ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚುವರಿಯಾಗಿ ಸೃಷ್ಟಿಯಾಗಿರುವ ಸುಮಾರು 2000 ಟನ್ ಪಟಾಕಿ ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ಪರದಾಡುತ್ತಿದ್ದು, ಹಲವೆಡೆ ಕಸದ ರಾಶಿಯಿಂದ ಗಬ್ಬು ನಾರುವಂತಾಗಿದೆ.
ಸಾಮಾನ್ಯ ದಿನಗಳಿಗೆ ಹೋಲಿಸಿದರೆ ದೀಪಾವಳಿ ಸಂದರ್ಭದಲ್ಲಿ ಶೇ.30ರಿಂದ ಶೇ.40ರಷ್ಟು ಹೆಚ್ಚುವರಿ ತ್ಯಾಜ್ಯ ಸೃಷ್ಟಿಯಾಗುತ್ತದೆ. ಇನ್ನೊಂದೆಡೆ ಹಬ್ಬದ ದಿನ ಹಲವೆಡೆ ಪೌರಕಾರ್ಮಿಕರು ರಜೆ ಪಡೆದಿದ್ದರಿಂದ ಕಸ ವಿಲೇವಾರಿಯಲ್ಲಿ ವ್ಯತ್ಯಯವಾಗಿದೆ. ಹಲವೆಡೆ ಎರಡು- ಮೂರು ದಿನಗಳಿಂದ ವಿಲೇವಾರಿಯಾಗದೆ ಕಸದ ರಾಶಿ ನಿರ್ಮಾಣವಾಗಿದ್ದು, ಸ್ಥಳೀಯರು ತೀವ್ರ ಪರದಾಡುವಂತಾಗಿದೆ.
ಹಬ್ಬದ ಹಿನ್ನೆಲೆ ಹೆಚ್ಚುವರಿ ತ್ಯಾಜ್ಯದ ಸಮರ್ಪಕ ವಿಲೇವಾರಿಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವುದಾಗಿ ಪಾಲಿಕೆ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಭರವಸೆ ನೀಡಿದ್ದರೂ ಕಸ ವಿಲೇವಾರಿಯಲ್ಲಿ ಏರುಪೇರಾಗಿರುವುದರಿಂದ ಜನ ತೊಂದರೆ ಅನುಭವಿಸುವಂತಾಗಿದೆ.
ಹಬ್ಬದ ಪ್ರಯುಕ್ತ ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ, ಮಡಿವಾಳ, ಜಯನಗರ ಮಾರುಕಟ್ಟೆ ಸೇರಿದಂತೆ ಪ್ರಮುಖ ಮಾರುಕಟ್ಟೆ ಸ್ಥಳಗಳಲ್ಲಿ ತ್ಯಾಜ್ಯ ರಾಶಿಯಾಗಿ ಬಿದ್ದಿದೆ. ಹಸಿ ತ್ಯಾಜ್ಯದ ಜತೆಗೆ ಪಟಾಕಿ ಅವಶೇಷಗಳು, ಖಾಲಿ ಪೆಟ್ಟಿಗೆಗಳು ರಸ್ತೆ, ಪಾದಚಾರಿ ಮಾರ್ಗದ ಮೇಲೆ ಹರಡಿಕೊಂಡಿರುವ ದೃಶ್ಯ ಎಲ್ಲೆಡೆ ಕಂಡುಬಂತು.
ನಗರದಲ್ಲಿ ಉತ್ಪತ್ತಿಯಾಗಿರುವ ಹೆಚ್ಚುವರಿ ತ್ಯಾಜ್ಯ ವಿಲೇವಾರಿಗಾಗಿ ಮಾರುಕಟ್ಟೆಗಳಲ್ಲಿ ಹೆಚ್ಚುವರಿ ಟ್ರ್ಯಾಕ್ಟರ್‌ಗಳನ್ನು ಬಳಸಿ ಪೌರಕಾರ್ಮಿಕರ ನೆರವಿನೊಂದಿಗೆ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಬಿದ್ದರೆ ಇನ್ನಷ್ಟು ಸಿಬ್ಬಂದಿ, ವಾಹನ ಬಳಸಿಕೊಂಡು ಸ್ಥಳೀಯ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಇದರೊಂದಿಗೆ ಪಟಾಕಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸುವಂತೆಯೂ ಪೌರಕಾರ್ಮಿಕರಿಗೆ ತಿಳಿಸಲಾಗಿದೆ ಎಂದು ಪಾಲಿಕೆಯ ಘನತ್ಯಾಜ್ಯ ವಿಭಾಗದ ಅಧಿಕಾರಿ ಮಾಹಿತಿ ನೀಡಿದ್ದಾರೆ.