Advertisement
ಆ ಸದ್ದು ಕಿವಿಗೆ ಬಿದ್ದ ಕೂಡಲೇ ಕಲ್ಲು, ಮರಳಿನಲ್ಲಿ ಅರೆಬರೆ ಬಟ್ಟೆ ಧರಿಸಿ ಆಡುತ್ತಿರುವ ಮಕ್ಕಳು ಕೇಕೆ ಹಾಕುತ್ತಾ ಓಡೋಡಿ ಬರುತ್ತವೆ. ಅವುಗಳಿಗೆ ಪಪ್ಪಿ ಕೊಟ್ಟು, ಬಾಯ್ ಹೇಳಲು ಅಲ್ಲಿ ಅಮ್ಮಂದಿರಾಗಲೀ, ಅಪ್ಪಂದಿರಾಗಲೀ ಇರುವುದಿಲ್ಲ. ಅವರೆಲ್ಲ ಅದಾಗಲೇ ಖಾಲಿ ಹೊಟ್ಟೆಯಲ್ಲಿ ಕೂಲಿ ಮಾಡಲು ಹೋಗಿರುತ್ತಾರೆ. ಒಂದೊಂದು ಅವತಾರದಲ್ಲಿರುವ ಆ ಮಕ್ಕಳು, ಓಮ್ನಿಯಲ್ಲಿ ಶಿಸ್ತಾಗಿ ಕುಳಿತ ಮೇಲೆ, ಅದು ಅವರನ್ನೆಲ್ಲ ಕರೆದೊಯ್ಯುವುದು “ದಿಯಾ ಘರ್’ಗೆ.
Related Articles
ಅದು ರಾಮಮೂರ್ತಿ ನಗರದಲ್ಲಿ ಕಂಡಂಥ ದೃಶ್ಯ. ಅಲ್ಲಿ ಅಪ್ಪ- ಅಮ್ಮ ಇದ್ದಿರಲಿಲ್ಲ. ಶ್ವೇತಾ, ವೀರೇಶ್ ಮತ್ತು ಗಾಯತ್ರಿ ಮೂವರು ಪುಟಾಣಿಗಳು ಮರಳಿನ ರಾಶಿ ಮೇಲೆ ಉರುಳಾಡುತ್ತಿದ್ದರು. ಅಲ್ಲಿ ತಮ್ಮ ಮತ್ತು ತಂಗಿಯನ್ನು ಜತನದಿಂದ ಕಾಯುತ್ತಿದ್ದವಳು ಶ್ವೇತಾ ಎಂಬ ನಾಲ್ಕೂವರೆ ವರುಷದ ಬಾಲೆ. ವೀರೇಶನಿಗೆ 3 ವರುಷ, ಗಾಯತ್ರಿಗೆ ಇನ್ನೂ ಒಂದೇ ವರುಷ. ಮುದ್ದುಮುದ್ದಾಗಿ, ನೋಡಲೂ ಆರೋಗ್ಯವಾಗಿಯೇ ಕಾಣಿಸುತ್ತಿದ್ದ ರಾಯಚೂರು ಮೂಲದ ಈ ಮೂವರು ಪುಟಾಣಿಗಳೆದುರು, ಕಾನ್ವೆಂಟಿಗೆ ಹೊರಟಿದ್ದಂಥ ಸಿರಿವಂತರ ಮಕ್ಕಳು ವ್ಯಾನ್‌ಗಾಗಿ ಕಾಯುತ್ತಿದ್ದರು… ಈ ದೃಶ್ಯವನ್ನು ಕಂಡ ಸರಸ್ವತಿ ದಂಪತಿಯ ಮನ ಕರಗಿತಂತೆ. ತಡಮಾಡಲಿಲ್ಲ. ಆ ಮೂವರು ಮಕ್ಕಳನ್ನು ಇಟ್ಟುಕೊಂಡೇ “ದಿಯಾ ಘರ್’ ಶಾಲೆ ಆರಂಭಿಸಿದರು, ಸರಸ್ವತಿ. 3 ವರ್ಷದಿಂದ ನಡೆಯುತ್ತಿರುವ ಈ ಶಾಲೆಯಲ್ಲಿ ಕಲಿಯುತ್ತಿರುವುದು 60 ಮಕ್ಕಳು. ಅವೆಲ್ಲವೂ 6 ವರುಷದೊಳಗಿನ ಪುಟಾಣಿಗಳು. ಅಂದಹಾಗೆ, ಪುಟಾಣಿ ಶ್ವೇತಾ ಈಗ 1ನೇ ತರಗತಿಗೆ ಹೋಗುತ್ತಿದ್ದಾಳೆ. “ಆರಂಭದಲ್ಲಿ ಮಕ್ಕಳನ್ನು ಶಾಲೆ ಗಳಿಸಲು ಪೋಷಕರು ಒಪ್ಪುತ್ತಿರಲಿಲ್ಲ. ಮೊದಲು ಆ ಪೋಷಕರನ್ನು ಶಿಕ್ಷಣದ ಮಹತ್ವ ತಿಳಿಸಿದೆವು’ ಎನ್ನುತ್ತಾರೆ ಸರಸ್ವತಿ.
Advertisement
ಬೀದಿಯಲ್ಲಿದ್ದಾರೆ, 4 ಲಕ್ಷ ಮಕ್ಕಳು!“ಬೇರೆ ಊರಿನಿಂದ ಬಂದು, ಇಲ್ಲಿ ಕಟ್ಟಡ ಕಟ್ಟುವ ಕೆಲಸದಲ್ಲಿ ನಿರತರಾದವರ ಮಕ್ಕಳ ಸಂಖ್ಯೆಯೇ ಬರೋಬ್ಬರಿ 4 ಲಕ್ಷ ಇದೆ. ಅವರೆಲ್ಲರ ಭವಿಷ್ಯವೂ ಚಿಂತಾಜನಕ’ ಎನ್ನುವುದು ಸರಸ್ವತಿ ಅವರ ಕಳವಳ. ಈ ಮಕ್ಕಳು ಆಡುವುದನ್ನು ಹಾದಿಬೀದಿಯಲ್ಲಿ ಹೋಗುವ ರಾಜಕಾರಣಿಗಳು, ಧನಿಕರು ನೋಡುತ್ತಿರುತ್ತಾರೆ. ಎಷ್ಟೋ ಸಲ ಆ ಕಟ್ಟಡಗಳ ಗೃಹಪ್ರವೇಶವಿದ್ದಾಗಲೂ, ಅದಕ್ಕಾಗಿ ದುಡಿದ ಕಾರ್ಮಿಕರಿಗೆ, ಅವರ ಮಕ್ಕಳಿಗೆ ಕರೆದು ಊಟ ಹಾಕುವ ಮಾನವೀಯತೆಯನ್ನು ಶ್ರೀಮಂತರು ತೋರುವುದಿಲ್ಲ ಎನ್ನುವ ಬೇಸರವೂ ಇವರದ್ದು. ಈ ಶಾಲೆಯಲ್ಲಿ ಅಕ್ಷರಾಭ್ಯಾಸ ನಡೆಯುತ್ತೆ. ಮಾಂಟೆಸೊರಿ ಕಲಿಸುವಂಥ ಆಟಗಳು, ಚಟುವಟಿಕೆಗಳನ್ನೂ ಇಲ್ಲೂ ಹೇಳಿಕೊಡುತ್ತಾರೆ. ಚೆಂದದ ಕತೆಗಳು ಮಕ್ಕಳ ಮನಸ್ಸನ್ನು ಅರಳಿಸುತ್ತವೆ. ಹೊತ್ತು ಹೊತ್ತಿಗೆ ಹಣ್ಣು- ಹಂಪಲು ಕೊಡುತ್ತಾರೆ. ಮಧ್ಯಾಹ್ನದ ವೇಳೆಗೆ ಯುವಲೋಕ ಫೌಂಡೇಶ್‌ನ ಎಂಬ ಎನ್‌ಜಿಒದಿಂದ ಈ ಮಕ್ಕಳಿಗೆ ಬಿಸಿಯೂಟ ಹಾಕುತ್ತಾರೆ. ಸಂಜೆ ಇವರೆಲ್ಲರೂ ಹೊರಡುವಾಗ, ಹಾಲು- ಬಿಸ್ಕತ್ತನ್ನು ಕೊಡುತ್ತಾರೆ. ಅಪ್ಪ- ಅಮ್ಮ ಕಲ್ಲು- ಮಣ್ಣು ಹೊತ್ತು ಸುಸ್ತಾಗಿ, ಬರುವ ಹೊತ್ತಿಗೆ ಈ ಮಕ್ಕಳು ನಗುತ್ತಾ, “ಅಮ್ಮಾ ಟಿಂಕಲ್ ಟಿಂಕಲ್ ಹೇಳಾ?’ ಅಂತ ಕೇಳುತ್ತಾರೆ. ಹಾಗೆಂದರೇನೆಂದು ಅಪ್ಪ- ಅಮ್ಮನಿಗೆ ಅರ್ಥವಾಗುವುದಿಲ್ಲ. ಆಗ ಆ ಮಕ್ಕಳು, ಮೇಲಿನ ಆಗಸದಲ್ಲಿ ಹೊಳೆಯುವ ನಕ್ಷತ್ರಗಳತ್ತ ಬೆರಳು ತೋರುತ್ತವೆ..! ಆ ಬೆಳಕೇ “ದಿಯಾ ಘರ್’ನ ಸಾರ್ಥಕತೆ. ಅಮೆರಿಕ ಟು ಬೆಂಗಳೂರು… ಮಾನವೀಯ ಪಯಣ
ಸರಸ್ವತಿ ಅವರಿಗೆ ಇಂಥ ಮಕ್ಕಳ ಮೇಲೆ ಪ್ರೀತಿ ಹುಟ್ಟಲೂ ಕಾರಣವಿದೆ. ಇವರು ಚಿಕ್ಕಂದಿನಿಂದಲೂ ಬರ್ತ್‌ಡೇ ಆಚರಿಸಿಕೊಂಡಿ ಇಂಥ ಅಲೆಮಾರಿ ಮಕ್ಕಳ ನಡುವೆಯೇ ಅಂತೆ. ಈ ಕಾರಣದಿಂದ ಆ ಮಕ್ಕಳ ಸಂಕಟ, ನೋವುಗಳೆಲ್ಲ ಬಹಳ ಬೇಗ ಅರ್ಥವಾಯಿತು. ಇವರು ಮೊದಲು ಕೆಲಸ ಮಾಡಿದ್ದು, ಮುಂಬೈ ಬೀದಿಗಳಲ್ಲಿನ ಅಸಂಘಟಿತ ಕೂಲಿಕಾರ್ಮಿಕರ ಮಕ್ಕಳ ಜೊತೆ. ಕೆಲ ಕಾಲ ಅಮೆರಿಕದಲ್ಲಿದ್ದಾಗ, ಅಲ್ಲಿನ ಜೈಲಿನ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸುತ್ತಿದ್ದರಂತೆ. ದಿಯಾ ಘರ್‌ಗೆ ಇತ್ತೀಚೆಗೆ ಬಾಡಿಗೆ ಕಟ್ಟಡವೊಂದಕ್ಕೆ ಶಿಫ್ಟ್ ಆಗಿ, ಶಾಲೆ ನಡೆಸುತ್ತಿದೆ. ಇಲ್ಲಿ ನಾಲ್ವರು ಶಿಕ್ಷಕರು, ಮಕ್ಕಳಿಗೆ ಪಾಠ ಹೇಳುತ್ತಾರೆ.
– ಸರಸ್ವತಿ ಪದ್ಮನಾಭನ್, “ದಿಯಾ ಘರ್’ ಸ್ಥಾಪಕಿ – ಕೀರ್ತಿ