ಚಾಮರಾಜನಗರ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ದಿವ್ಯಾ ಸಾರಾ ಥಾಮಸ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ದಿವ್ಯಾ ಅವರು ಜಿಲ್ಲೆಯ ಮೊದಲ ಮಹಿಳಾ ಎಸ್ಪಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎಚ್.ಡಿ. ಆನಂದಕುಮಾರ್ ಅವರನ್ನು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಎಸ್‌ಪಿಯಾಗಿ ಜೂನ್ 26ರಂದು ವರ್ಗಾವಣೆ ಮಾಡಲಾಗಿತ್ತು. ಆದರೆ ಇದುವರೆಗೂ ಮೂವ್‌ಮೆಂಟ್ ಆರ್ಡರ್ ನೀಡಿರಲಿಲ್ಲ. ಪೊಲೀಸ್ ಮಹಾ ನಿರ್ದೇಶಕರು ಗುರುವಾರ ಹೊರಡಿಸಿರುವ ಆದೇಶದಲ್ಲಿ ದಿವ್ಯಾ ಸಾರಾ ಥಾಮಸ್ ಹಾಗೂ ಆನಂದ್‌ಕುಮಾರ್ ಅವರಿಗೆ ಸೂಚಿಸಿರುವ ಸ್ಥಳದಲ್ಲಿ ಅಧಿಕಾರ ವಹಿಸಿಕೊಳ್ಳುವಂತೆ ಮೂವ್‌ಮೆಂಟ್ ಆರ್ಡರ್ ಹೊರಡಿಸಿದ್ದರು.
ಹಾಗಾಗಿ ದಿವ್ಯಾ ಸಾರಾ ಥಾಮಸ್ ಅವರು ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಗೆ ಆಗಮಿಸಿ ಅಧಿಕಾರ ವಹಿಸಿಕೊಂಡರು. ದಿವ್ಯಾ ಅವರು ಇದುವರೆಗೆ ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ದಿವ್ಯಾ ಅವರು ಕೇರಳದ ತಿರುವನಂತಪುರ ಮೂಲದವರಾಗಿದ್ದು, 21 ತಿಂಗಳ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಪತಿ ನಿಶಾಂತ್ ಅವರು ಬೆಂಗಳೂರಿನಲ್ಲಿ ಆದಾಯ ತೆರಿಗೆ ಜಂಟಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದಿವ್ಯಾ, ಚಾಮರಾಜನಗರ ಜಿಲ್ಲೆ ಶಾಂತಿಯುತ ಪ್ರದೇಶ. ಇಲ್ಲಿ ಕೆಲಸ ಮಾಡಲು ಉತ್ತಮ ಅವಕಾಶ ದೊರೆತಿದೆ. ಜಿಲ್ಲೆಯ ಜನರ ಸಹಕಾರ ನನಗೆ ಅತ್ಯಗತ್ಯವಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗಮನ ಹರಿಸುತ್ತೇನೆ ಹಾಗೂ ಅಕ್ರಮ ಗಣಿಗಾರಿಕೆ ಕುರಿತು ನಿಗಾ ವಹಿಸಲಾಗುವುದು ಎಂದರು. 2016ರಲ್ಲಿ ನೆರೆ ಜಿಲ್ಲೆ ಮೈಸೂರಿನ ನಂಜನಗೂಡು ಉಪವಿಭಾಗದಲ್ಲಿ ಎಎಸ್‌ಪಿಯಾಗಿ ಕೆಲಸ ನಿರ್ವಹಿಸಿದ್ದು, ಈ ಪ್ರದೇಶ ನನಗೆ ಹೊಸದೇನಲ್ಲ ಎಂದು ಅವರು ತಿಳಿಸಿದರು.
ಇದುವರೆಗೆ ಜಿಲ್ಲಾ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆನಂದಕುಮಾರ್ ಅವರು ಜೂ. 26ರಂದು ವರ್ಗಾವಣೆಯಾಗಿದ್ದರು. ಜಿಲ್ಲೆಯ ಜನಪ್ರತಿನಿಧಿಯೊಬ್ಬರು ಅವರ ವರ್ಗಾವಣೆ ರದ್ದುಪಡಿಸುವಂತೆ ಸರ್ಕಾರಕ್ಕೆ ಒತ್ತಡ ತಂದಿದ್ದರು. ಹೀಗಾಗಿ ಆನಂದಕುಮಾರ್ ಅವರ ವರ್ಗಾವಣೆ ರದ್ದುಗೊಂಡಿದೆ ಎನ್ನಲಾಗಿತ್ತು. ಆದರೆ ಇಂದು ದಿವ್ಯಾ ಅವರು ಅಧಿಕಾರ ವಹಿಸಿಕೊಳ್ಳುವ ಮೂಲಕ ಊಹಾಪೋಹಗಳಿಗೆ ತೆರೆಬಿದ್ದಿದೆ