Advertisement
ಹಬ್ಬದ ಸಡಗರಇಂದಿನ ಆಧುನಿಕ ಯುಗದ ಭರಾಟೆಯಲ್ಲಿ ದೀಪಾವಳಿ ಹಿಂದಿನ ಸಂಭ್ರಮ ಕಳೆದುಕೊಂಡಿರುವುದೇನೋ ನಿಜ. ಆದರೂ ಕೃಷಿ ಕುಟುಂಬ ಸಾಂಪ್ರದಾಯವೆಂಬಂತೆ ಬಲೀಂದ್ರ ಪೂಜೆ, ಧನಲಕ್ಷ್ಮಿ ಪೂಜೆ, ಗೋ ಪೂಜೆ ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ. ಮನೆ ಮನೆಗಳಲ್ಲಿ ದೀಪಾಲಂಕಾರ, ಸಿಹಿತಿಂಡಿ ತಯಾರಿ, ವಿಶೇಷ ಪೂಜೆ, ಹೊಸ ಬಟ್ಟೆ ಧರಿಸಿ ಸಂಭ್ರಮಿಸುವುದು ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಆಚರಿಸಿಕೊಂಡು ಬಂದಿರುವ ಪದ್ಧತಿ ರೂಡಿಯಲ್ಲಿದೆ. ದೂರ ದೂರದ ಪ್ರದೇಶಗಳಲ್ಲಿ ಹಂಚಿ ಹೋಗಿರುವ ಕೃಷಿ ಕುಟುಂಬ ಸದಸ್ಯರು ದೀಪಾವಳಿಯಂದು ಊರಿಗೆ ಬಂದು ಹಬ್ಬ ಆಚರಿಸಿ, ಸಂಭ್ರಮಿಸುತ್ತಾರೆ.
ಮೂಲ ಸಂಸ್ಕೃತಿಯಿಂದ ಆಚರಣೆ ಮಾಡಿಕೊಂಡು ಬಂದಿರುವ ಕೃಷಿಕರು ರಾತ್ರಿ ಸಮಯದಲ್ಲಿ ಭತ್ತದ ಗದ್ದೆಯಲ್ಲಿ ನಾರು ಕೋಲಿಗೆ ಬಟ್ಟೆ ಸುತ್ತಿ ನೆಣೆಕೋಲು ಮಾಡಿಕೊಂಡು ದೀಪ ಹಚ್ಚುತ್ತಾರೆ. ಜತೆಯಲ್ಲಿ ವಿವಿಧ ಜಾತಿಯ ಹೂ ಹಾಗೂ (ಹೊಸ ಚಿಗುರು) ಎಳೆಯ ಎಲೆಗಳನ್ನು ಸಂಗ್ರಹಿಸಿ ಅದನ್ನು ಕೊಚ್ಚಿ, ಪೂಜೆಗೆ ಸಿದ್ಧಪಡಿಸಿಕೊಳ್ಳುತ್ತಾರೆ. ಪ್ರತಿ ನೆಣೆಕೋಲು ಮುಂದೆ ಬಾಳೆ ಎಲೆ ಇಟ್ಟು, ತಾವು ತಯಾರಿಸಿದ ವಿವಿಧ ಬಗ್ಗೆಗಳ ತಿಂಡಿ(ಹಿಟ್ಟು) ಬಡಿಸಿ ಸಂಗ್ರಹಿಸಿದ ಹೂ ಹಾಗೂ ಎಲೆಗಳನ್ನು ಹಾಕಿ ಬಲೀಂದ್ರ ದೇವರನ್ನು ಹೊಗಳಿ ಕರೆಯುತ್ತಾರೆ. ಪೂಜೆಗಾಗಿ ತೆಂಗಿನ ಮರದ ಗರಿಗಳಿಂದ ಸೂಡಿ ಮಾಡಿಕೊಂಡು (ದಾರಿ ದೀಪಕ್ಕಾಗಿ), ಆ ಬೆಂಕಿಯಿಂದ ಪ್ರತಿ ನೆಣೆ ಕೋಲಿಗೆ ದೀಪ ಹಚ್ಚುತ್ತಾರೆ. ಹೊಸ ಬೆಳೆಯಲ್ಲಿ ತಯಾರಿಸಿದ ವಿವಿಧ ಖಾದ್ಯದ ಹಿಟ್ಟನ್ನು ಗದ್ದೆಗೆ ಬಡಿಸಿ ಗ್ರಾಮ್ಯ ಭಾಷೆಯಲ್ಲಿ ಹೊಗಳಿಕೆಯಿಂದ ಬಲೀಂದ್ರ ದೇವರನ್ನು ಸ್ಮರಿಸಿ ಪ್ರಾರ್ಥಿಸುವ ದೀಪಾವಳಿ ಆಚರಣೆಯ ಅನಾದಿಕಾಲದಿಂದಲೂ ರೂಢಿಯಲ್ಲಿದೆ. ಇದು ರೈತಾಪಿ ವರ್ಗಗಳ ಬಲೀಂದ್ರ ಪೂಜೆಯೊಂದಿಗೆ ದೀಪಾವಳಿ ಹಬ್ಬದ ಸಂಭ್ರಮ. ತೈಲಾಂಭ್ಯಜನದೊಂದಿಗೆ ತಮ್ಮ ತನು ಮನಗಳು ಶುದ್ಧವಾಗಿ ರೈತರು ತಾವು ಬೆಳೆದ ಭತ್ತದ ರಾಶಿಗೆ ಹೂವನ್ನು ಹಾಕಿ ಪೂಜಿಸುವ ಮೂಲಕ ಕಾಯಕವೇ ಕೈಲಾಸವೆಂದು ಕೊಂಡು ದುಡಿಯುವ ರೈತ, ಹೊಲದಲ್ಲಿ ಬೆಳೆ ತುಂಬಲಿ ಎಂದು ಬಲೀಂದ್ರ ದೇವರ ಹೊಗಳಿಕೆಯಲ್ಲಿ ಪ್ರಾರ್ಥಿಸುತ್ತಾರೆ.
Related Articles
ಸಮಾಜವನ್ನು ಬಲಿಷ್ಠಗೊಳಿಸುವ ಸಾವಯವ ಗೊಬ್ಬರಗಳನ್ನು ಕೃಷಿಗಾಗಿ ನೀಡುವ ಗೋ ಮಾತೆಯನ್ನು ಕೃಷಿಕರು ದೀಪಾಳಿಯ ಮರುದಿನ ಗೋ ಪೂಜೆ ಮಾಡುತ್ತಾರೆ. ದೀಪಾವಳಿ ಸಂಭ್ರಮಕ್ಕೆ ತಯಾರಿಸಿದ ತಿಂಡಿ ತಿನಿಸುಗಳನ್ನು ತಾವು ಸೇವಿಸುವ ಮುನ್ನ ಪ್ರಥಮವಾಗಿ ಗೋವಿಗೆ ತಿನ್ನಿಸುವ ಮೂಲಕ ಮುಂದಿನ ವರ್ಷದ ಕೃಷಿ ಕಾಯಕಕ್ಕೆ ಕಾಲಿಡುತ್ತಾರೆ.
Advertisement
ಸತೀಶ ಆಚಾರ್ ಉಳ್ಳೂರು