೆ.
-ಡಾ| ಮಂಜುನಾಥನ್‌,
ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next