ಕೊಪ್ಪಳ: ಬಿಜೆಪಿ ಜಾತಿ-ಧರ್ಮದ ಹೆಸರಲ್ಲಿ ಜನರನ್ನು ಒಡೆಯುವ ಕೆಲಸ ಮಾಡುತ್ತಿದೆ. ಇದರಿಂದ ದೇಶದ ಜನತೆ ಜಾಗೃತರಾಗಬೇಕು ಎಂದು ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಸಂತೋಷ ಲಾಡ್ ಹೇಳಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಭಾರತ ಐಕ್ಯತಾ ಯಾತ್ರೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ದೇಶಾದ್ಯಂತ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಭಾರತ ಜೋಡೊ ಯಾತ್ರೆ ನಡೆಯುತ್ತಿದೆ. ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ರಾಹುಲ್ ಗಾಂಧಿ ಅವರ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನತೆಯನ್ನು ಕರೆತರುವಂತೆ ಮನವಿ ಮಾಡಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಅದಾನಿ, ಅಂಬಾನಿಯಂತವರೇ ಶ್ರೀಮಂತರಾಗುತ್ತಿದ್ದಾರೆ. ಕೇವಲ ಮೂರು ವರ್ಷಗಳಲ್ಲಿ 8 ಬಿಲಿಯನ್ ಇದ್ದಿದ್ದ ಅದಾನಿ ಆಸ್ತಿ 141 ಬಿಲಿಯನ್ ಆಗಿದೆ. ಅಂದರೆ 10 ಲಕ್ಷ ಕೋಟಿ ರೂ. ಆಗಿದೆ. ದೇಶದಲ್ಲಿ ನೋಟು ರದ್ದತಿ ಮೂಲಕ ಮೋದಿ ಅವರು ಆರ್ಥಿಕ ಸ್ಥಿತಿಯ ಮೇಲೆ ಹೊಡೆತ ನೀಡಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿ, ಬಿಜೆಪಿ ಜಾತಿ, ಯುವಕರು ಜಾಗೃತರಾಗಿ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು. ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರದಿಂದ ಭಾರತ ಛಿದ್ರವಾಗುವಂತೆ ಮಾಡಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾರತ ಐಕ್ಯತಾ ಯಾತ್ರೆ ಹಮ್ಮಿಕೊಂಡಿದ್ದಾರೆ. ಇದಕ್ಕೆ ದೇಶವ್ಯಾಪಿ ಭರ್ಜರಿ ಬೆಂಬಲ ಸಿಗುತ್ತಿದೆ. ದೇಶದ ಐಕ್ಯತೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಮಾರು 3875 ಕಿ.ಮೀ. ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಆರು ತಿಂಗಳ ಕಾಲ ಯಾತ್ರೆ ನಡೆಯಲಿದೆ. ಬಳ್ಳಾರಿಗೆ ಆಗಮಿಸುವ ಭಾರತ ಐಕತ್ಯಾ ಯಾತ್ರೆಯಲ್ಲಿ ಕೊಪ್ಪಳ ಜಿಲ್ಲೆಯಿಂದ 50 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ. ಪ್ರತಿನಿತ್ಯ ಪಾದಯಾತ್ರೆಯಲ್ಲಿ 25 ಸಾವಿರಕ್ಕೂ ಅಧಿಕ ಜನರು ಭಾಗವಹಿಸುತ್ತಾರೆ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಜನರು ಪರಿತಪಿಸುವಂತೆ ಆಗಿದೆ ಎಂದು ಆರೋಪಿಸಿದರು.
ಪಕ್ಷದ ಹಿರಿಯ ಮುಖಂಡರಾದ ಶಾಂತಣ್ಣ ಮುದಗಲ್, ಕೆ. ಬಸವರಾಜ ಹಿಟ್ನಾಳ, ಎಸ್.ಬಿ. ನಾಗರಳ್ಳಿ, ಕೆ.ಎಂ. ಸೈಯ್ಯದ್, ಗೂಳಪ್ಪ ಹಲಿಗೇರಿ, ಇಂದಿರಾ ಭಾವಿಕಟ್ಟಿ, ಅಮ್ಜದ್ ಪಟೇಲ್, ಎಚ್.ಎಂ. ಮುಲ್ಲಾ, ಕೃಷ್ಣಾರಡ್ಡಿ ಗಲಬಿ, ಕಾಟನ್‌ಪಾಶಾ, ಶೈಲಜಾ ಹಿರೇಮಠ, ಜ್ಯೋತಿ ಗೊಂಡಬಾಳ, ಸಾವಿತ್ರಿ ಗೋರಂಟಿ, ರವಿ ಕುರಗೋಡ ಸೇರಿದಂತೆ ಇತರರಿದ್ದರು. ಈ ವೇಳೆ ಬಹದ್ದೂರುಬಂಡಿ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಕಾರ್ಯಕರ್ತರು ಬಿಜೆಪಿ ಮತ್ತು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.