ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿಯ ಕೊಡುಗೆ ಎಂಬಂತೆ ಗುರುವಾರ(ಅಕ್ಟೋಬರ್ 21) ಕೇಂದ್ರ ಸಚಿವ ಸಂಪುಟ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ(ಡಿಎ) ಮತ್ತು ಪಿಂಚಣಿದಾರರ ಡಿಯರ್ನೆಸ್ ಅಲೋವೆನ್ಸಸ್ ಬಿಡುಗಡೆಗೆ ಅನುಮೋದನೆ ನೀಡಿದೆ. ಇದು 2021ರ ಜುಲೈನಿಂದ ಅನ್ವಯವಾಗಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಸಂಘ ಪರಿವಾರದವರು ಸಮಾಜ ಒಡೆಯುವ ಕೆಲಸ ಮಾಡ್ತಾರೆಂಬ ಭಯವಿದೆ: ಸಿದ್ದರಾಮಯ್ಯ
ಡಿಎ (ತುಟ್ಟಿಭತ್ಯೆ) ಮತ್ತು ಡಿಆರ್ (Dearness relief to the pensioners) ಹೆಚ್ಚಳದಿಂದಾಗಿ ಕೇಂದ್ರ ಸರ್ಕಾರದ 47.14 ಲಕ್ಷ ನೌಕರರಿಗೆ ಹಾಗೂ 68.62 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ ಎಂದು ವರದಿ ವಿವರಿಸಿದೆ.
ಕೇಂದ್ರ ಸರ್ಕಾರ ಶೇ.3ರಷ್ಟು ಡಿಎ ಮತ್ತು ಡಿಆರ್ ಹೆಚ್ಚಳ ಮಾಡಿದ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 9,488.70 ಕೋಟಿ ರೂಪಾಯಿಯಷ್ಟು ಹೆಚ್ಚುವರಿ ಹೊರೆಯಾಗಲಿದೆ ಎಂದು ವರದಿ ಹೇಳಿದೆ.
ಇದಕ್ಕೂ ಮೊದಲು ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ನೀಡಲಾದ ಡಿಎ ಮತ್ತು ಡಿಆರ್ ಅನ್ನು ಶೇ.17ರಿಂದ ಶೇ. 28ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಆದರೆ ಕೋವಿಡ್ 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಡಿಎ ಮತ್ತು ಡಿಆರ್ ನ ಹೆಚ್ಚುವರಿ ಕಂತುಗಳನ್ನು ಸ್ಥಗಿತಗೊಳಿಸಿತ್ತು.
ಸೆಪ್ಟೆಂಬರ್ ತಿಂಗಳಿನಲ್ಲಿ ಹಣಕಾಸು ಸಚಿವಾಲಯ ಅಡಿಯಲ್ಲಿ ವೆಚ್ಚದ ಇಲಾಖೆಯು, ನಿವೃತ್ತ ಕೇಂದ್ರ ಸರ್ಕಾರಿ ನೌಕರರು ನಗದು ಪಾವತಿ ಮತ್ತು ಗ್ರಾಚ್ಯುಟಿ ಪಡೆಯಲಿರುವುದಾಗಿ ತಿಳಿಸಿ ಒಂದು ಜ್ಞಾಪನಾ ಪತ್ರವನ್ನು ರವಾನಿಸಿತ್ತು.