Advertisement

ಬೆಳಕಿನ ಹಬ್ಬ ದೀಪಾವಳಿಗೆ ಈ ಬಾರಿ ಸ್ವದೇಶಿ ರಂಗು

12:11 PM Oct 16, 2017 | Team Udayavani |

ಮಂಗಳೂರು: ಚೀನಾ ವಸ್ತುಗಳ ಬಹಿಷ್ಕಾರದ ಕೂಗು ವ್ಯಾಪಕವಾಗಿರುವಾಗಲೇ ಇದೀಗ ಬೆಳಕಿನ ಹಬ್ಬ ದೀಪಾವಳಿಗೂ ಸ್ವದೇಶಿ ರಂಗು ಬರತೊಡಗಿದೆ. ಬೆಂಗಳೂರಿನಲ್ಲಿ ಎಕೋ ಸಂಸ್ಥೆಯ ವಿಶೇಷ ಮಕ್ಕಳು ತಯಾರಿಸಿದ ಸ್ವದೇಶಿ ಆಕಾಶಬುಟ್ಟಿಗಳಿಗೆ ರಾಜ್ಯಾದ್ಯಂತ ಬೇಡಿಕೆ ಹೆಚ್ಚಿದೆ. ಮಂಗಳೂರು, ಉಡುಪಿಯಲ್ಲೂ ಈಗ “ಆಯೋಜಕ್‌’ ಸ್ವದೇಶಿ ಆಕಾಶಬುಟ್ಟಿಗಳದ್ದೇ ಹವಾ.

Advertisement

ಎಕೋ ಸಂಸ್ಥೆಯಲ್ಲಿರುವ 20ಕ್ಕೂ ಹೆಚ್ಚು ವಿಶೇಷ ಮಕ್ಕಳು ಬೆಂಗಳೂರಿನ ರಾಜಾಜಿನಗರದಲ್ಲಿರುವ ಸಮರ್ಪಣ ಸಂಸ್ಥೆಯ 
ಮುಂದಾಳತ್ವದಲ್ಲಿ ಆಕಾಶಬುಟ್ಟಿಗಳನ್ನು ಸಿದ್ಧಪಡಿಸಿದ್ದಾರೆ. ಇವರೆಲ್ಲ 10 ರಿಂದ 18 ವರ್ಷದವರಾಗಿದ್ದು, ಪ್ರತಿ ಬುಟ್ಟಿಗೆ 25 ರೂ.ಗಳನ್ನು ಪಡೆಯಲಿದ್ದಾರೆ. ಸುಮಾರು 1 ತಿಂಗಳಿನಿಂದ ಮಕ್ಕಳು ಆಕಾಶಬುಟ್ಟಿ ತಯಾರಿಕೆಯಲ್ಲಿ ನಿರತರಾಗಿದ್ದು, 6000ಕ್ಕೂ ಹೆಚ್ಚು ಆಕಾಶಬುಟ್ಟಿಗಳು ಸಿದ್ಧವಾಗಿವೆ. ಮೈಸೂರು, ಕಾಸರಗೋಡು, ಕುಂದಾಪುರ, ಮಂಗಳೂರು, ರಾಯಚೂರು ಸಹಿತ ರಾಜ್ಯದ ವಿವಿಧ ಕಡೆಗಳಿಂದ ಆಕಾಶಬುಟ್ಟಿಗೆ ಬೇಡಿಕೆ ಬಂದಿದ್ದು, ಪೂರೈಕೆ ಮಾಡಲಾಗುತ್ತಿದೆ ಎಂದು ಸಮರ್ಪಣದ ಸಿಬ್ಬಂದಿ ಪೂರ್ಣಿಮಾ ತಿಳಿಸಿದ್ದಾರೆ.

ಮಂಗಳೂರಿನಲ್ಲೂ ಸ್ವದೇಶಿ ಆಕಾಶಬುಟ್ಟಿಗಳಿಗೆ ಬೇಡಿಕೆಯಿರುವ ಕಾರಣ ಯುವಾ ಬ್ರಿಗೇಡ್‌ ಕಾರ್ಯಕರ್ತರು ಈಗಾಗಲೇ ಆಕಾಶಬುಟ್ಟಿಗಳನ್ನು ತರಿಸಿದ್ದಾರೆ. ಇದೀಗ ಸ್ವದೇಶಿ ಆಕಾಶಬುಟ್ಟಿಗಳು ರಥಬೀದಿಯಲ್ಲಿರುವ ವಿವೇಕ್‌ ಟ್ರೇಡರ್ನಲ್ಲಿ ಲಭ್ಯವಿದ್ದು, ಬೇಡಿಕೆಗೆ ಅನುಗುಣವಾಗಿ ಮುಂದಿನ ವರ್ಷದಿಂದ ಇನ್ನಷ್ಟು ಆಕಾಶಬುಟ್ಟಿಗಳನ್ನು ತರಿಸಲಾಗುವುದು ಎಂದು ಯುವಾ ಬ್ರಿಗೇಡ್‌ ಸುಳ್ಯ ತಾಲೂಕು ಸಂಚಾಲಕ ಸತೀಶ್‌ ತಿಳಿಸಿದ್ದಾರೆ.

ಚೀನಾ ಆಕಾಶಬುಟ್ಟಿ ತ್ಯಜಿಸಿ: ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಚೀನಾ ದಾಳಿ ಮಾಡುತ್ತಿದ್ದು, ನಮ್ಮ ದೇಶೀಯ ಆರ್ಥಿಕತೆಗೆ
ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಚೀನಾ ನಿರ್ಮಿತ ಆಕಾಶಬುಟ್ಟಿಗಳನ್ನು ತ್ಯಜಿಸಿ ಸ್ವದೇಶಿ ಆಕಾಶಬುಟ್ಟಿಗಳನ್ನೇ
ಬಳಸಬೇಕು ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಆಂದೋಲನವೇ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆಯೋಜಕ್‌ ಸ್ವದೇಶಿ ಆಕಾಶಬುಟ್ಟಿಗಳಿಗೆ ಇದೀಗ ಬೇಡಿಕೆ ಕುದುರಿದೆ. ಸೂರತ್‌ ಬಟ್ಟೆ, ಚನ್ನಪಟ್ಟಣ ಕಟ್ಟಿಗೆ: ಸ್ವದೇಶಿ ಆಕಾಶಬುಟ್ಟಿ ನಿರ್ಮಾಣಕ್ಕೆ ಬೇಕಾಗುವ ಬಟ್ಟೆಯನ್ನು ಸೂರತ್‌ನ ನೇಕಾರರಿಂದ ತರಿಸಲಾಗಿದೆ. ಕಟ್ಟಿಗೆ ತುಂಡುಗಳು ಚನ್ನಪಟ್ಟಣದವು. ಪ್ರತಿ ಆಕಾಶಬುಟ್ಟಿ ತಯಾರಿಕೆಗೆ 6 ಇಂಚಿನ 32 ಕಡ್ಡಿ ಮತ್ತು 12 ಇಂಚಿನ ನಾಲ್ಕು ಕಡ್ಡಿ; 4 ಇಂಚಿನ 32 ಕಡ್ಡಿ ಮತ್ತು 8 ಇಂಚಿನ 4 ಕಡ್ಡಿಗಳು ಬೇಕಾಗುತ್ತವೆ. ಇದಕ್ಕೆ ಬೇಕಾದ ಅಂಟನ್ನು ಸ್ಥಳೀಯ ಗೃಹಿಣಿಯರು ಸಿದ್ಧಪಡಿಸುತ್ತಾರೆ. ಒಟ್ಟಿನಲ್ಲಿ ಇಡೀ ಆಕಾಶಬುಟ್ಟಿ ಸ್ವದೇಶಿಮಯವಾಗಿರುತ್ತದೆ ಎನ್ನುತ್ತಾರೆ ಸಮರ್ಪಣದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಹೊಸಮನಿ.

ಶೇ.25 ಹಣ ಸೈನಿಕರಿಗೆ
ಒಂದು ಆಕಾಶಬುಟ್ಟಿಗೆ 300ರೂ. ದರ ನಿಗದಿ ಮಾಡಲಾಗಿದ್ದು, ಸೈನಿಕರಿಗೆ ನೆರವಾಗುವ ಉದ್ದೇಶದಿಂದ ಇದರಲ್ಲಿ ಶೇ.25ರಷ್ಟು ಹಣವನ್ನು ಕರ್ನಾಟಕ ಸೈನಿಕ್‌ ವೆಲ್‌ಫೇರ್‌ ಆರ್ಗನೈಝೇಶನ್‌ಗೆ ಕಳುಹಿಸಿಕೊಡಲಾಗುತ್ತದೆ. ಪ್ರತಿ ಬುಟ್ಟಿಗೆ 25ರೂ.ಗಳಂತೆ ತಯಾರಕ ವಿಶೇಷ ಮಕ್ಕಳಿಗೆ ನೀಡಲಾಗುತ್ತದೆ ಎಂದು ಶಿವಕುಮಾರ ಹೊಸಮನಿ ತಿಳಿಸಿದ್ದಾರೆ.

Advertisement

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next