Advertisement

ದೀಪಾವಳಿ ಹಬ್ಬದ ವಿಶೇಷ ಅಡುಗೆಗಳು

04:44 PM Oct 20, 2017 | |

ದೀಪಾವಳಿ ಹಬ್ಬ ಮತ್ತೆ ಬಂದಿದೆ. ಪಟಾಕಿ, ಸುಡುಮದ್ದು ಮುಂತಾದ ವಾತಾವರಣವನ್ನು ಮಲಿನಗೊಳಿಸುವ ವಸ್ತುಗಳನ್ನು ಉಪಯೋಗಿಸದೆ ದೀಪ ಬೆಳಗಿಸಿ ಸರಳವಾಗಿ ದೀಪಾವಳಿ ಆಚರಿಸೋಣ. ಹಬ್ಬದ ಸಂಭ್ರಮಕ್ಕಾಗಿ ಇಲ್ಲಿವೆ ಕೆಲವು ಆರೋಗ್ಯಕರ ಸಿಹಿ-ಖಾರ ತಿನಿಸುಗಳು.

Advertisement

ಸ್ಪೆಷಲ್‌ ನಿಪ್ಪಟ್ಟು
ಬೇಕಾಗುವ ಸಾಮಗ್ರಿ: 1 ಕಪ್‌ ಕಡಲೆಬೇಳೆ, 1 ಕಪ್‌ ಉದ್ದಿನಬೇಳೆ, 1/2 ಕಪ್‌ ಗಟ್ಟಿ ಅವಲಕ್ಕಿ, 1/2 ಕಪ್‌ ಅಕ್ಕಿಹಿಟ್ಟು , 2 ಚಮಚ ಕೊತ್ತಂಬರಿಸೊಪ್ಪು , 2 ಎಸಳು ಕರಿಬೇವಿನೆಲೆ, 2-3 ಹಸಿಮೆಣಸು, 1/2 ಚಮಚ ಕಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಬೇಕಾದಷ್ಟು ಎಣ್ಣೆ.
ತಯಾರಿಸುವ ವಿಧಾನ: ಕಡಲೆಬೇಳೆ, ಉದ್ದಿನಬೇಳೆ 3-4 ಗಂಟೆ ನೆನೆಸಿ. ನಂತರ ತೊಳೆದು ಮಿಕ್ಸಿಗೆ ಹಾಕಿ ರುಬ್ಬಿ. ಅವಲಕ್ಕಿ ಪುಡಿ ಮಾಡಿ ರುಬ್ಬಿದ ಮಿಶ್ರಣಕ್ಕೆ ಹಾಕಿ. ಅಕ್ಕಿಹಿಟ್ಟು , ಕೊತ್ತಂಬರಿಸೊಪ್ಪು, ಕರಿಬೇವಿನೆಲೆ ಚೂರು, ಹಸಿಮೆಣಸು ಚೂರು, ಕಾರದ ಪುಡಿ, ಉಪ್ಪು ಹಾಕಿ ಗಟ್ಟಿಗೆ ಕಲಸಿ ಉಂಡೆ ಮಾಡಿ. ಎಣ್ಣೆ ಪಸೆ ಮಾಡಿದ ಬಾಳೆಲೆಯಲ್ಲಿ ತಟ್ಟಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ರುಚಿಯಾದ ಸ್ಪೆಷಲ್‌ ನಿಪ್ಪಟ್ಟು ಸವಿಯಲು ಸಿದ್ಧ.

ಕರಿಬೇವು ಚಕ್ಕುಲಿ
ಬೇಕಾಗುವ ಸಾ
ಮಗ್ರಿ: 1 ಕಪ್‌ ಹುರಿಗಡಲೆ ಹಿಟ್ಟು, 2 ಕಪ್‌ ಅಕ್ಕಿಹಿಟ್ಟು , 1/2 ಕಂತೆ ಕರಿಬೇವು, 1 ಚಮಚ ಜೀರಿಗೆ, 1/2 ಚಮಚ ಓಮ, 1-2 ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು , ಕರಿಯಲು ಬೇಕಾದಷ್ಟು ಎಣ್ಣೆ.
ತಯಾರಿಸುವ ವಿಧಾನ: ಸ್ವತ್ಛವಾಗಿ ತೊಳೆದ ಕರಿಬೇವಿನೆಲೆ, ಹಸಿಮೆಣಸು, ಉಪ್ಪು ಸೇರಿಸಿ ರುಬ್ಬಿ. ನೀರು ಹಾಕಬೇಡಿ. ನಂತರ ಅಕ್ಕಿಹಿಟ್ಟು, ಹುರಿಗಡಲೆ ಹಿಟ್ಟು, ಜೀರಿಗೆ, ಓಮ, 2 ಚಮಚ ಬಿಸಿ ಎಣ್ಣೆ, ಸ್ವಲ್ಪ ನೀರು ಹಾಕಿ ಗಟ್ಟಿಗೆ ಬೆರೆಸಿ. ಚಕ್ಕುಲಿ ಮುಟ್ಟಿಗೆ ಎಣ್ಣೆ ಸವರಿ ಚಕ್ಕುಲಿ ಬಿಲ್ಲೆ ಹಾಕಿ, ಹಿಟ್ಟು ಹಾಕಿ ಖಾಲಿ ಪೇಪರಿನ ಮೇಲೆ ಚಕ್ಕುಲಿ ಒತ್ತಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ಗರಿ ಗರಿ ಚಕ್ಕುಲಿ ತಿನ್ನಲು ಸಿದ್ಧ.

ಖರ್ಜೂರ ಒಬ್ಬಟ್ಟು 
ಬೇಕಾಗುವ ಸಾಮಗ್ರಿ:
2 ಕಪ್‌ ಖರ್ಜೂರ, 1 ಕಪ್‌ ಸಕ್ಕರೆ, 1 ಕಪ್‌ ಮೈದಾ, 1 ಕಪ್‌ ಚಿರೋಟಿ ರವೆ, 3 ಚಮಚ ತುಪ್ಪ , 1/4 ಕಪ್‌ ಗೋಧಿ ಪುಡಿ.
ತಯಾರಿಸುವ ವಿಧಾನ: ಬೀಜ ತೆಗೆದ ಖರ್ಜೂರವನ್ನು ತೊಳೆದು ಉಗಿಯಲ್ಲಿ ಬೇಯಿಸಿ. ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ನಂತರ ಬಾಣಲೆಗೆ ಹಾಕಿ. ಸಕ್ಕರೆ ಮತ್ತು 2 ಚಮಚ ತುಪ್ಪ ಹಾಕಿ ಮುದ್ದೆಯಾಗುವ ತನಕ ಕಾಯಿಸಿ. ಈಗ ಹೂರಣ ಸಿದ್ಧವಾಗಿದೆ. ಮೈದಾ, ಚಿರೋಟಿ ರವೆ, ತುಪ್ಪ ಮತ್ತು ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ನಿಂಬೆ ಗಾತ್ರದ ಉಂಡೆ ಮಾಡಿ. 1/2 ಗಂಟೆ ಹಿಟ್ಟು ಕಲಸಿ ಇಡಬೇಕು. ನಂತರ ಸಣ್ಣ ಪೂರಿಯಂತೆ ಮಾಡಿಕೊಂಡು ಹೂರಣದಿಂದ ನಿಂಬೆ ಗಾತ್ರದ ಉಂಡೆ ತೆಗೆದುಕೊಂಡು ಪೂರಿಯ ಮಧ್ಯೆ ಇರಿಸಿ ನಾಜೂಕಾಗಿ ಮುಚ್ಚಿ ಸ್ವಲ್ಪ ಚಪ್ಪಟೆ ಮಾಡಿ ಗೋಧಿ ಪುಡಿಯಲ್ಲಿ ಹೊರಳಿಸಿ ತೆಳ್ಳಗೆ ಚಪಾತಿಯಂತೆ ಲಟ್ಟಿಸಿ. ಹದವಾಗಿ ಕಾದ ತವಾದ ಮೇಲೆ ಹಾಕಿ ಎರಡೂ ಬದಿ ಕಂದು ಬಣ್ಣ ಬರುವಂತೆ ಬೇಯಿಸಿ. ತುಪ್ಪದ ಜೊತೆ ಯಾ ತೆಂಗಿನ ಹಾಲಿನ ಜೊತೆ ತಿನ್ನಲು ಭಾರಿ ರುಚಿಯಾಗಿರುತ್ತದೆ.

ಗೋಧಿ ನುಚ್ಚಿನ ಕೀರು
ಬೇಕಾಗುವ ಸಾಮಗ್ರಿ: 1 ಕಪ್‌ ಗೋಧಿ ನುಚ್ಚು , 2 ಕಪ್‌ ತೆಂಗಿನ ತುರಿ, ಒಂದೂವರೆ ಕಪ್‌ ಬೆಲ್ಲ, 1 ಚಮಚ ಬೆಳ್ತಿಗೆ ಅಕ್ಕಿ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷೆ ಮಿಶ್ರಣ 1 ಚಮಚ, 1/4 ಚಮಚ ಏಲಕ್ಕಿ ಪುಡಿ, 2-3 ಕಪ್‌ ನೀರು.
ತಯಾರಿಸುವ ವಿಧಾನ: ಗೋಧಿ ನುಚ್ಚು, ಸ್ವಲ್ಪ ನೀರು ಸೇರಿಸಿ ಒಲೆಯ ಮೇಲಿಟ್ಟು ಮೃದುವಾಗಿ ಬೇಯಿಸಿ. ನುಚ್ಚು ಬೆಂದ ಮೇಲೆ ಬೆಲ್ಲ ಹಾಕಿ ತಳ ಹಿಡಿಯದಂತೆ ತೊಳಸಿ. ತೆಂಗಿನತುರಿ ರುಬ್ಬಿ ಹಾಲು ತೆಗೆದಿಡಿ. ಅಕ್ಕಿ ನೆನೆಸಿ ನುಣ್ಣಗೆ ರುಬ್ಬಿ ಬೇಯುತ್ತಿರುವ ಪಾಯಸಕ್ಕೆ ಸೇರಿಸಿ. ಪಾಯಸ ಕುದಿಯಲು ಆರಂಭವಾದ ಮೇಲೆ ತೆಂಗಿನ ಹಾಲು ಸೇರಿಸಿ ಒಂದು ಕುದಿ ಕುದಿಸಿ. ಒಲೆಯಿಂದ ಕೆಳಗಿಳಿಸುವಾಗ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷೆ ಸೇರಿಸಿ ಚೆನ್ನಾಗಿ ಬೆರೆಸಿ. ಈಗ ಪೌಷ್ಟಿಕ ಗೋಧಿ ನುಚ್ಚಿನ ಕೀರು ಸವಿಯಲು ಬಲು ರುಚಿ. 

Advertisement

– ಸರಸ್ವತಿ ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next