Advertisement

ದಕ್ಷ ಅಧಿಕಾರಿಗೆ “ದಿವ್ಯ’ಬೀಳ್ಕೊಡುಗೆ

11:26 PM Jun 15, 2019 | Lakshmi GovindaRaj |

ಬೆಳಗಾವಿ: ಅದೊಂದು ಅಪೂರ್ವ ಕ್ಷಣ. ನಗರದ ಜನಪ್ರಿಯ ಅಧಿಕಾರಿಯಾಗಿ ಈಗ ಪ್ರಧಾನಿ ಕಚೇರಿಗೆ ವರ್ಗವಾಗಿ ತೆರಳುತ್ತಿರುವ ಮಹಿಳಾ ಐಎಎಸ್‌ ಅಧಿಕಾರಿಯೊಬ್ಬರಿಗೆ ದೊರೆತ ಅಭೂತಪೂರ್ವ ಬೀಳ್ಕೊಡುಗೆಯ ಕಾರ್ಯಕ್ರಮವದು.

Advertisement

ದೆಹಲಿಯ ಪ್ರಧಾನಮಂತ್ರಿ ಕಚೇರಿಗೆ ವರ್ಗಾವಣೆಗೊಂಡು ತೆರಳುತ್ತಿರುವ ಅಧಿಕಾರಿ ದಿವ್ಯಾ ಶಿವರಾಮ ಅವರ ಅಭಿಮಾನಿಗಳು, ಸಾರ್ವಜನಿಕರು ಅವರನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿ, ಅಧಿಕಾರಿಯ ಮೇಲಿರುವ ಪ್ರೀತಿ ಹಾಗೂ ಅಭಿಮಾನ ಪ್ರದರ್ಶಿಸಿದರು.

ಒಬ್ಬ ಅಧಿಕಾರಿ ಸಾರ್ವಜನಿಕರ ಜತೆ ಪ್ರೀತಿಯಿಂದ ಇದ್ದರೆ, ಅವರ ಬೇಕು-ಬೇಡಿಕೆಗಳಿಗೆ ಸಕಾಲಕ್ಕೆ ಸ್ಪಂದಿಸಿ ಅಗತ್ಯ ಸಹಾಯ ಹಸ್ತ ಚಾಚಿದರೆ ಅವರಿಗೆ ಮರಳಿ ಅಂತಹುದೇ ಪ್ರೀತಿ, ಗೌರವ ಸಿಗುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ.

ಬೀಳ್ಕೊಡುಗೆ ಸಮಾರಂಭದ ಬಳಿಕ ದಂಡು ಮಂಡಳಿ ಪ್ರದೇಶದ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಸಿಇಒ ದಿವ್ಯಾ ಶಿವರಾಮ್‌ ಹೊಸೂರ ಅವರನ್ನು ಜೀಪ್‌ನಲ್ಲಿ ಮೆರವಣಿಗೆ ಮಾಡಿದರು. ಹೂಗಳಿಂದ ಅಲಂಕರಿಸಿದ್ದ ಜೀಪಿಗೆ ಹಗ್ಗ ಕಟ್ಟಿ ಕಚೇರಿಯಿಂದ ಎಳೆದುಕೊಂಡು ಸರ್ಕಾರಿ ನಿವಾಸದವರೆಗೆ ಕರೆ ತಂದು ಬೀಳ್ಕೊಟ್ಟರು.

ಈ ದೃಶ್ಯ ಕಂಡು ದಿವ್ಯಾ ಭಾವುಕರಾದರು. ಕಡಿಮೆ ಅವಧಿಯ ತಮ್ಮ ಸೇವೆಯಲ್ಲಿ ಎಲ್ಲರಿಗೂ ಆತ್ಮೀಯರಾಗಿದ್ದ ಈ ಅಧಿಕಾರಿ, ತಮ್ಮ ವರ್ಗಾವಣೆ ಸಂದರ್ಭದಲ್ಲಿ ಅದೇ ರೀತಿಯ ಅತ್ಮೀಯ ಬೀಳ್ಕೊಡುಗೆಯ ಗೌರವಕ್ಕೆ ಪಾತ್ರರಾಗಿದ್ದಾರೆ.

Advertisement

ಇದನ್ನೂ ಮುನ್ನ ನಡೆದ ಸಮಾರಂಭದಲ್ಲಿ ದಿವ್ಯಾ ಶಿವರಾಮ್‌ ಹೊಸೂರ ಹಾಗೂ ಪತಿ ಶ್ರೇಯಸ ಹೊಸೂರ ಅವರನ್ನು ಸತ್ಕರಿಸಲಾಯಿತು. ನಂತರ ಮಾತನಾಡಿದ ದಿವ್ಯಾ, “ಇಲ್ಲಿ ಕರ್ತವ್ಯ ನಿರ್ವಹಿಸಿದ್ದು ನನಗೆ ಹೆಮ್ಮೆ ಇದೆ.

ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕಂಟೋನ್ಮೆಂಟ್‌ ಪ್ರದೇಶದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಸದಸ್ಯರು ಹಾಗೂ ಸಿಬ್ಬಂದಿಯ ಸಂಪೂರ್ಣ ಸಹಕಾರದಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಯಿತು’ ಎಂದು ಹೇಳಿದರು.

ಸದಸ್ಯ ಸಾಜೀದ ಶೇಖ ಮಾತನಾಡಿ, ಇಂಥ ದಕ್ಷ ಅಧಿಕಾರಿಗಳಿಂದ ಕಂಟೋನ್ಮೆಂಟ್‌ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಇನ್ನು ಕೆಲ ವರ್ಷಗಳ ಕಾಲ ಇಲ್ಲಿಯೇ ಅಧಿಕಾರಿಯಾಗಿದ್ದರೆ ಹೆಚ್ಚಿನ ಅಭಿವೃದ್ಧಿ ಕಾಣಬಹುದಿತ್ತು ಎಂದು ಆಶಿಸಿದರು.

37 ವರ್ಷಗಳ ನಂತರ ನಡೆದ ಕಾರ್ಯಕ್ರಮ: 1982ರಲ್ಲಿ ಅಂದರೆ, ಸುಮಾರು 37 ವರ್ಷಗಳ ಹಿಂದೆಯೂ ಇದೇ ರೀತಿ ಆಗಿನ ಸಿಇಒ ಜೈನುದ್ದಿನ್‌ ಅವರನ್ನು ಬೀಳ್ಕೊಡಲಾಗಿತ್ತು. ಜೈನುದ್ದಿನ್‌ ಅವರ ವರ್ಗಾವಣೆಯಾದ ಬಳಿಕ ಜೀಪ್‌ನಲ್ಲಿ ಮೆರವಣಿಗೆ ಮಾಡಿ ಆತ್ಮೀಯವಾಗಿ ಬೀಳ್ಕೊಡಲಾಗಿತ್ತು. ಸದಸ್ಯ ಸಾಜೀದ ಶೇಖ ಅವರ ತಂದೆ ಆಗ ಸದಸ್ಯರಾಗಿದ್ದರು. ಆಗಿನ ಮೆರವಣಿಗೆಯ ಸವಿನೆನಪನ್ನು ಈಗ ಕ್ಯಾಂಪ್‌ ಪ್ರದೇಶದ ಜನ ಸ್ಮರಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next