ಬೆಳ್ತಂಗಡಿ: ಹಿಂದಿನ ಆಚರಣೆಗಳು ಪದ್ಧತಿ ಸಂಪ್ರದಾಯ ಈಗಿನ ಯುವ ಸಮೂಹಕ್ಕೆ ಸಿಕ್ಕಲು ಸಾಧ್ಯವಿಲ್ಲ. ಕೇವಲ ಪಟಾಕಿ ಸಿಡಿಸುವುದು ಮಾತ್ರ ದೀಪಾವಳಿ ಎಂದು ಕೊಂಡವರಿದ್ದಾರೆ. ನಾನು ತಂದೆಯ ಕಾಲದಲ್ಲಿ ಬಂಧುವರ್ಗದೊಂದಿಗೆ ಕೂಡುಕುಟುಂಬವಿದ್ದಾಗ ಆಚರಿಸುತ್ತಿದ್ದ ಹಬ್ಬದ ಸಂಭ್ರಮದಲ್ಲಿ ಬಾಂಧವ್ಯತೆ ಇತ್ತು.ದೀ
ಮಳೆಗಾಲದಲ್ಲಿ ಜಡ್ಡುಹಿಡಿದ ಜೀವನಕ್ಕೆ ಹೊಸ ಹುರುಪು ನೀಡುವುದೇ ದೀಪಾವಳಿ ಹಬ್ಬದ ವಿಶೇಷತೆ. ತ್ರಯೋದಶಿಯಂದು ಸಂಜೆ ಗಂಗಾಸ್ನಾನದ ಪ್ರಯುಕ್ತ ಮನೆಯಲ್ಲಿ ಬಾವಿಗಳಿಗೆ ತಾಂಬೂಲ, ಪುಷ್ಪ ಅಕ್ಷತೆಯನ್ನು ದೇವಿಗೆ (ಬಾವಿಗೆ) ಅರ್ಪಣೆ ಮಾಡುತ್ತಿದ್ದೆವು. ಧೂಪ-ದೀಪ ಜತೆಯಾಗಿ ಆರತಿ ಬೆಳಗಿ ಗಂಗೆಯನ್ನು ಬಿಂದಿಗೆಯಲ್ಲಿ ಗೊಂಡೆ ಹೂವಿಂದ ಅಲಂಕರಿಸಿದ ಸ್ನಾನದ ಹಂಡೆಗೆ ತುಂಬುವ ಮೂಲಕ ಬಿಸಿನೀರು ಕಾಯಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡುತ್ತಿದ್ದೆವು.
ಮಾರನೇದಿನ 12ವರ್ಷದ ಒಳಗಿನ ಮಕ್ಕಳಿಗೆ ಶಿಖದಿಂದ ನಖದ ವರೆಗೆ ತೈಲ ಅಭ್ಯಂಜನ ಮಾಡುವುದೆಂದರೆ ನಮಗದು ಖುಷಿಕೊಡುತ್ತಿದ್ದ ದಿನ. ಆ ದಿನ ಮನೆಯಿಂದ ಕೊಟ್ಟವರು ಹಾಗೂ ಹೆಣ್ಣು ಮಕ್ಕಳು ಸೇರಿ ಆಚರಿಸುವ ಸಂತೋಷದ ದಿನವಾಗಿತ್ತು.
ನರಕ ಚತುರ್ದಶಿಯಂದು ಹಿರಿಯರಾದ ಮೇಲೆ ನಾವೆಲ್ಲ ಮುಂಜಾನೆ ಪ್ರಾತಃ ಕಾಲದಲ್ಲಿ ಎದ್ದು ತೈಲ ಅಭ್ಯಂಜನ ಮಾಡಿ ದೇವಸ್ಥಾನಕ್ಕೆ ತೆರಳಿ ಹಣ್ಣು ಕಾಯಿ ಹೊಡೆಯುವುದು ಸಂಪ್ರದಾಯ. ಬಳಿಕ ದೇವಸ್ಥಾನದಿಂದ ತಂದ ತೀರ್ಥ ಪ್ರಸಾಸ ಮನೆ ಸುತ್ತ ಪೋÅಕ್ಷಣೆ ಮಾಡಿ ಮನೆಯಲ್ಲಿ ಹೆಣ್ಣು ಮಕ್ಕಳು ದೋಸೆ, ಪುಂಡಿ ಖಾದ್ಯತಯಾರು ಮಾಡಿ ಉಣಬಡಿಸಿ ಎಲ್ಲರೂ ಜತೆ ಗೂಡಿ ಭೋಜನ ಸ್ವೀಕರಿಸುತ್ತಿದ್ದೆವು. ಆಗೆಲ್ಲ ಜಗಳಿ ಕಟ್ಟೆಯಲ್ಲಿ ಕುಳಿತು ಭೋಜನ ಸ್ವೀಕರಿಸಿದ ದಿನಗಳು ಮರೆಯಲಾಗದ ಕ್ಷಣವಾಗುತ್ತಿತ್ತು.
ಕೃಷಿಕರ ನಾಡಲ್ಲಿ ರಾತ್ರಿ ಪಟಾಕಿ ಸಿಡಿಸುವ ಸಂಭ್ರಮಕ್ಕೆ ವಿಷೇಶ ಅರ್ಥವಿತ್ತು. ಮಳೆಗಾಲದಲ್ಲಿ ವಿಷ ಜಂತುಗಳು ಭೂಮಿಯ ಒಳಗೆ ಸಂಚಯವಾಗಿರುತ್ತಿತ್ತು. ಹೊರಗಡೆ ಸುಡುಮದ್ದು ಶಬ್ಧಕ್ಕೆ ಅಲ್ಲೇ ವಿಷ ಉಗುಳಿ ಪ್ರಾಣಿ ಪಕ್ಷಿಗಳೆಲ್ಲ ಜಡತ್ವ ಬಿಟ್ಟು ನವಚೈತನ್ಯ ಸಂಚಾರಕ್ಕೆ ಹೊರಡಲು ಶಬ್ಧದ ಮೂಲಕ ಎಚ್ಚರಗೊಳಿಸಲು ಸುಡುಮದ್ಧು ಆಚರಣೆ ಹಿಂದಿನಿಂದ ಬಂದಿರುವುದು ಪ್ರತೀಕ. ಇದೊಂದು ಹೊಸ ಜೀವನ ಬೆಳಕಿನ ಹೊಸ ಹಬ್ಬಕ್ಕೆ ಚಾಲನೆಯಾಗಿತ್ತು.
ಬಲಿಪಾಡ್ಯ ದಿನ
ನಮ್ಮ ಮನೆಯಲ್ಲಿ ಅಮವಾಸ್ಯೆ ಆಚರಣೆಯಿಲ್ಲ. ಕಾರ್ತಿಕ ಮಾಸದ ಬಲಿಪಾಡ್ಯಮಿಯಂದು ಬೆಳಗ್ಗೆ ಹಟ್ಟಿಯಲ್ಲಿರುವ ದನಗಳಿಗೆ ಸ್ನಾನ ಮಾಡಿಸಿ, ಶೇಡಿ ಮಣ್ಣಿನಿಂದ ಮುದ್ರೆಗಳನ್ನು ಅಚ್ಚೊತ್ತುವ ಮೂಲಕ ನಾವೆಲ್ಲ ಹೊಸ ಬಟ್ಟೆ ಧರಿಸಿದಂತೆ ಅವುಗಳಿಗೆ ಅಲಂಕಾರ ಮಾಡಿ ಪೂಜೆ ಮಾಡುತ್ತಿದ್ದೆವು. ಬಳಿಕ ಬಾಳೆ ಎಲೆಯಲ್ಲಿ ಸಿಹಿ ಅವಲಕ್ಕಿ, ಬಾಳೆಹಣ್ಣು ತಿನ್ನಿಸುವ ಮೂಲಕ 150 ವರ್ಷದಿಂದ ಹಿರಿಯರಾದ ಅಜ್ಜ ಸ್ವಾತಂತ್ರ್ಯ ಹೋರಾಟಗಾರ ಉಪೇಂದ್ರ ಕಾಮತ್ ಅವರ ಕಾಲದಿಂದಲೂ ನಾವು ಆಚರಿಸುತ್ತಾ ಬರುತ್ತಿದ್ದ ಪದ್ಧತಿಯಾಗಿದೆ.
-ಅಶೋಕ್ ಕಾಮತ್, ಬೆಳ್ತಂಗಡಿ ಮೂರುಮಾರ್ಗ