Advertisement
ಸುಪ್ರೀಂ ಕೋರ್ಟ್ ಕುಟುಂಬ ವ್ಯವಸ್ಥೆಯಲ್ಲಿ ದೂರಗಾಮಿ ಪರಿಣಾಮ ಬೀರಬಲ್ಲ ತೀರ್ಪನ್ನು ಇತ್ತೀಚೆಗೆ ಪ್ರಕಟಿಸಿದೆ. 2001ರಲ್ಲಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ ತೀರ್ಪನ್ನು ಬದಿಗೆ ಸರಿಸಿ ಹಾಗೂ ಕರ್ನಾಟಕ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ವಿಚ್ಛೇದನ ಕಾನೂನಿನಲ್ಲಿ ಮಹತ್ವದ ತಿರುವು ನೀಡಿದೆ.
Related Articles
Advertisement
ವೃದ್ಧಾಪ್ಯದಲ್ಲಿರುವ ಅವರಿಗೆ ಆಸರೆಯೇ ಇಲ್ಲದಂತಾಗುತ್ತಿದ್ದು, ಅವರು ವೃದ್ಧಾಶ್ರಮ ಅವಲಂಬಿಸಬೇಕಾಗುತ್ತಿದೆ. ಹೀಗೆ ಅತಂತ್ರರಾಗುತ್ತಿರುವ ಹೆತ್ತವರಿಗೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ನ್ಯಾಯ ದೊರಕಿಸಿ ಕೊಡುತ್ತಿರುವುದು ಸಂತಸದ ವಿಚಾರ.
ಈ ತೀರ್ಪು ದೂರಗಾಮಿ ಪರಿಣಾಮ ಹೊಂದಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇದುವರೆಗೆ ಮಹಿಳೆಯರಿಗೆ “ಕೌಟುಂಬಿಕ ದೌರ್ಜನ್ಯ ಕಾಯ್ದೆ’ ಹಾಗೂ ಐಪಿಸಿಯ ಇತರ ಹಲವು ಕಾಲಂಗಳು ಸಂಪೂರ್ಣ ಬೆಂಬಲ ನೀಡಿದ್ದವು. ಬಹುತೇಕ ಉಚ್ಚ ನ್ಯಾಯಾಲಯದ ತೀರ್ಪು ಮಹಿಳೆಯ ಪರವಾಗಿ ಬಂದಿದ್ದವು. ಮಾತ್ರವಲ್ಲ ಈ ತೀರ್ಪುಗಳು ಮಹಿಳೆಗೆ ಸಂಪೂರ್ಣ ರಕ್ಷಣೆ ಒದಗಿಸಿದ್ದವು. ಆದರೆ ಇದರಿಂದ ಹಲವು ಸಂದರ್ಭ ಕಾನೂನು ದುರುಪಯೋಗವಾಗಿರುವುದು ಕೂಡ ಇದೆ.
ಸುಪ್ರೀಂ ಕೋರ್ಟ್ ಈ ತೀರ್ಪು ಗಂಡ ಹಾಗೂ ಆತನ ತಂದೆ- ತಾಯಿಗೆ ಸ್ವಲ್ಪಮಟ್ಟಿನ ನಿರಾಳತೆ ಒದಗಿಸಿದೆ. ಕಾನೂನು ದುರುಪಯೋಗಪಡಿಸುವ ಮಹಿಳೆಯರಿಗೆ ಇದು ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಬಹುದು. ಕಾನೂನಿನ ಅಸ್ತ್ರದ ಬೇಕಾಬಿಟ್ಟಿ ಉಪಯೋಗಕ್ಕೆ ತಡೆ ಒಡ್ಡಬಹುದು. ಆದರೆ ಇದು ಗಂಡನ ಮನೆಯಲ್ಲಿ ಮಹಿಳೆಯನ್ನು ಇನ್ನಷ್ಟು ಶೋಷಿಸುವುದಕ್ಕೂ ಅಸ್ತ್ರವಾಗಬಹುದೇ? ಎಂಬ ಸಣ್ಣ ಸಂಶಯ ಕೂಡ ಹುಟ್ಟಿಕೊಂಡಿದೆ. ಈ ತೀರ್ಪನ್ನು ಆಧಾರವಾಗಿಟ್ಟುಕೊಂಡು ಶತಮಾನಗಳಿಂದ ಹೆಣ್ಣಿನ ಬಾಯಿ ಮುಚ್ಚಿಸಿ ಶೋಷಿಸುತ್ತಾ ಬಂದ ಪರಂಪರೆಯನ್ನು ಮುಂದುವರೆಸಲು ಅವಕಾಶವಾಗುತ್ತದೆ ಎಂಬ ವಾದ ಹುಟ್ಟಿಕೊಂಡಿರುವುದು ಸಹಜವೇ ಆಗಿದೆ. ಅದನ್ನು ಕಾಲವೇ ನಿರ್ಣಯಿಸಬೇಕಷ್ಟೆ .
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆೆಯನ್ನು ಇಲ್ಲಿ ಸ್ವಲ್ಪ ಗಮನಿಸಬೇಕು. ಹಳಿ ತಪ್ಪುತ್ತಿರುವ ಕುಟುಂಬ ವ್ಯವಸ್ಥೆಯನ್ನು ಸರಿ ದಾರಿಗೆ ತರಲು ಹಾಗೂ ವೃದ್ಯಾಪದಲ್ಲಿ ತಂದೆ-ತಾಯಿಯನ್ನು ಅಮಾನವೀಯವಾಗಿ ಬೀದಿಗೆ ತಳ್ಳುವ ಪರಿಸ್ಥಿತಿಯಿಂದ ರಕ್ಷಿಸಲು ಸುಪ್ರೀಂ ಕೋರ್ಟ್ ಈ ಐತಿಹಾಸಿಕ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ಉದ್ದೇಶ ಒಳ್ಳೆಯದ್ದೇ ಆಗಿದೆ. ಸಣ್ಣ ಕಾರಣಗಳಿಗೆ ಛಿದ್ರವಾಗುತ್ತಿರುವ ಕುಟುಂಬವನ್ನು ಈ ಮೂಲಕವಾದರು ಒಂದುಗೂಡಿಸಬಹುದು ಎಂಬ ಆಶಯವನ್ನು ಈ ತೀರ್ಪು ಹೊಂದಿದೆ ಎಂದು ವ್ಯಾಖಾನಿಸಲಾಗುತ್ತಿದೆ.
ಆದರೆ ಪತಿ-ಪತ್ನಿಯ ನಡುವೆ ಜೀವನದ ಉದ್ದೇಶ ಹಾಗೂ ಒಟ್ಟಾಗಿ ನಡೆಯಬೇಕೆಂಬ ಒಲವು ಕಾಣೆಯಾದರೆ ಯಾವ ಕಾನೂನು, ತೀರ್ಪುಗಳಾದರು ಏನು ಮಾಡಿಯಾವು? ಮನುಷ್ಯ ಮನುಷ್ಯನನ್ನು ಪ್ರೀತಿಸುವ ಅಂಶ ಕಾಣೆಯಾಗಿ, ಎಲ್ಲವೂ “ಲೆಕ್ಕಚಾರ’ದ ಮೇಲೆ ತೀರ್ಮಾನವಾಗುವುದಾದರೆ ಇಲ್ಲಿ ಯಾವ ಕಾನೂನು, ತೀರ್ಪಿನ ಮೂಲ ಉದ್ದೇಶಗಳೂ ಗೆಲುವು ಸಾದಿಸಲಾರವು. ಈ ಕಾನೂನು, ತೀರ್ಪುಗಳನ್ನು ಹೆಚ್ಚಿನ ಸಂದರ್ಭ ತಮ್ಮ ಗುರಿ ಸಾಧನೆಗೆ ಉಪಯೋಗಿಸಬಹುದು. ತಮಗೆ ಅನುಕೂಲವಾಗುವ ರೀತಿಯಲ್ಲಿ ತೀರ್ಪನ್ನು ನೋಡಬಹುದು. ಕೊನೆಗೂ ಪ್ರತಿಯೊಬ್ಬರ ಆರೋಪ ನ್ಯಾಯಾಲಯದ ತೀರ್ಪಿನ ಮೇಲೆಯೇ. ತಮಗೆ ಅನನುಕೂಲವಾದಾಗ “ತೀರ್ಪು ಸರಿ ಇಲ್ಲ’ ಎಂದು ಹೇಳುತ್ತೇವೆ. ಆದರೆ ಕಾನೂನು ಅಥವಾ ತೀರ್ಪಿನ ಮೂಲ ಉದ್ದೇಶವನ್ನು ನಾವು ಮರೆತರೆ “ಕುಟುಂಬ’ ವ್ಯವಸ್ಥೆಯನ್ನು ಹಳಿಗೆ ತರುವ ಸುಪ್ರೀಂ ಕೋರ್ಟ್‌ನ ಉದ್ದೇಶ ಸಫಲವಾಗಬಹುದೇ? ಅಥವಾ ಅದು ಇನ್ನೊಂದು “ಮಹಿಳಾ ಶೋಷಣೆ’ಗೆ ಅಸ್ತ್ರವಾಗಬಹುದೆ? ಇದಕ್ಕೆ ಕಾಲವೇ ಉತ್ತರಿಸಬೇಕು.
ಸುಪ್ರೀಂ ಕೋರ್ಟ್ ತೀರ್ಪು ಇಡೀ ದೇಶಕ್ಕೆ ಅನ್ವಯ. ಆದರೆ ಭಾರತದ ಸಾಮಾಜಿಕ ವ್ಯವಸ್ಥೆ ಬೇರೆಯಾಗಿದೆ. ನಗರ, ಗ್ರಾಮೀಣ, ಅಕ್ಷರಸ್ಥ, ಅನಕ್ಷರಸ್ಥ, ಬಡವ, ಶ್ರೀಮಂತ, ಈ ರೀತಿ ಸಾಮಾಜಿಕ ಸ್ತರಗಳು ಇಲ್ಲಿವೆ. ಆದರೆ ತೀರ್ಪುಗಳ ಪರಿಣಾಮ ಒಂದೇ ರೀತಿಯಾಗಿರುತ್ತದೆ. ಈ ತೀರ್ಪು ಅನ್ವಯಿಸುವಾಗ ಬಹಳ ಜಾಗ್ರತೆ ವಹಿಸಬೇಕಾಗುತ್ತದೆ.
ಯಾಕೆಂದರೆ ನಗರದ ವಿದ್ಯಾವಂತರಿಗೂ ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೂ ವ್ಯತ್ಯಾಸ ಕಂಡು ಬರುತ್ತದೆ. ಜ್ಞಾನ, ಹಣದ ಬಲ ಪ್ರಭಾವ ಇನ್ನೊಬ್ಬರನ್ನು ಶೋಷಿಸಲು ಅವಕಾಶ ಮಾಡಿಕೊಡುತ್ತದೆ. ಇನ್ನೊಬ್ಬರನ್ನು ಅನ್ಯಾಯವಾಗಿ ಸೋಲಿಸಲು ಸುಲಭ ದಾರಿಯನ್ನು ತೆರೆದಿಡುತ್ತದೆ. ಆ ಪ್ರಯತ್ನ ನಿರಂತರ ನಡೆಯುತ್ತದೆ. ಭಾರತದ ಸಂವಿಧಾನದ ನ್ಯಾಯ, ಸಮಾನತೆ ಹಾಗೂ ಶೋಷಣೆ ಮುಕ್ತ ಸಮಾಜವನ್ನು ನಿರ್ಮಿಸಲು ಕಟಿಬದ್ದವಾಗಬೇಕು ಎಂದು ಸಾರುತ್ತದೆ. ಸುಪ್ರೀಂ ಕೋರ್ಟ್‌ನ ತೀರ್ಪಿನ ಉದ್ದೇಶವೂ ಇದೇ ಆಗಿದೆ. ಆದರೆ ಆ ದಾರಿಯಲ್ಲಿ ನಡೆಯುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆ, ಆಡಳಿತ ವರ್ಗಕ್ಕೆ ಇರುತ್ತದೆ. ಈ ಅಂಶವನ್ನು ನಾವು ನೆನಪಿಸಿಕೊಳ್ಳುತ್ತಾ, ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪು ಕುಟುಂಬ ವ್ಯವಸ್ಥೆಯನ್ನು ಮತ್ತೆ ಹಳಿಗೆ ತರಬಹುದೆ? ಅಥವಾ ಬೇರೊಂದು ರೀತಿಯ ಬದಲಾವಣೆಗೆ ಕಾರಣವಾಗಬಹುದೆ? ಅಥವಾ ಅದನ್ನು ಕಾಲವೇ ನಿರ್ಣಯಿಸುತ್ತದೆಯೇ? ಈಗ ನೀಡುವ ಉತ್ತರ ಅಪೂರ್ಣವಾಗಬಹುದು. ಕಾದು ನೋಡೋಣ.
– ನವನೀತ ಡಿ ಹಿಂಗಾಣಿ