Advertisement
ವಿದ್ಯಾಗಿರಿ ಸಮೀಪದ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆ ಸಭಾಂಗಣದಲ್ಲಿ ನಡೆದ ಆಳ್ವಾಸ್ ದೀಪಾವಳಿಗೆ ಆಗಮಿಸಿದ ಅತಿಥಿಗಳನ್ನು ಬೆಂಕಿ ಉಗುಳುವ ಪೂತನಿಯಾಗಿ ಕತ್ತು ಕೊಂಕಿಸುತ್ತ ಸಾಗಿದಂತೆಲ್ಲ ಸಿಂಗಾರಿ ಮೇಳದವರು, ಬೃಹತ್ ಚಿಂಪಾಂಜಿ, ಕೊರಗರ ಡೋಲು, ಬ್ರಾಸ್ ಬ್ಯಾಂಡ್, ಸಾಂಪ್ರದಾಯಿಕ ದಿರಿಸಿನ ಬಾಲಿಕೆಯರು, ಕಲಶ ಕನ್ನಿಕೆಯರೊಂದಿಗೆ ಗುರಿಕಾರ ಡಾ| ಎಂ. ಮೋಹನ ಆಳ್ವ, ಬತ್ತದ ತೆನೆಗಳ ರಾಶಿ ಹೊತ್ತ ಮಿಜಾರು ಸುಧಾಕರ ಪೂಂಜ ಸಹಿತ ಗಣ್ಯರು ವೇದಿಕೆಯತ್ತ ಬಂದರು.
ಧವಸ ಧಾನ್ಯ, ಸರಸ್ವತೀ ಪ್ರತೀಕವಾದ ಪುಸ್ತಕಗಳನ್ನು ಪೂಜಿಸಿದರು. ಗೋಪೂಜೆ, ಬಲೀಂದ್ರ ಪೂಜೆ ನೆರವೇರಿಸಿದರು. ಕದ್ರಿ ನವನೀತ ಶೆಟ್ಟಿ ಅವರು ಬಲೀಂದ್ರ ಪಾಡ್ದನವನ್ನು ಹಾಡಿದರು. ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ತುಳಸಿ ಪೂಜೆಯ ಮಹತ್ವ, ಬಲೀಂದ್ರನ ಕಥೆಯೊಂದಿಗೆ ದೀಪಾವಳಿಯ ವಿಶೇಷತೆಗಳನ್ನು ವಿವರಿಸಿ, ಆಶೀರ್ವಚನ ನೀಡಿದರು.
Related Articles
ಅವನಿರಾಜ್ ನಿರ್ದೇಶಿತ ಮೋಹಿನಿಯಾಟ್ಟಂನಲ್ಲಿದ್ದ 45 ಮಂದಿ ಇಡೀ ವೇದಿಕೆಯನ್ನು ತುಂಬಿ ಜನಮನ ರಂಜಿಸಿದರು. ಕೇರಳದ ಶೃಂಗಾರಿ ಮೇಳ, ನೂರು ಮಂದಿ ಪ್ರಸ್ತುತ ಪಡಿಸಿದ ಡೊಳ್ಳು ಇಡೀ ವಿವೇಕಾನಂದ ನಗರವನ್ನು ಬಡಿದೆಚ್ಚರಿಸುವಂತಿತ್ತು. ಮಂಟಪ ಪ್ರಭಾಕರ ಉಪಾಧ್ಯಾಯ ನಿರ್ದೇಶನದಲ್ಲಿ ಬಡಗುತಿಟ್ಟಿನ ಯಕ್ಷ ಪ್ರಯೋಗ – ಶ್ರೀರಾಮ ಪಟ್ಟಾಭಿಷೇಕದಲ್ಲಿ ಸಾಂಪ್ರದಾಯಿಕ, ದೊಡ್ಡ ಮುಂಡಾಸಿನ ಗುಹನ ಪಾತ್ರ ವಿಶೇಷ ಆಕರ್ಷಣೆಯಾಗಿತ್ತು. ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದವರು 20 ನಿಮಿಷಗಳ ಅವಧಿಯ ತೆಂಕುತಿಟ್ಟಿನ ಯಕ್ಷಗಾನ ‘ಅಗ್ರಪೂಜೆ’ ಪ್ರಸ್ತುತಪಡಿಸಿದರು.
Advertisement
ಆಂಧ್ರಪ್ರದೇಶದ ಸುರೇಶ ಅವರ ನಿರ್ದೇಶನದಲ್ಲಿ 60 ಮಂದಿ ಬಂಜಾರ ನೃತ್ಯ, ಚಿತ್ರಸೇನ ಸ್ವಾಯಿನ್ ನಿರ್ದೇಶನದಲ್ಲಿ ಯೋಗ ಗೋಟಿಪುವಾ ಒರಿಸ್ಸಾದ ಜನಪದ ನೃತ್ಯ ಪ್ರದರ್ಶಿಸಿದರು. ದೀಪಕ್ ಕುಮಾರ್ ಪುತ್ತೂರು ಅವರ ನಿರ್ದೇಶನದಲ್ಲಿ ಭೋ ಶಂಭೋ ಭರತನಾಟ್ಯ, 50 ಮಂದಿ ಪಾಲ್ಗೊಂಡ ಶ್ರೀಲಂಕಾದ ಕ್ಯಾಂಡಿಯನ್ ಸಮೂಹ ನೃತ್ಯ, ಆಶಿಂ ಬಂಧು ಭಟ್ಟಾಚಾರ್ಯಜೀ ಅವರ ರ್ದೇಶನದಲ್ಲಿ ಕಥಕ್ -ಪ್ರಹರ್, ಮಹಾರಾಷ್ಟ್ರದ ಲಾವಣಿ ನೃತ್ಯ, ಶ್ರೀಲಂಕಾದ 30 ಮಂದಿ ಪಾಲ್ಗೊಂಡ ಜನಪದ ನೃತ್ಯ, ಗುಜರಾತಿನ ನವರಾತ್ರಿಯನ್ನು ಕಂಡರಿಸಿದ ದಾಂಡಿಯಾ ಇವೆಲ್ಲ ವರ್ಣರಂಜಿತವಾಗಿ ಕಣ್ಮನ ಸೂರೆಗೊಂಡವು.
ಬಸವರಾಜ್ ಬಂಡೀವಾಡ ಮತ್ತು ಯೋಗೀಶ್ ಮಾಳವೀಯ ಉಜೈನಿ ಇವರ ನಿರ್ದೇಶನದಲ್ಲಿ ಆರು ಕಂಬಗಳ ಮಲ್ಲಕಂಬ ಮತ್ತು ರೋಪ್ ಮಲ್ಲ ಕಂಬ ಮೈ ನವಿರೇಳಿಸುವಂತಿತ್ತು.ವಿಶೇಷ ಆಕರ್ಷಣೆಯಾಗಿ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಖ್ಯಾತಿಯ ಉಡುಪಿ ಮೂಲದ ಪ್ರಹ್ಲಾದ ಆಚಾರ್ಯ ಬೆಂಗಳೂರು ಇವರು ಶ್ಯಾಡೋ ಪ್ಲೇ ಮೂಲಕ ಜನಮನ ರಂಜಿಸಿದರು.
ಅತಿ ವೇಗದ ಚಿತ್ರರಚನಾಕುಶಲಿ ಶಬರಿ ಗಾಣಿಗ ಮಂಗಳೂರು ಇವರು ಚಿತ್ರ ರಚಿಸಿ ಗಮನ ಸೆಳೆದರು. ಉದಯ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.
ಆಳ್ವಾಸ್ ಸಾಂಸ್ಕೃತಿಕ ವೈಭವವಿಶಾಲವಾದ ವೇದಿಕೆಯಲ್ಲಿ ಆಳ್ವಾಸ್‌ನ 650ಕ್ಕೂ ಅಧಿಕ ವಿದ್ಯಾರ್ಥಿಗಳು ಸುಮಾರು ಮೂರೂವರೆ ತಾಸುಗಳಕಾಲ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.