Advertisement
ಉಚಿತ ಊಟಕಾರ್ಮಿಕರಿಗೆ ಉಚಿತ ಊಟದ ಪೊಟ್ಟಣ ಹಾಗೂ ನೀರಿನ ಬಾಟಲ್ ವಿತರಿಸಲಾಗಿದೆ. ಪ್ರಯಾಣಿಕರು ರೈಲಿನಲ್ಲಿ ತಮ್ಮ ನಿಗದಿತ ಸ್ಥಳ ತಲುಪಲು 2-3 ದಿನ ತಗಲುವುದರಿಂದ ಪ್ರಯಾಣ ಹಾದಿಯ ಪ್ರಮುಖ ಜಂಕ್ಷನ್‌ಗಳಲ್ಲಿ ಊಟೋಪಚಾರ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಮಂಗಳೂರು ಪೊಲೀಸ್ ಕಮಿಷನರ್ ಡಾ| ಹರ್ಷ ಅವರು ಕಾರ್ಮಿಕರ ಮನವೊಲಿಸಿ, ಅವರಿಗೆ ಸೂಕ್ತ ಊಟ, ತಿಂಡಿಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ವಿವಿಧೆಡೆ ಇನ್ನೂ ಕೂಡ ಕೆಲವು ರಾಜ್ಯಗಳ ವಲಸೆ ಕಾರ್ಮಿಕರು ಬಾಕಿಯಾಗಿದ್ದಾರೆ. ಅವರಿಗೆ ಜಿಲ್ಲಾಡಳಿತ ಹಾಗೂ ಸಂಘ-ಸಂಸ್ಥೆಗಳ ಮೂಲಕ ಆಶ್ರಯ, ಊಟ ಒದಗಿಸಲಾಗುತ್ತಿದೆ. ಮಂಗಳೂರಿನ ಮಿಲಾಗ್ರಿಸ್ ಶಾಲಾ ಕಟ್ಟಡದಲ್ಲಿರುವ ಉತ್ತರ ಪ್ರದೇಶದ ಸುಮಾರು 300 ಮಂದಿ ಕಾರ್ಮಿಕರು ತಮ್ಮ ಊರಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ಕೂಡ ನಡೆಸಿದರು. ಸರಿಯಾದ ಊಟ, ತಿಂಡಿ ಒದಗಿಸಿ ಕೊಡುವಂತೆಯೂ ಒತ್ತಾಯಿಸಿದರು. ಕಡಬ: ತವರಿಗೆ ತೆರಳಲು ಕಾರ್ಮಿಕರ ಪಟ್ಟು
ಕಡಬ: ಕಡಬ ಭಾಗದಿಂದ ಮೇ 19ರಂದು ಅಧಿಕಾರಿಗಳ ಸೂಚನೆ ಮೇರೆಗೆ ಊರಿಗೆ ತೆರಳಲು ತಯಾರಾಗಿದ್ದ ಜಾರ್ಖಂಡ್ ಮೂಲದ ಸುಮಾರು 148 ಕಾರ್ಮಿಕರ ಪ್ರಯಾಣ ಕೊನೆಯ ಕ್ಷಣದಲ್ಲಿ ರದ್ದುಗೊಂಡಿದ್ದು, ಅವರು ಕಡಬ ತಹಶೀಲ್ದಾರ್ ಕಚೇರಿ ಎದುರು ಜಮಾಯಿಸಿ ತಮ್ಮನ್ನು ಊರಿಗೆ ಕಳುಹಿಸಿಕೊಡುವಂತೆ ಆಗ್ರಹಿಸಿ ಘಟನೆ ನಡೆದಿದೆ. ಬಳಿಕ ಪುತ್ತೂರು ವಿಭಾಗದ ಡಿವೈಎಸ್ಪಿ ದಿನಕರ ಶೆಟ್ಟಿ ಆಗಮಿಸಿ, ವಲಸೆ ಕಾರ್ಮಿಕರನ್ನು ಸಮಾಧಾನಪಡಿಸಿ ಬಳಿಕ ಅವರಿಗೆ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದರು. ಈ ವೇಳೆ ಕಡಬ ಎಸ್,ಐ, ರುಕ್ಮ ನಾೖಕ್, ಡಿವೈಎಸ್ಪಿ ದಿನಕರ ಶೆಟ್ಟಿ ಹಾಗೂ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ದಿನಕರ ಶೆಟ್ಟಿ ಕಾರ್ಮಿಕರಿಗೆ ರೈಲು ಸ್ಥಗಿತಗೊಂಡಿರುವ ಬಗ್ಗೆ ಮನವರಿಕೆ ಮಾಡಿದರು.
ಪ್ರಯಾಣ ವ್ಯವಸ್ಥೆ ಆಗುವ ವರೆಗೆ ಕಡಬ ಗೌಡ ಸಮುದಾಯ ಭವನದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಯಿತು. ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್‌ಮಲೆ, ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್, ಪೊಲೀಸ್ ಸಿಬಂದಿ ಉಪಸ್ಥಿತರಿದ್ದರು.