Advertisement

ಈ ದೀಪಾವಳಿಗೆ ಮನೆಯಲ್ಲೇ ಬಗೆ ಬಗೆಯ ಭಕ್ಷ್ಯ ತಯಾರಿಸಿ ಸಂಭ್ರಮಿಸಿ

07:42 PM Oct 21, 2022 | Team Udayavani |

ದೀಪಾವಳಿ ಎಂದರೆ ದೇಶಾದ್ಯಂತ ಆಚರಿಸುವ ವಿಶೇಷ ಹಬ್ಬ. ಹೀಗಾಗಿ ಈ ದಿನಕ್ಕಾಗಿ ಸಿಹಿ- ಖಾರ ಸಹಿತ ಹಲವಾರು ವಿಶಿಷ್ಟವಾದ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಈ ಕುರಿತು ಕೆಲವು ರೆಸಿಪಿಗಳು ಇಲ್ಲಿವೆ.

Advertisement

ಕಡ್ಲೆ ಬೇಳೆ ಹೋಳಿಗೆ
ಬೇಕಾಗುವ ಸಾಮಗ್ರಿಗಳು
ಕಡ್ಲೆ ಬೇಳೆ-1ಕಪ್‌,ಮೈದಾ-1ಕಪ್‌,ಅರಿಶಿನ ಪುಡಿ-ಅರ್ಧ ಚಮಚ,ತೆಂಗಿನೆಣ್ಣೆ -4ಚಮಚ,ಏಲಕ್ಕಿ-2ರಿಂದ 3,ಬೆಲ್ಲ ಅಥವಾ ಸಕ್ಕರೆ-1ಕಪ್‌,ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಕಡ್ಲೆಬೇಳೆಯನ್ನು ತೊಳೆದು ಕುಕ್ಕರ್‌ ನಲ್ಲಿ ಬೇಯಿಸಿಟ್ಟುಕೊಳ್ಳಿ.ನಂತರ ಒಂದು ಬೌಲ್‌ ಗೆ ಮೈದಾ,ಉಪ್ಪು ಮತ್ತು ಅರಿಶಿನ ಪುಡಿಯನ್ನು ಹಾಕಿ ಸ್ವಲ್ಪ ನೀರು ಹಾಕಿ ಕಲೆಸಿ ಅದಕ್ಕೆ ತೆಂಗಿನೆಣ್ಣೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ ಸುಮಾರು 20ರಿಂದ25 ನಿಮಿಷಗಳ ಕಾಲ ಹಾಗೇ ಬಿಡಿ.ತದನಂತರ ಬೇಯಿಸಿಟ್ಟ ಕಡ್ಲೆಬೇಳೆಯನ್ನು ಬೆಲ್ಲ ಅಥವಾ ಸಕ್ಕರೆ ಜೊತೆ ಸೇರಿಸಿ ನೀರು ಹಾಕದೇ ಮಿಕ್ಸ್‌ ಜಾರಿಗೆ ಹಾಕಿ ಗ್ರೈಂಡ್ ಮಾಡಿಕೊಳ್ಳಿ. ಹೂರಣದ ಈ ಮಿಶ್ರಣ ಉಂಡೆ ಮಾಡುವಷ್ಟು ಗಟ್ಟಿಯಾಗಿರಲಿ.ನಂತರ ಮಿಶ್ರಣಕ್ಕೆ ಏಲಕ್ಕಿ ಪುಡಿ ಸೇರಿಸಿ ಉಂಡೆ ಕಟ್ಟಿ ಆಮೇಲೆ ಮೈದಾ ಹಿಟ್ಟಿನ ಉಂಡೆ ಮಾಡಿ ಸ್ವಲ್ಪ ಲಟ್ಟಿಸಿ ಅದರ ಮಧ್ಯದಲ್ಲಿ ಹೂರಣದ ಉಂಡೆ ಸೇರಿಸಿ ಪುನಃ ಲಟ್ಟಿಸಿರಿ.ಲಟ್ಟಿಸಿದ ಹೋಳಿಗೆಯನ್ನು ಸಣ್ಣ ಉರಿಯಲ್ಲಿ ಕಾವಲಿಯ ಮೇಲೆ ಹಾಕಿ ಎರಡೂ ಬದಿಗಳನ್ನು ಹದವಾಗಿ ಕಾಯಿಸಿ ತೆಗೆಯಿರಿ.ಬಿಸಿ-ಬಿಸಿಯಾದ ಕಡ್ಲೆ ಬೇಳೆ ಹೋಳಿಗೆ ತುಪ್ಪ ಜೊತೆಗೆ ತಿನ್ನಲು ಬಹಳ ರುಚಿಕರ.

ಅರಿಶಿನ ಎಲೆ ಸಿಹಿ ಕಡುಬು
ಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ-1ಕಪ್‌,ತೆಂಗಿನಕಾಯಿ(ತುರಿದ)-2ಕಪ್‌,ಬೆಲ್ಲ(ತುರಿದ)-1ಕಪ್‌,ಅರಿಶಿನ ಎಲೆ-15,ಏಲಕ್ಕಿ ಪುಡಿ-ಅರ್ಧ ಚಮಚ,ಒಂದು ಚಿಟಿಕೆ ಉಪ್ಪು.

ತಯಾರಿಸುವ ವಿಧಾನ
ಅಕ್ಕಿಯನ್ನು ಒಂದು ಗಂಟೆಗಳ ಕಾಲ ನೆನೆಸಿಡಿ.ಇದರ ನೀರನ್ನೆಲ್ಲಾ ಬಸಿದು ರುಚಿಗೆ ತಕ್ಕಷ್ಟು ಉಪ್ಪು,ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ ಇದನ್ನು ಒಂದು ಪಾತ್ರೆಗೆ ಹಾಕಿಯಿರಿ.ತದನಂತರ ತೆಂಗಿನ ತುರಿ ಮತ್ತು ಬೆಲ್ಲದ ತುರಿಯನ್ನು ಏಲಕ್ಕಿ ಪುಡಿಯೊಂದಿಗೆ ಮಿಶ್ರಣ ಮಾಡಿಟ್ಟುಕೊಳ್ಳಿ.ಈಗ ಅರಿಶಿನ ಎಲೆಗಳನ್ನು ನೀರಿನಲ್ಲಿ ತೊಳೆದು ಸರಿಯಾಗಿ ಸ್ವತ್ಛ ಮಾಡಿ ಆಮೇಲೆ ಅಕ್ಕಿ ಹಿಟ್ಟನ್ನು ಸವರಿ ಅದರ ಮಧ್ಯೆ ಬೆಲ್ಲ-ತೆಂಗಿನ ತುರಿಯ ಮಿಶ್ರಣವನ್ನಿಟ್ಟು ಎಲೆಯನ್ನು ಸರಿಯಾಗಿ ಮಡಚಿಕೊಳ್ಳಿ.ಹೀಗೆ ಮಡಚಿದ ಎಲೆಗಳನ್ನು ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಸುಮಾರು 15 ರಿಂದ 20 ನಿಮಿಷಗಳ ಕಾಲ ಬೇಯಿಸಿರಿ.ತಣ್ಣಗಾದ ಮೇಲೆ ತುಪ್ಪದೊಂದಿಗೆ ಸವಿಯಿರಿ.

ಅಕ್ಕಿ ಮಣ್ಣಿ/ಅಕ್ಕಿ ಹಾಲುಬಾಯಿ
ಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ -1ಕಪ್‌,ತೆಂಗಿನ ಹಾಲು-1ಕಪ್‌,ಏಲಕ್ಕಿ -ಅರ್ಧ ಚಮಚ,ಬೆಲ್ಲ-1ಕಪ್‌,ತುಪ್ಪ-4 ಚಮಚ,ರುಚಿಗೆ ತಕ್ಕಷ್ಟು ಉಪ್ಪು.

Advertisement

ತಯಾರಿಸುವ ವಿಧಾನ
ಅಕ್ಕಿಯನ್ನು ಸುಮಾರು ಒಂದು ಗಂಟೆಗಳ ಕಾಲ ನೆನೆಯಲು ಬಿಡಿ.ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ,ಅದಕ್ಕೆ ಉಪ್ಪು ಮತ್ತು ತೆಂಗಿನ ಹಾಲನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.ತದನಂತರ ಒಂದು ಬಾಣಲೆಗೆ ತುಪ್ಪ ಹಾಕಿ ಅದನ್ನು ಒಲೆಯ ಮೇಲಿಟ್ಟು ಅದಕ್ಕೆ ರುಬ್ಬಿಟ್ಟ ಹಿಟ್ಟನ್ನು ಹಾಕಿಕೊಳ್ಳಿ.ಆ ಮೇಲೆ ಇದಕ್ಕೆ ಬೆಲ್ಲ,ಏಲಕ್ಕಿ ಪುಡಿ ಮತ್ತು ತೆಂಗಿನ ಹಾಲನ್ನು ಸೇರಿಸಿ ಸಣ್ಣ ಉರಿಯಲ್ಲಿಟ್ಟು ಕೈ ಬಿಡದೆ ಮಿಕ್ಸ್‌ ಮಾಡುತ್ತಿರಬೇಕು ಯಾಕೆಂದರೆ ಹಿಟ್ಟು ಗಂಟು ಗಂಟಾಗುತ್ತದೆ.ಸುಮಾರು ಅರ್ಧ ಗಂಟೆಕ್ಕಿಂತ ಹೆಚ್ಚು ಹೊತ್ತು ಸಣ್ಣ ಉರಿಯಲ್ಲಿ ಮಿಕ್ಸ್‌ ಮಾಡುತ್ತಿರಬೇಕು.ಹೀಗೆ ಹಿಟ್ಟು ದಪ್ಪಗುತ್ತಾ ಹೋಗುತ್ತದೆ. ಸ್ವಲ್ಪ ಹೊತ್ತಿನ ನಂತರ ತುಪ್ಪ ಹಾಕಿ ಬಳಿಕ ಚೆನ್ನಾಗಿ ಪುನಃ ಮಿಶ್ರಣ ಮಾಡಿಕೊಳ್ಳಿ.ಹಿಟ್ಟು ಗಟ್ಟಿಯಾದ ನಂತರ ಒಂದು ದೊಡ್ಡದಾದ ಪ್ಲೇಟಿಗೆ ಬಾಳೆ ಎಲೆ ಹಾಕಿ ಅದನ್ನು ಹರಡಿಕೊಳ್ಳಿ.ತಣ್ಣಗಾದ ಮೇಲೆ ಅದನ್ನು ನಿಮಗೆ ಬೇಕಾಗುವ ರೀತಿಯಲ್ಲಿ ಕಟ್‌ ಮಾಡಿ ಚೌಕಾಕಾರ ಅಥವಾ ತ್ರಿಕೋನಾಕಾರದಲ್ಲಿ ಕಟ್‌ ಮಾಡಿಕೊಂಡರೆ ರುಚಿಕರವಾದ ಸ್ವಾಧಿಷ್ಟಕರವಾದ ಅಕ್ಕಿ ಹಾಲುಬಾಯಿ ಸವಿಯಲು ಸಿದ್ಧ.

Advertisement

Udayavani is now on Telegram. Click here to join our channel and stay updated with the latest news.

Next