Advertisement

ಡಿ.ಜೆ.ಹಳ್ಳಿ ಪ್ರಕರಣ: ಎನ್‌ಐಎ ಪ್ರವೇಶ

12:44 PM Sep 22, 2020 | Team Udayavani |

ಬೆಂಗಳೂರು: ದೇವರ ಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಖಾಡಕ್ಕಿಳಿದಿದ್ದು, ತನಿಖೆ ಆರಂಭಿಸಿದೆ.

Advertisement

ಭಾನುವಾರ ಮತ್ತು ಸೋಮವಾರಎ ನ್‌ಐಎಹಿರಿಯ ಮಹಿಳಾ ಅಧಿಕಾರಿ ನೇತೃತ್ವದ ತಂಡವೊಂದು ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಠಾಣೆಗೆ ಭೇಟಿ ನೀಡಿದ್ದು, ಹಿರಿಯ ಅಧಿಕಾರಿಗಳ ಜತೆ ಸುಮಾರು ಎರಡು ಗಂಟೆಗಳ ಕಾಲ ಚರ್ಚಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇಟ್ಟ ಆರೋಪಿಗಳ ಹಿನ್ನೆಲೆ, ಈಗಾಗಲೇ ಬಂಧನಕ್ಕೊಳಗಾಗಿರುವ ಎಸ್‌ಡಿಪಿಐ ಸಂಘಟನೆ ಸದಸ್ಯರ ಪೂರ್ವಪರ, ರುದ್ರೇಶ್‌ ಕೊಲೆ ಪ್ರಕರಣದ ಆರೋಪಿಗಳ ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಸಮೀವುದ್ದೀನ್‌ ಹಿನ್ನೆಲೆ ಬಗ್ಗೆ ಪ್ರಾಥಮಿಕ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ, ಸಿಸಿಬಿಯ ಹಿರಿಯ ಅಧಿಕಾರಿಗಳಿಂದಲೂ ಕೆಲವೊಂದು ಮಾಹಿತಿಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಸ್‌ಡಿಪಿಐನ ಕೆಲ ಕಾರ್ಯಕರ್ತರು ಭಯೋತ್ಪಾದಕ ಸಂಘಟನೆ ಸದಸ್ಯರ ಜತೆ ಸಂಪರ್ಕ ಹೊಂದಿದ್ದಾರೆಯೇ? ಇಲ್ಲವೇ? ಎಂಬ ಬಗ್ಗೆ ಮಾಹಿತಿ ಪಡೆಯಲು ಅವರ ಮೊಬೈಲ್‌ ನಂಬರ್‌ಗಳು, ಕಾಲ್‌ ಡಿಟೇಲ್ಸ್‌ ಅನ್ನು ಎನ್‌ ಐಎ ಸಂಗ್ರಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಮೇಯರ್‌ಗೆ ಢವಢವ?: ಪ್ರಕರಣದಲ್ಲಿ ಮಾಜಿ ಮೇಯರ್‌ ಸಂಪತ್‌ರಾಜ್‌ ಹಾಗೂ ಪಾಲಿಕೆಯ ಮಾಜಿ ಮತ್ತು ಹಾಲಿ ಸದಸ್ಯರುಕೇಳಿ ಬಂದಿತ್ತು. ಹೀಗಾಗಿ ಒಂದು ವೇಳೆ ಎನ್‌ಐಎ ಪ್ರಕರಣದ ತನಿಖೆಕೈಗೊಂಡರೆ ಮಾಜಿ ಮೇಯರ್‌ ಸಂಪತ್‌ ರಾಜ್‌ ಹಾಗೂ ಇತರರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ. ಸದ್ಯ ಸಂಪತ್‌ ರಾಜ್ ಕೋವಿಡ್ ಸೋಂಕಿಗೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಮತ್ತೂಂದೆಡೆ ರಾಜ್ಯ ಸರ್ಕಾರ ಕೂಡ ಪ್ರಕರಣವನ್ನು ಎನ್‌ಐಎಗೆ ವಹಿಸಲು ಆಸಕ್ತಿ ಹೊಂದಿರುವ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

………………………………………………………………………………………………………………………………………………………

Advertisement

ಅಧಿಕಾರದ ಬಗ್ಗೆ ನಿಲುವುಕೇಳಿದ ಹೈಕೋರ್ಟ್‌ 

ಬೆಂಗಳೂರು: ಡಿ.ಜೆ. ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ನೇಮಕ ಮಾಡಿರುವ ಕ್ಲೇಮ್‌ ಕಮಿಷನರ್‌ ಅವರಿಗೆ ಸಾಕ್ಷಿಗಳನ್ನು ವಿಚಾರಣೆಗೆ ಕರೆಸಲು, ಮಾಹಿತಿ ಇಲ್ಲವೆ ದಾಖಲೆಗಳನ್ನು ಸಂಗ್ರಹಿಸಲು ವಿಚಾರಣಾ ಆಯೋಗಗಳ ಕಾಯ್ದೆ-1952ರಡಿ ಪ್ರದತ್ತವಾದ ಅಧಿಕಾರವನ್ನು ನೀಡುವ ಬಗ್ಗೆ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಪ್ರಕರಣ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸೇರಿದಂತೆ ಈ ಕುರಿತು ವಿವಿಧ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾ. ಎ.ಎಸ್‌. ಓಕ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ನಡೆಸಿತು.

ಈ ವೇಳೆ ಅರ್ಜಿದಾರ ಗಿರೀಶ್‌ ಭಾರದ್ವಾಜ್‌ ಪರ ವಕೀಲ ಶ್ರೀಧರ್‌ ಪ್ರಭು ವಾದ ಮಂಡಿಸಿ, ಸುಪ್ರೀಂ ಕೋರ್ಟ್‌ ಮಾರ್ಗಸೂಚಿಗಳ ಪ್ರಕಾರ ಕ್ಲೇಮ್‌ ಕಮಿಷನರ್‌ ನೇಮಕ ಮಾಡಲಾಗಿದೆ. ಆದರೆ, ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳು, ಸಂತ್ರಸ್ತರನ್ನು ವಿಚಾರಣೆಗೆ ಕರೆಸಲು ಸಮನ್ಸ್ ಜಾರಿಗೊಳಿಸಲು ಹಾಗೂ ಘಟನೆಗೆ ಸಂಬಂಧಿಸಿದ ಮಾಹಿತಿ, ದಾಖಲೆಗಳನ್ನು ಸಂಗ್ರಹಿಸಲು ವಿಚಾರಣಾ ಆಯೋಗಗಳ ಕಾಯ್ದೆ-1952ರಲ್ಲಿ ಪ್ರದತ್ತವಾದ ಕೆಲ ಅಧಿಕಾರಗಳನ್ನು ಕ್ಲೇಮ್‌ ಕಮಿಷನರ್‌ ಅವರಿಗೆ ನೀಡಬೇಕಾಗುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಈ ಬಗ್ಗೆ ಉತ್ತರ ನೀಡುವಂತೆ ರಾಜ್ಯ ಸರ್ಕಾರದ ಪರ ವಕೀಲರಿಗೆ ಸೂಚಿಸಿ ಸೆ.29 ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next