ಹೊಳೆನರಸೀಪುರ: ಸಹಕಾರ ಚಳವಳಿಗಳು ಯಶಸ್ವಿ ಕಾಣದೆ ಹೋಗಿದ್ದರಿಂದ ಬೃಹತ್ ಕೈಗಾರಿಕೆಗಳು ಖಾಸಗಿ ಒಡೆತ ನಕ್ಕೆ ಹೋಗುತ್ತಿದೆ ಎಂದು ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು.
ತಾಲೂಕಿನ ದೊಡ್ಡಕಾಡನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಹಳ್ಳಿ ಮೈಸೂರು ಹೋಬಳಿ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ ಷೇರುದಾರರಿಗೆ ಡಿವಿಡೆಂಡ್ ವಿತರಿಸಿ ಮಾತನಾಡಿದರು.
ಜಿಲ್ಲೆಯ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ 1973ರಲ್ಲಿ ಅಸ್ತಿಭಾರ ಹಾಕಲಾಯಿತಾದರೂ ಸಹ 1983 ರಲ್ಲಿ ಕಬ್ಬು ಅರೆಯುವ ಕೆಲಸ ಆರಂಭವಾಯಿತು. ಆದರೆ ನಂತರದ ದಿನಗಳಲ್ಲಿ ಚುನಾಯಿತ ಮಂಡಳಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದ ಕಾರಣ ಲಾಭದಲ್ಲಿರ ಬೇಕಾದ ಕಾರ್ಖಾನೆ ಚಾಮುಂಡೇಶ್ವರಿ ಶುಗರ್‌ಗೆ 30 ವರ್ಷಗಳ ಗುತ್ತಿಗೆ ನೀಡ ಬೇಕಾಯಿತು ಎಂದರು.
ಕಾರ್ಖಾನೆ ಕಬ್ಬು ಅರೆಯುವುದನ್ನು ದುಪ್ಪಟು ಮಾಡುವ ಸಲುವಾಗಿ ಕಳೆದ ಐದು ವರ್ಷಗಳ ಹಿಂದೆ ಖಾಸಗಿ ಮಾಲೀಕರು ಕಾರ್ಖಾನೆಯನ್ನು ಅಭಿವೃದ್ಧಿಪಡಿಸುವ ನೆಪವೊಡ್ಡಿ ಕಬ್ಬು ಅರೆಯುವುದನ್ನು ನಿಲ್ಲಿಸಿ ಅಭಿವೃದ್ಧಿಯತ್ತಾ ಗಮನ ಹರಿಸಿದರು. ಆದರೆ ಅಭಿವೃದ್ಧಿ ಒಂದೆರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ಭರವಸೆ ನೀಡಿದ್ದರಾದರೂ ಸಹ ಪೂರ್ಣಗೊಳ್ಳದೆ ರೈತರು ತಾವು ಬೆಳೆದ ಕಬ್ಬನ್ನು ಬೇರೆಡೆಗೆ ಸಾಗಿಸಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಮುತ್ತಿಗೆ ರಾಜೇಗೌಡ, ತಾಪಂ ಉಪಾಧ್ಯಕ್ಷ ಬಿ.ಎಸ್.ಶಿವಣ್ಣ, ಇಒ ಕೆ.ಯೋಗೇಶ್, ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಸಿ.ಜೆ.ಪ್ರಭು, ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಎಸ್. ಪುಟ್ಟಸೋಮಪ್ಪ ಇದ್ದರು.