Advertisement

ಆಳ್ವಾಸ್ ನಲ್ಲಿ ವಿಭಾಗೀಯ ಮಟ್ಟದ ವಿಜ್ಞಾನ ತಂತ್ರಜ್ಞಾನ ಮೇಳ

02:07 PM Nov 05, 2017 | |

ಮೂಡಬಿದಿರೆ: ಆಳ್ವಾಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಜರಗಿದ ವಿಭಾಗೀಯ ಮಟ್ಟದ ವಿಜ್ಞಾನ ತಂತ್ರಜ್ಞಾನ ಮೇಳ – ಇನ್‌ಸೆಫ್‌ ರೀಜನಲ್‌ ಫೇರ್‌ 2017- 18 ನಾಳಿನ ಸಂಭಾವ್ಯ ವಿಜ್ಞಾನಿಗಳನ್ನು ಸಂಶೋಧಕರನ್ನು ಪರಿಚಯಿಸಿದಂತಾಯಿತು. ಸುಮಾರು 45 ಪ್ರವೇಶಿಕೆಗಳು ಸ್ಪರ್ಧಾಕಣದಲ್ಲಿದ್ದು, ಆಸಕ್ತರನ್ನು ಸೆಳೆದವು.

Advertisement

ನ್ಯಾಚುರಲ್‌ ಆ್ಯಂಟಿ ಬಯೋಟಿಕ್‌
ನಮ್ಮ ನಡುವಿನ ತುಳಸಿ, ಕಹಿಬೇವು, ಲಾವಂಚ, ಲವಂಗ, ನುಗ್ಗೆ ಸೊಪ್ಪು ರಸ (ಇಂಥದ್ದೇ ಸೊಪ್ಪು ಸದೆಗಳಿಂದ ಸಿಗುವ
ರಸ) ಮತ್ತು ಝಿಂಕ್‌ ನೈಟ್ರೇಟ್‌ ಬಳಸಿ ಆರೋಗ್ಯ ಮತ್ತು ಆರ್ಥಿಕ ಲೆಕ್ಕಾಚಾರದಲ್ಲಿ ಜೀವವನ್ನು ಉಳಿಸಿಕೊಡುವ ಮಹತ್ತರವಾದ ಸಂಶೋಧನೆಗೆ ಮಂಗಳೂರು ಯೇನೆಪೊಯ ಶಾಲೆಯ ವಿದ್ಯಾರ್ಥಿನಿ ಮಾನ್‌ಶಾ ಅಶ್ರಫ್‌ ನಾಂದಿ ಹಾಡಿದ್ದಾರೆ. ಇದುವೇ ನ್ಯಾಚುರಲ್‌ ಆಂಟಿ ಬಯೋಟಿಕ್‌! ಈ ಸಂಶೋಧನೆ ಎಲ್ಲರ ಗಮನ ಸೆಳೆಯಿತು.

ಸಿಮೆಂಟ್‌ ಬದಲು ರಸ ಮತ್ತು ಮಣ್ಣಿನ ಮಿಶ್ರಣ
ಸುಬ್ರಹ್ಮಣ್ಯದ ಕುಮಾರಸ್ವಾಮಿ ಶಾಲೆಯ ಸಹನಾ ಮತ್ತು ಸಮೀಕ್ಷಾ ಅವರು ಗುಳೆಮಾವಿನ ಕೆತ್ತೆಯ ರಸ, ಬೆಲ್ಲ, ಸುಣ್ಣ, ಆವೆಮಣ್ಣು ಬಳಸಿ ಮಾಡಿದ ವಸ್ತು ಸಿಮೆಂಟ್‌ನಷ್ಟೇ ಗಟ್ಟಿ. ಇದನ್ನು ಬಳಸಿ ಬಳ್ಪ ದೇವಸ್ಥಾನವನ್ನು ನಿರ್ಮಿಸಲಾಗಿದೆ.

ಪರಿಸರ ಸ್ನೇಹಿ, ವಾತಾವರಣವನ್ನು ತಂಪಾಗಿರಿಸಬಲ್ಲ ಈ ಮಿಶ್ರಣದ ಬಗ್ಗೆ ವೀಕ್ಷಕರು ಕೇಳಿದ ಪ್ರಶ್ನೆ- ಗುಳಮಾವು ಮುಗಿದು ಹೋದರೆ ಏನು ಮಾಡೋದು?

ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ಅವಳಿ ಸಹೋದರಿಯರಾದ ಕುಂಕುಮ ಮತ್ತು ಚಂದನ ಅವರು ಸರ್ಪಗಂಧಿ ಬೇರು, ಮದ್ಯಸಾರ ಬಳಸಿ ಮಾಡಿದ ಸಾವಯವ ಟಿಂಕ್ಚರ್‌, ಪುತ್ತೂರು ಸುದಾನ ಶಾಲೆಯ ಲಹರಿ ಸೆಗಣಿ ಒಣಗಿಸಿ ಮಾಡಿದ ವಿಭೂತಿ, ನೆಕ್ಕಿ ಎಲೆ, ಬಳಸಿ ಬಿತ್ತನೆ ಬೀಜವನ್ನು ಸುದೀರ್ಘ‌ಕಾಲ ಸಂರಕ್ಷಿಸಿಡುವ ವಿಧಾನ, ಇದೇ ಶಾಲೆಯ ಚಿರಾಗ್‌ ನುಗ್ಗೆ ಎಲೆಯ ರಸ ಬಳಸಿ ತಯಾರಿಸಿದ , ಉಳುಕು, ಗಂಟು ನೋವು, ಗಾಯಗಳಿಗೆ ರಾಮಬಾಣವಾಗಬಲ್ಲ ಎಣ್ಣೆ, ಮುಲಾಮು, ತುಷಾರ ಮತ್ತು ಆಕಾಂಕ್ಷ ತಯಾರಿಸಿದ ಹಾಡೆಬಳ್ಳಿಯ ರಸದ ಬಹುಮುಖೀ ಪ್ರಯೋಗಗಳು, ಬಂಟ್ವಾಳ ಮೊಡಂಕಾಪುವಿನ ಸಹನಾ ಮತ್ತು ಡೀಲಿಯಾ ರೂಪಿಸಿದ ನೀರಿನ ಉಳಿತಾಯ ಸಾಧಿಸುವ ಅಡ್ವಾನ್ಸ್‌ ಡ್‌ ಎಲೆಕ್ಟ್ರಾನಿಕ್‌ ವಾಟರ್‌ ಟ್ಯಾಪ್‌, ಪುತ್ತೂರು ವಿವೇಕಾನಂದ ಆಂ.ಮಾ. ಶಾಲೆಯ ರಾಕೇಶ್‌ ಕೃಷ್ಣ ಅವರು ಬೀಜ ಬಿತ್ತನೆಯ ಪುಟ್ಟ ಯಂತ್ರೋಪಕರಣದ ಮಾದರಿ ಪ್ರದರ್ಶಿಸಿದರು.

Advertisement

ಆಳ್ವಾಸ್‌ನ ರಾಘವೇಂದ್ರ ಮತ್ತು ತುಷಾರ್‌ ಬಾಳೆದಿಂಡಿನ ರಸ, ತೆಂಗಿನ ಎಣ್ಣೆ/ ಹರಳೆಣ್ಣೆ ಬಳಸಿ ಮಾಡಿದ ಸುಟ್ಟಗಾಯಗಳಿಗೆ ಮುಲಾಮು ತಯಾರಿಸುವ ವಿಧಾನ, ಆದ್ಯ ಸುಲೋಚನಾ ಮುಳಿಯ ಮತ್ತು ಆದ್ಯ ಇಶಾ ಮುಳಿಯ ಅವರು ಕಹಿಬೇವು, ಯೂರಿಯಾ ಮತ್ತು ಸೆಗಣಿ ಬಳಸಿ (2:1:4) ಮಾಡಿದ ಸಾವಯವ ಗೊಬ್ಬರ, ಆಳ್ವಾಸ್‌ನ ಗಾಯತ್ರಿ ಅವರು ಲಾವಂಚ ಸೊಪ್ಪಿನ ರಸ, ತೆಂಗಿನೆಣ್ಣೆ, ಮೇಣ ಬಳಸಿ ಮಾಡಿದ ಪರಿಸರ ಸ್ನೇಹಿ ಸೊಳ್ಳೆ ನಿವಾರಕ, ಬಿಂಬುಳಿ, ನೊರೆಕಾಯಿ, ಕಾರೆಕಾಯಿ ಬಳಸಿ ಮಾಡಿದ ವಸ್ತು ಪರಿಣಾಮಕಾರಿ ಸ್ಟೈನ್‌ ರಿಮೂವಲ್‌ ತಯಾರಿಸಿದ್ದು ಉಪ್ಪಿನಂಗಡಿ ಇಂದ್ರಪ್ರಸ್ಥ ಶಾಲೆಯ ಎ.ಸಿ. ಅನಿಕೇತ್‌ ಕುಮಾರ್‌ ಮತ್ತು ರಾಮಚಂದ್ರ ವಿದ್ಯಾಸಾಗರ. ಅಡಿಕೆ ಹಾಳೆ, ಹಿಂಗಾರದ ಹಾಳೆ ಬಳಸಿ ಬರೇ 3 ರೂ. ವೆಚ್ಚದಲ್ಲಿ ತಯಾರಿಸಬಹುದಾದ ಪೆನ್‌ ರೂಪಿಸಿ ಉಪಯೋಗಿಸಿ ಬಿಸಾಡಿ ದಾಗ ಅದರೊಳಗಿನ ಬೀಜ ಮೊಳೆತು ಸಸಿಯಾಗುವ ಚಿಂತನೆಯನ್ನು ಉಪ್ಪಿನಂಗಡಿ ಇಂದ್ರಪ್ರಸ್ಥದ ಶ್ರೀವತ್ಸ ಈ ಸ್ಪರ್ಧಾಕಣದಲ್ಲಿ ವೆಚ್ಚದ ಅಂಕಿ ಅಂಶ ಸಹಿತ ನಿರೂಪಿಸಿದ್ದು, ತನಗೆ ಪೂರ್ಣ ನೈಸರ್ಗಿಕವಾಗಿ ಪೆನ್‌ ತಯಾರಿಸುವ ಯೋಚನೆ ಇದೆ ಎಂದು ಹೇಳಿದ್ದಾರೆ.

ಪುತ್ತೂರು ಸೈಂಟ್‌ ಫಿಲೋಮಿನಾದ ಅನುಷಾ ಅಡಿಕೆ ಹಾಳೆ ಸಂಸ್ಕರಿಸಿ ಮಾಡಿದ, 500 ಡಿಗ್ರಿ ತಾಪಮಾನ ತಡೆದಿಟ್ಟುಕೊಳ್ಳಬಲ್ಲ, ಕಾರ್ಡ್‌ ಬೋರ್ಡ್‌ ನಂಥ ಹಾಳೆಯನ್ನು ತಯಾರಿಸುವ ವಿಧಾನವನ್ನು ವಿವರಿಸಿ ಉತ್ಪನ್ನವನ್ನು ಪ್ರದರ್ಶಿಸಿದರು.

ಬಾಳೆದಿಂಡನ್ನು ಬಳಸಿ ನೀರಿನ ಗಡಸುತನವನ್ನು ಹೋಗಲಾಡಿಸಬಹುದೆಂಬುದನ್ನು ಉಪ್ಪಿನಂಗಡಿ ಇಂದ್ರಪ್ರಸ್ಥ ಆಂ.ಮಾ. ಶಾಲೆಯ ಜಸೀರಾ, ಅನ್ಸಿಲ್ಲಾ ತಿಳಿಸಿದರು. 

ಪೆಟ್ರೋಲ್‌ ವೆಚ್ಚ ಕಡಿತಗೊಳಿಸುವ ಹಾಗೂ ವಾಯು ಮಾಲಿನ್ಯ ತಡೆಗಟ್ಟುವ ದಿಸೆಯಲ್ಲಿ ಆಳ್ವಾಸ್‌ ಕನ್ನಡ ಮಾಧ್ಯಮ ಶಾಲೆಯ ಪ್ರತೀಕ್‌ ಮತ್ತು ಅಮಿತ್‌ ಅವರ ಲೀಥಿಯಂ ಬಳಸಿ ಬೈಕ್‌ ಓಡಿಸುವ ತಂತ್ರಜ್ಞಾನ ಕುತೂಹಲ ಮೂಡಿಸಿತು.

ಧನಂಜಯ ಮೂಡಬಿದಿರೆ 

Advertisement

Udayavani is now on Telegram. Click here to join our channel and stay updated with the latest news.

Next