Advertisement

ಅಮೆರಿಕದಲ್ಲಿ ದೀಪಾವಳಿ ಸಂಭ್ರಮ

08:30 AM Nov 14, 2020 | mahesh |

ದೀಪಾವಳಿಯೊಂದೇ ಅಲ್ಲ ; ಈ ಹಬ್ಬಗಳು ನಮ್ಮ ಭಾರತೀಯ ಪರಂಪರೆ-ಸಂಪ್ರದಾಯವನ್ನು ಮುಂದಿನ ತಲೆಮಾರಿಗೆ ಪರಿಚಯಿಸಲು ಒಂದು ಅವಕಾಶ. ಅದೇ ಕಾರಣಕ್ಕೆ ತಾಯ್ನೆಲದಿಂದ ದೂರವಿರುವ ನಮ್ಮ ಅನಿವಾಸಿ ಭಾರತೀಯರು ಹೆಚ್ಚು ಸಂಭ್ರಮದಿಂದ ಆಚರಿಸುತ್ತಾರೆ. ಒಂದು ತೂಕ ಭಾರತೀಯರಿಗಿಂತ ಹೆಚ್ಚು ಎಂದರೂ ಅತಿಶಯೋಕ್ತಿಯೇನಿಲ್ಲ.

Advertisement

ವಿಶ್ವವ್ಯಾಪಿಯಾಗಿ ಆಚರಿಸಲ್ಪಡುವ ದೀಪಾವಳಿ ಹಬ್ಬದ ಬಗ್ಗೆ ಇಲ್ಲಿನ ಶಾಲೆಗಳಲ್ಲಿ ಮಕ್ಕಳಿಗೆ ಮಾಹಿತಿ ನೀಡುವುದು, ಖಾಸಗಿ ಕಂಪೆನಿಗಳಲ್ಲಿ ದೀಪಾವಳಿಯ ಆಚರಣೆ, ಶ್ವೇತಭವನದಲ್ಲಿ ದೀಪ ಬೆಳಗಿಸಿ, ವೇದಮಂತ್ರವನ್ನು ಪಠಿಸುವುದು, ಅಮೆರಿಕದ ಬಟ್ಟೆ ಅಂಗಡಿಗಳಲ್ಲಿ ಕಾಣಸಿಗುವ “ದೀಪಾವಳಿ ಸೇಲ…’ ದೀಪಾವಳಿಯ ವಿಶೇಷತೆಯನ್ನು ಎಲ್ಲರಿಗೂ ತಿಳಿಯಪಡಿಸುತ್ತವೆ.  ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಮನೆಗಳಲ್ಲಿ ತಾಯ್ನಾಡಿನ ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿಯೇ ಹಬ್ಬ ಆಚರಿಸಲ್ಪಡುತ್ತದೆ. ನಮ್ಮ ಮನೆಯ ಪುಟ್ಟ-ಪುಟ್ಟಿಯರು ಮನೆಯಲ್ಲಿಯೇ ಆಕಾಶಬುಟ್ಟಿಗಳನ್ನು ತಯಾರಿಸುವಲ್ಲಿ ತೊಡಗಿಕೊಳ್ಳುತ್ತಾರೆ.

ನೀರುತುಂಬುವ ಹಬ್ಬದಂದು ನಮ್ಮ ಬಾಲ್ಯದಲ್ಲಿ ಸುಣ್ಣ- ಜಾಜಿನಿಂದ ಅಲಂಕೃತಗೊಂಡ ಹಂಡೆಯಲ್ಲಿನ ನೀರು ಪೂಜೆಗೊಳ್ಳುತ್ತಿದ್ದಂತೆ, ಸುಣ್ಣ-ಜಾಜಿನಿಂದ ಅಲಂಕಾರಗೊಂಡ ಪುಟ್ಟ ಬಿಂದಿಗೆಯಲ್ಲಿ ನೀರು ತುಂಬಿಸಿ, ಗಂಗಾಪೂಜೆಯನ್ನು ಮಾಡಲಾಗುತ್ತದೆ. ಮಕ್ಕಳಿಗೆ ಸಾಂಪ್ರದಾಯಿಕ ತಿಂಡಿತಿನಿಸುಗಳ ಪರಿಚಯವೂ ಇಂಥ ಹಬ್ಬಗಳಿಂದಲೇ ಆಗುತ್ತದೆ.

ಬಣ್ಣ-ಬಣ್ಣದ ರಂಗೋಲಿಯ ಚಿತ್ತಾರ, ಹಬ್ಬದ ವಿಶೇಷ ಅಡುಗೆ, ನರಕ ಚತುರ್ದಶಿಯ ಅಭ್ಯಂಜನ, ಅಮಾವಾಸ್ಯೆಯ ಲಕ್ಷ್ಮೀಪೂಜೆ, ಬಲಿಪಾಡ್ಯಮಿಯ ಪೂಜೆಯೊಂದಿಗೆ ಹಬ್ಬ ಆಚರಿಸಲ್ಪಡುತ್ತದೆ.

ಹಬ್ಬದ ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹಿತರು ಒಂದೆಡೆ ಸೇರಿ ಸಂಭ್ರಮಿಸುವುದಿದೆ. ಸಾಮುದಾಯಿಕ ಬೆರೆಯುವಿಕೆಗೂ ಇದೊಂದು ಅವಕಾಶ. ಇಲ್ಲಿನ ದೇವಸ್ಥಾನಗಳಲ್ಲಿ ನಡೆಸಲಾಗುವ ವಿಶೇಷ ಪೂಜೆಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ.

Advertisement

ಇತ್ತೀಚಿನ ವರ್ಷಗಳಲ್ಲಿ ಇಲ್ಲಿನ ಕೆಲವು ರಾಜ್ಯಗಳಲ್ಲಿ ಪಟಾಕಿ ಸಿಡಿಸುವ ಅನುಮತಿಯೂ ದೊರೆತಿದ್ದು, ಅಂಗಡಿಗಳಲ್ಲಿ ಪಟಾಕಿ ಮಾರಾಟವೂ ಜೋರಾಗಿ ನಡೆಯುತ್ತದೆ.

ಚಟಪಟ, ಚಟಪಟ…ಪಟಾಕಿ ಹಚ್ಚೋಣ, ಸುರುಸುರು, ಸುರುಸುರು… ಸುರುಬತ್ತಿ ಉರಿಸೋಣ, ಹಚ್ಚೋಣ…ದೀಪ ಹಚ್ಚೋಣ ಎಂದು ಹಾಡಿಕೊಂಡು ಹಬ್ಬವನ್ನು ಸಂಭ್ರಮಿಸಿದ ಬಾಲ್ಯದ ದಿನಗಳಂತೆ, ನಮ್ಮ ಮಕ್ಕಳೊಂದಿಗೆ ಇಲ್ಲಿ ಹುಟ್ಟಿ ಬೆಳೆದ ಮಕ್ಕಳೂ ದೀಪಗಳ ಹಬ್ಬವನ್ನು ಆಚರಿಸುವಲ್ಲಿ ಜತೆಯಾಗುತ್ತಾರೆ. ದೀಪಾವಳಿ ನಮ್ಮೆಲ್ಲರ ಬದುಕಿನ ಸುಂದರ ನೆನಪುಗಳಲ್ಲಿ ಪ್ರಕಾಶಿಸು
ವಂತಾಗಿದೆ.

ಸರಿತಾ ನವಲಿ, ನ್ಯೂ ಜೆರ್ಸಿ

Advertisement

Udayavani is now on Telegram. Click here to join our channel and stay updated with the latest news.

Next