ಗಜೇಂದ್ರಗಡ: ಪಟ್ಟಣದಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿತ್ತು. ನಾಗರಿಕರು ಮನೆ ಮುಂದೆ ತಳಿರು-ತೊರಣ, ಚಂಡು ಹೂಗಳಿಂದ ಅಲಂಕಾರ ಮಾಡಿ, ಆಕಾಶ ಬುಟ್ಟಿಗಳನ್ನು ಕಟ್ಟಿ ಬೆಳಕಿನ ಹಬ್ಬ ಆಚರಿಸಿದರು.
ದೀಪಾವಳಿ ಹಬ್ಬದ ಪ್ರಯುಕ್ತ ಗುರುವಾರ ಮಾರುಕಟ್ಟೆ ಜನರಿಂದ ಗಿಜಿಗುಡುತ್ತಿತ್ತು. ಎಲ್ಲೆಲ್ಲೂ ದೀಪಗಳು ಕಂಗೊಳಿಸುತ್ತಿದ್ದವು. ಹಬ್ಬದ ಸಡಗರ ಮುಗಿಲು ಮುಟ್ಟಿತ್ತು. ಈ ಬಾರಿಯ ದೀಪಾವಳಿ ಕಳೆದ ವರ್ಷಕ್ಕಿಂತ ಕೊಂಚ ವಿಭಿನ್ನವಾಗಿದೆ ಮನಸ್ಸಿನ ಕತ್ತಲೆ ಕಳೆದು ಪ್ರಜ್ವಲಿಸಿದೆ. ಎಲ್ಲರ ಬಾಳಲ್ಲಿ ವೈಶಿಷ್ಟತೆಯ ಬೆಳಕು ಮೂಡಿಸಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾದರೂ ದೀಪಾವಳಿ ಆಚರಣೆಯ ಸಂಭ್ರಮ ಮಾತ್ರ ಕಳೆಗುಂದಿಲ್ಲ.
ಪಟ್ಟಣದ ಜನನಿಬಿಡ ಪ್ರದೇಶವಾದ ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಜೋಡು ರಸ್ತೆ, ಶ್ರೀ ಕಾಲಕಾಲೇಶ್ವರ ವೃತ್ತಗಳಲ್ಲಿ ಹಬ್ಬದ ವ್ಯಾಪಾರ ಜೋರಾಗಿ ನಡೆಯಿತು. ಮಹಾಲಕ್ಷ್ಮೀ ಹಾಗೂ ಮಹಾ ಸರಸ್ವತಿ ಪೂಜೆಗೆ ಬೇಕಾದ ಬಾಳಿ ದಿಂಡು, ಕಬ್ಬು, ಚಂಡು ಹೂ, ವಿವಿಧ ಹಣ್ಣುಗಳನ್ನು ಗ್ರಾಹಕರು ಖರೀದಿಸಿದರು. ಮಾರುಕಟ್ಟೆಯಲ್ಲಿ ಬಾಳೆಹಣ್ಣು, ಸೀತಾಫಲ, ಸೇಬು, ಮೋಸಂಬಿ, ಚಿಕ್ಕು, ಕಿತ್ತಳೆ, ಕುಂಬಳಕಾಯಿ ಸೇರಿ ಹಣ್ಣುಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು.
ಪಟ್ಟಣದ ಜೋಡು ರಸ್ತೆ ಮತ್ತು ಕಾಲಕಾಲೇಶ್ವರ ವೃತ್ತಗಳ ಬಳಿ ಚೆಂಡು ಹೂ, ಸೇವಂತಿ, ಸುಗಂ , ಮಲ್ಲಿಗೆ ಸೇರಿದಂತೆ ವಿವಿಧ ಹೂಗಳ ಮಾರಾಟವೂ ಭರ್ಜರಿಯಾಗಿ ನಡೆಯಿತು.
ಸುಗಮ ಸಂಚಾರಕ್ಕೆ ಮುಕ್ತಿ: ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಜೋಡು ರಸ್ತೆ ಸಂಪೂರ್ಣ ಮಾರುಕಟ್ಟೆಯಾಗಿ ಪರಿವರ್ತನೆಯಾಗುತ್ತಿತ್ತು. ಇದರಿಂದ ವಾಹನ ಸವಾರರು ರಸ್ತೆ ದಾಟಲು ಹರಸಾಹಸ ಪಡಬೇಕಾಗಿತ್ತು. ಆದರೆ, ಈ ವರ್ಷ ಪಿಎಸ್‌ಐ ಶರಣಬಸಪ್ಪ ಸಂಗಳದ ಸುಗಮ ಸಂಚಾರಕ್ಕೆ ಯಾವುದೇ ಅಡಚಣೆಯಾಗದ ರೀತಿಯಲ್ಲಿ ಜೋಡು ರಸ್ತೆಯ ಒಂದು ಬದಿಯಲ್ಲಿ ವ್ಯಾಪಾರಕ್ಕೆ ಮೀಸಲಿರಿಸಿ, ಇನ್ನೊಂದು ಬದಿಯಲ್ಲಿ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸುವ ಮೂಲಕ ವಾಹನ ಸವಾರರು ನಿಟ್ಟುಸಿರು ಬಿಡುವಂತೆ ಮಾಡಿದರು.