ಮುಂಬಯಿ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿಯಲ್ಲಿ ಬಹಿರಂಗ ಬಂಡಾಯ ಕಾಣಿಸಿಕೊಂಡಿದ್ದು, ಸಮಾಜವಾದಿ ಪಕ್ಷವು ಇತರ ಮೈತ್ರಿ ಪಾಲುದಾರರಿಗೆ ಬಹಿರಂಗ ಸವಾಲು ಹಾಕಿದೆ ಐದು ಸ್ಥಾನಗಳನ್ನು ನೀಡದಿದ್ದರೆ 25 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದೆ.
ಕಾಂಗ್ರೆಸ್ ಅನ್ನು ಗುರಿಯಾಗಿಟ್ಟುಕೊಂಡು ಮಾತನಾಡಿದ ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಕಾಂಗ್ರೆಸ್ ಇಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ನಾವು ಘೋಷಿಸಿರುವ 5 ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಮಹಾ ವಿಕಾಸ್ ಅಘಾಡಿ ಜನರು ಕಾಯುತ್ತಿರುವಷ್ಟು ನಾವು ಕಾಯಲು ಸಾಧ್ಯವಿಲ್ಲ” ಎಂದಿದ್ದಾರೆ.
ಮಹಾ ವಿಕಾಸ ಅಘಾಡಿ ಕಾರ್ಯಶೈಲಿಯನ್ನು ಪ್ರಶ್ನಿಸಿ ‘ಇನ್ನು ಕೇವಲ 2 ದಿನಗಳು ಮಾತ್ರ ಉಳಿದಿವೆ. ಸರಕಾರ ರಚನೆ ಬಗ್ಗೆ ಮಾತನಾಡುತ್ತಿರುವವರು ಟಿಕೆಟ್ ಹಂಚಿಕೆ ಮಾಡದಿರುವುದು ಬೇಸರ ತಂದಿದೆ. ಇಷ್ಟು ವಿಳಂಬ ಮಾಡಿದ್ದು ಮಹಾ ವಿಕಾಸ್ ಅಘಾಡಿಯವರ ದೊಡ್ಡ ತಪ್ಪು. ನಾನು ನನ್ನ ದುಃಖವನ್ನು ಶರದ್ ಪವಾರ್ ಅವರ ಬಳಿ ಹೇಳಿಕೊಂಡೆ. 5 ಅಭ್ಯರ್ಥಿಗಳನ್ನು ಘೋಷಿಸಿದ್ದೇವೆ ಎಂದು ಹೇಳಿದ್ದೇನೆ. ನನಗೆ ಉತ್ತರವನ್ನು ನೀಡಿದರೆ ಸರಿ, ಇಲ್ಲದಿದ್ದರೆ ನನ್ನ ಬಳಿ 25 ಅಭ್ಯರ್ಥಿಗಳು ಸಿದ್ಧರಿದ್ದಾರೆ. ಕಾಂಗ್ರೆಸ್ ಎರಡು ಬಾರಿ ದ್ರೋಹ ಬಗೆದಿದೆ’ ಎಂದು ಹೇಳಿರುವುದಾಗಿ ತಿಳಿಸಿ, ನಾಳೆಯವರೆಗೆ ಕಾಯುವಂತೆ ಪವಾರ್ ಅವರು ನನ್ನನ್ನು ಕೇಳಿದ್ದಾರೆ ಎಂದರು.
ಮಹಾವಿಕಾಸ್ ಅಘಾಡಿಯಲ್ಲಿ ಸೀಟು ಹಂಚಿಕೆ ಕುರಿತು ಹಗ್ಗ ಜಗ್ಗಾಟ ಇನ್ನೂ ಮುಂದುವರಿದಿದ್ದು ಮೂರು ಪ್ರಮುಖ ಪಕ್ಷಗಳಾದ ಶಿವಸೇನೆ (ಉದ್ಧವ್ ಠಾಕ್ರೆ), ಕಾಂಗ್ರೆಸ್ ಮತ್ತು ಎನ್ ಸಿಪಿ(ಶರದ್ ಪವಾರ್) ಬಣಕ್ಕೆ ತಲಾ 85 ಸೀಟುಗಳ ಸೂತ್ರ(255 ಸ್ಥಾನ) ನಿಗದಿಯಾಗಿದೆ. 288 ಸ್ಥಾನಗಳಲ್ಲಿ ಉಳಿದ ಸೀಟುಗಳಿಗೆ ಇಂಡಿಯಾ ಮೈತ್ರಿಕೂಟದ ಮಿತ್ರ ಪಕ್ಷಗಳಾದ ಸಮಾಜವಾದಿ ಪಕ್ಷ, PWP, CPM, CPI, ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ.